ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುನಾಥ್ ಅಮಾನತ್ತಿಗೆ ಒಕ್ಕೊರಲ ಒತ್ತಾಯ
ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ಅಮಾನತ್ತು ಮಾಡುವಂತೆ ಅದ್ಯಕ್ಷ, ಉಪಾಧ್ಯಕ್ಷೆ ಹಾಗೂ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದ ಘಟನೆ ಬುಧವಾರ ಪಂಚಾಯ್ತಿ ಕಛೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ 2 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಚುನಾಯಿತ ಸದಸ್ಯರ ಸಾಮಾನ್ಯ ಸಭೆಯನ್ನು ಅಧ್ಯಕ್ಷ ಕೆ.ಎಂ.ಎಲ್ ಕಿರಣ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕರೆಯಲಾಯಿತ್ತು. ಸಭೆಯ ಆರಂಭದಿಂದ ಕೊನೆಯವರೆವಿಗೂ ಉಡಾಫೆ ಉತ್ತರ ಕೊಡುವ, ಕರ್ತವ್ಯ ಲೋಪ ಎಸಗಿರುವ, ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ವಿಫಲರಾಗಿರುವ ಮುಖ್ಯಾಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಸಭೆಯಲ್ಲಿ ನಿರ್ಣಯಿಸಿ ಮೇಲಧಿಕಾರಿಗಳಿಗೆ ರವಾನಿಸುವಂತೆ ಒತ್ತಾಯಿಸಿದರು. ಬಹುಮುಖ್ಯವಾಗಿ ಅಧ್ಯಕ್ಷ ಕಿರಣ್ ಕುಮಾರ್ ಅವರೇ ಮುಖ್ಯಾಧಿಕಾರಿಗಳ ವಿರುದ್ಧ ಆರೋಪ ಮಾಡಿದರಲ್ಲದೆ ಅನೇಕ ಬಾರಿ ಏರಿದ ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಸಹ ನಡೆಯಿತು.
ಆರಂಭದಲ್ಲೇ ಅಕ್ಟೋಬರ್ ಮಾಹೆಯ ಜಮೆಖರ್ಚು ಅಂಗೀಕರಿಸುವ ವಿಚಾರದಲ್ಲಿ ಯಗಚಿ ಟ್ರೇರ‍್ಸ್ನ 18,260 ರೂ. ಬಿಲ್ ಯಾವ ಉದ್ದೇಶಕ್ಕೆ ವೆಚ್ಚ ಮಾಡಲಾಗಿದೆ ಎಂದು ಸದಸ್ಯ ಜಹೀರ್ ಸಾಬ್ ಹಾಗೂ ದಸ್ತುಗಿರಿಸಾಬ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಮುಖ್ಯಾಧಿಕಾರಿಯಾದಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಸಿಬ್ಬಂದಿ ವರ್ಗದವರೆಲ್ಲರೂ ತಡವರಿಸಿದರು. ಯಾರೊಬ್ಬರೂ ಸರಿಯಾದ ಮಾಹಿತಿ ನೀಡದಿದ್ದಾಗ ಬಿಲ್ ತರಿಸಿದರೆ ಗೊತ್ತಾಗುತ್ತದೆಂದು ಬಿಲ್ ತರಲು ಅಧ್ಯಕ್ಷರು ಸೂಚಿಸಿದರೆ. ಅಚ್ಚರಿ ಎನ್ನುವಂತೆ ಮೊದಲು ಬಿಲ್ ಕಲೆಕ್ಟರ್ ಹೋದರು, ಹತ್ತದಿನೈದು ನಿಮಿಷಗಳಾದರೂ ಬಾರದಿದ್ದಾಗ ಪರಿಸರ ಅಧಿಕಾರಿ ಹೋದರು, ನಂತರ ಎಂಜಿನಿಯರ್, ಕೊನೆಗೆ ಮುಖ್ಯಾಧಿಕಾರಿಗಳೂ ಹೋದರು. ಹೀಗೆ ಸಭೆಯಲ್ಲಿದ್ದ ಪಪಂ ಸಿಬ್ಬಂದಿಗಳೆಲ್ಲರೂ ಹೋದರೂ ಬಿಲ್ ಪ್ರತಿ ತರಲಿಲ್ಲ. ಹೀಗೆ ಒಂದೂವರೆ ಗಂಟೆ ಬಿಲ್ ಹುಡುಕಲು ಸಮಯ ವ್ಯರ್ಥ ಮಾಡಿದರು.
