
ತುಮಕೂರು : ಫೆಬ್ರವರಿ 07ರ ಸೋಮವಾರ ದಂದು ರಾಯಚೂರು ಜಿಲ್ಲಾ ನ್ಯಾಯಾಲಯದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ಸಂವಿಧಾನ ವಿರೋಧಿ ನಡವಳಿಕೆಯನ್ನು ಖಂಡಿಸಿ, ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ,ಸಂವಿಧಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ನೂರಾರು ದಲಿತ,ಪ್ರಗತಿಪರ,ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ನಗರದ ಎಂ.ಜಿ.ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಸಮುದಾಯಗಳ ಮುಖಂಡರು,ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ನೆಡವಳಿಕೆ ನ್ಯಾಯ ಸಮ್ಮತವಲ್ಲ. ಸರಕಾರವೇ ಗಣರಾಜೋತ್ಸವ ದಿನದಂದು ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸುವಂತೆ ಆದೇಶ ನೀಡಿದ್ದಾಗ್ಯೂ, ಸರಕಾರದ ಒಂದು ಆಂಗವಾಗಿರುವ ನ್ಯಾಯಾಂಗ ಇಲಾಖೆಯ ಹಿರಿಯ ನ್ಯಾಯಾಧೀಶರೊಬ್ಬರು,ಅಂಬೇಡ್ಕರ್ ಪೋಟೋ ತೆಗೆದರೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದ್ವಜಾರೋಹಣ ನಡೆಸುವುದಾಗಿ ಪಟ್ಟು ಹಿಡಿದು, ಆಯೋಜಕರು ಪೋಟೋ ತೆಗೆದ ನಂತರ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದನ್ನು ನೋಡಿದರೆ, ಇವರಿಗೆ ಅಂಬೇಡ್ಕರ್ ಅವರ ಮೇಲಿರುವುದು ಎಂತಹ ದ್ವೇಷ ಎಂಬುದು ತಿಳಿಯುತ್ತಿದೆ. ಇಂತಹ ಜಾತಿ ವಿರೋಧಿ ನ್ಯಾಯಾಧೀಶರು ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡಲು ಅನರ್ಹರು.ಹಾಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಫೆಬ್ರವರಿ 07ರ ಸೋಮವಾರ ಬೆಳಗ್ಗೆ 10-30 ಗಂಟೆಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಮುಖಂಡರು ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.