ಅಂತಿಮವಾಗಿ ಅಧ್ಯಕ್ಷರು, ಸದಸ್ಯರು ಏರಿದ ಧ್ವನಿಯಲ್ಲಿ ಬೇಗ ಬರುವಂತೆ ಗಲಾಟೆ ಮಾಡಲಾಗಿ ಮುಖ್ಯಾಧಿಕಾರಿಗಳು ಓಡೋಡಿ ಬಂದು ಇದೊಂದು ಬಿಲ್ ಪ್ರತಿ ಮಿಸ್ ಆಗಿದೆ. ಸಮಯವಕಾಶ ಕೊಟ್ಟರೆ ಹುಡುಕಿ ಕೊಡುತ್ತೇನೆ ಎಂದರಲ್ಲದೆ ನಾವೇನು ದುಡ್ಡನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ. ನ್ಯಾಯಯುತವಾಗಿ ಖರ್ಚು ಮಾಡಿದ್ದೇನೆ ಎಂದರು. ಇದರಿಂದ ಸದಸ್ಯರು ಆಕ್ರೋಶಗೊಂಡು ಈ ರೀತಿಯ ಉಡಾಫೆ ಉತ್ತರ ಕೊಡುವ ಹಾಗೂ ಒಂದೂವರೆ ಗಂಟೆ ಸಭೆಯಿಂದ ಹೊರಹೋಗಿ ಸದಸ್ಯರ ಸಮಯ ವ್ಯರ್ಥ ಮಾಡಿದ್ದಾರೆ. ಅಲ್ಲದೆ ನಖಲಿ ಬಿಲ್ ಸೃಷ್ಠಿಗೆ ಸಮಯ ಕೇಳುತ್ತಿದ್ದು ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸದ ಮುಖ್ಯಾಧಿಕಾರಿಗಳನ್ನು ಅಮಾನತ್ತು ಮಾಡುವಂತೆಯೂ ಕಳೆದ ಎರಡ್ಮೂರು ವರ್ಷಗಳ ಲೆಕ್ಕಪತ್ರ ತನಿಖೆ ಮಾಡುವಂತೆಯೂ ಪಟ್ಟು ಹಿಡಿದು ರೆಜ್ಯೂಲೇಷನ್ ಬರೆಸಿದರು.
ನಂತರ ನವೆಂಬರ್ ಮಾಹೆಯ ಜಮೆಖರ್ಚು ಮಂಡಿಸುವಾಗ ಪಂಚಾಯ್ತಿ ಮಳಿಗೆಗಳ ಬಾಡಿಗೆ ಬಾಯ್ತು 10 ಸಾವಿರ ರೂ. ಜಮೆಯಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಯಾಗಿ ಸದಸ್ಯ ಎಸ್‌ಆರ್‌ಎಸ್ ದಯಾನಂದ್ ಅವರು ಅಕ್ಟೋಬರ್ ಮಾಹೆಯಲ್ಲಿ ಒಂದು ರೂಪಾಯಿ ಬಾಡಿಗೆ ಬಂದಿಲ್ಲ. ನವೆಂಬರ್ ಮಾಹೆಯಲ್ಲಿ 10 ಸಾವಿರ ರೂ. ಬಂದಿದೆ. ಪಂಚಾಯ್ತಿಯ 52 ವಾಣಿಜ್ಯ ಮಳಿಗೆಗಳಿದ್ದು ಇಷ್ಟು ಕಮ್ಮಿ ಬಾಡಿಕೆ ಏಕೆ ಕಟ್ಟಿಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿಬ್ಬಂದಿ ಪ್ರದೀಪ್ ಅವರು ಬಾಡಿಗೆದಾರರೇ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡುತ್ತಿದ್ದು ಒಬ್ಬೊಬ್ಬರು 3 ಸಾವಿರ ರೂಪಾಯಿಯಂತೆ ಕಟ್ಟುತ್ತಿದ್ದು ಬಾಕಿ ಉಳಿಸದಂತೆ ಅಡ್ವಾನ್ಸ್ ಬಾಡಿಕೆ ಹಾಕುತ್ತಿದ್ದಾರೆ ಎಂದು ಉತ್ತರಿಸಿದರು. ಇದಕ್ಕೆ ಪಪಂ ಸದಸ್ಯ ಸಿದ್ದಿಕ್ ಹಾಗೂ ಜಬೇರ್ ಅವರು ಗ್ರಾಮ ಪಂಚಾಯ್ತಿ ಇದ್ದಾಗ 1 ಸಾವಿರ ರೂ. ಬಾಡಿಗೆ ಕಟ್ಟುತ್ತಿದ್ದರು. ಈಗ ಯಾವ ಮಾನದಂಡದಲ್ಲಿ 3 ಸಾವಿರ ರೂ.ಕಟ್ಟಿಸಿಕೊಳ್ಳುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲದೆ ಮಳಿಗೆಗಳ ಹರಾಜು ವಿಚಾರ ನ್ಯಾಯಾಲಯದಿದ್ದು ಯಾವ ಆದೇಶದ ಮೇರೆಗೆ ಬಾಡಿಗೆ ಕಟ್ಟಿಸಿಕೊಳ್ಳುತ್ತಿದ್ದೀರಿ ಎಂದು ಅಧ್ಯಕ್ಷ ಕೆ.ಎಂ.ಎಲ್ ಕಿರಣ್ ಸಹ ಪ್ರಶ್ನೆ ಎತ್ತಿದರು. ಇದಕ್ಕೆ ಅನೇಕ ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಮುಖ್ಯಾಧಿಕಾರಿಗಳು ನಾವು ಹೇಳಿಲ್ಲ ಅವರೇ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಕಟ್ಟುತ್ತಿದ್ದಾರೆ. ಅಲ್ಲದೆ ಸ್ವಯಂ ಘೋಷಿತ ತೆರಿಗೆ ಪಾವತಿಗೆ ಅವಕಾಶವಿದ್ದು ಮನೆ ಕಂದಾಯ ಹಾಗೂ ನೀರಿನ ಕಂದಾಯವನ್ನು ಹೇಗೆ ಮನೆ ಮಾಲೀಕರೇ ಸ್ವಯಂ ಘೋಷಣೆ ಮಾಡಿ ಕಟ್ಟಿಕೊಂಡಂತೆ ಬಾಡಿಗೆಯನ್ನೂ ಸಹ ಕಟ್ಟುತ್ತಿದ್ದಾರೆ ಎಂದು ಸಭೆಗೆ ಲ್ಯಾಪ್ ಟಾಪ್ ತರಿಸಿ ಆನ್‌ಲೈನ್‌ನಲ್ಲಿ ಗ್ರಾಹಕರು ನೇರವಾಗಿ ಹಣ ಪಾವತಿ ಮಾಡುವ ಪ್ರಕ್ರಿಯೆ ತೋರಿಸಿದರು. ಇದರಿಂದ ಸಮಾದಾನ ಆಗದ ಸದಸ್ಯರು ನೀವೇ ಹೇಳಿ ಬಾಡಿಗೆ ಹೆಚ್ಚು ಮಾಡಿ ಹಣ ಕಟ್ಟಿಸಿಕೊಂಡು ಸದಸ್ಯರ ಹಕ್ಕಿಗೆ ಚ್ಯುತಿ ತಂದಿದ್ದೀರಿ. ಹಾಗಾಗಿ ಮುಖ್ಯಾಧಿಕಾರಿಗಳನ್ನು ಅಮಾನತ್ತು ಮಾಡುವುದು ಸೂಕ್ತ ಎಂದು ಸದಸ್ಯರು ಅನುಮೋದಿಸಿದರು.
ಸದಸ್ಯೆ ರತ್ನಮ್ಮ ಅವರು ಡಿಸಿ ಅಪ್ರೋವಲ್ ಇಲ್ಲದ ನಿವೇಶನವನ್ನು ಖಾತೆ ಮಾಡುವುದಿಲ್ಲ ಎನ್ನುವವರು 2018-19 ನೇ ಸಾಲಿನಲ್ಲಿ ರಂಗಯ್ಯ ಎಂಬುವವರ ಖಾತೆ ಮಾಡಿಕೊಟ್ಟಿದ್ದಾರೆ ಎಂದು ದಾಖಲೆ ಸಹಿತ ಸಭೆಯ ಗಮನಕ್ಕೆ ತಂದರು. ಇದಕ್ಕೆ ಅನೇಕ ಸದಸ್ಯರು ಮದ್ಯವರ್ತಿಗಳ ಮೂಲಕ ಹಣ ಪಡೆದು ಖಾತೆ ಮಾಡಿಕೊಡುತ್ತಿದ್ದು ಸದಸ್ಯರು ಕೇಳಿದರೆ ಕಾನೂನುಪಾಠ ಮಾಡುತ್ತಾರೆ ಎಂದು ಆರೋಪಿಸಿದರು. ಇದಕ್ಕೆ 2015-16 ನೇ ಸಾಲಿನಲ್ಲಿ ಖಾತೆಯಾಗಿದ್ದು ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಮುಖ್ಯಾಧಿಕಾರಿಗಳು ಪ್ರತ್ಯುತ್ತರ ನೀಡಿದರು. ಆಗ ಅಧ್ಯಕ್ಷರು 2015 ರ ಸಾಲಿನಲ್ಲಿದ್ದ ಪಿಡಿಓ ಸಿದ್ಧರಾಮಯ್ಯ ಅವರನ್ನು ಸಭೆ ಕರೆದು ಸಮಜಾಯಿಷಿ ಕೇಳಿದರು. ಆಗ ಸಿದ್ಧರಾಮಯ್ಯ ಅವರು ಪಂಚಾಯ್ತಿಯಲ್ಲಿ ನನ್ನ ಸಹಿಯನ್ನು ಪೋರ್ಜರಿ ಮಾಡಿ ಅರವತ್ತಕ್ಕೂ ಹೆಚ್ಚು ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಸ್ಪೋಟಕ ಮಾಹಿತಿ ನೀಡಿದಾಗ ಸಭೆ ಅಲ್ಲೋಲ ಕಲ್ಲೊಲವಾಯಿತು. ಇದೂವರೆವಿಗೂ ಸಭೆಯಲ್ಲಿದ್ದ ಬಿಲ್ ಕಲೆಕ್ಟರ್‌ಗಳಿಬ್ಬರೂ ಪೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾದರು.
ಈ ರೀತಿ ಪೋರ್ಜರಿ ಮಾಡಿ ನಕಲಿ ಖಾತೆ ಮಾಡಿರುವವ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಹೇಮಂತ್, ಗೀತಾಬಾಬು, ಹೇಮಂತ್, ಪ್ರಶ್ನಿಸಿದರು. ಅಲ್ಲದೆ ಇದರ ಹಿಂದೆ ನಿಮ್ಮ ಕೈವಾಡವಿದ್ದು ಲಕ್ಷಾಂತರ ರೂ. ಕೊಟ್ಟವರಿಗೆ ಹಿಂದಿನ ಪಿಡಿಓ ಸಹಿ ಪೋರ್ಜರಿ ಮಾಡಿ ಖಾತೆ ಮಾಡಿಕೊಡುತ್ತಿದ್ದೀರಿ ಎಂದು ಗಂಭೀರ ಆರೋಪ ಮಾಡಿದರು. ಎಂಆರ್ ಬುಕ್ ತನ್ನಿ ಎಂದು ಪಟ್ಟು ಹಿಡಿದರು. ಆದರೆ 2015-16 ನೇ ಸಾಲಿನ ಎಂಆರ್ ಬುಕ್ ಪಿಡಿಓ ನಮಗೆ ಹಸ್ತಾಂತರಿಸಿಲ್ಲ ಅಲ್ಲದೆ ಫೋರ್ಜರಿ ಮಾಡಿರುವ ಆರೋಪ ಮಾಡುತ್ತಿರುವವರು ಕೇಸು ದಾಖಲಿಸಬೇಕೆ ವಿನಃ ನಾವಲ್ಲ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು. ಇದಕ್ಕೆ ರಾಜು ಬಡಗಿ ಅವರು ಕಛೇರಿ ದಾಖಲೆಗಳನ್ನು ಕಳೆದಿರುವವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಒತ್ತಾಯಿಸಿದರು. ಸಭೆಯ ಸದಸ್ಯರೆಲ್ಲರೂ ಮುಖ್ಯಾಧಿಕಾರಿ ಅಮಾನತ್ತು ಆಗಲೇಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದರು.