ಶಿರಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹೈಕಮಾಂಡ್ ಸೂಚನೆ : ಅಹಿಂದ ವರ್ಗದ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ : ಸಾಸಲು ಸತೀಶ್‌ಗೆ ಟಿಕೇಟ್ ನೀಡುವ ಭರವಸೆ
ಶಿರಾ : ಶಿರಾ ಕ್ಷೇತ್ರದಲ್ಲಿ 1.5 ಲಕ್ಷ ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಗೊಲ್ಲ ಸಮುದಾಯದ ಮುಖಂಡ ಹಾಗೂ ಹಾಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಾಸಲು ಸತೀಶ್‌ಗೆ ಕ್ಷೇತ್ರದಲ್ಲಿ ಸಂಘಟನೆ ಮಾಡುವಂತೆ ಸೂಚಿಸಿರುವುದು ಮಾಜಿ ಸಚಿವರಿಗೆ ಟಿಕೆಟ್ ಕೈತಪ್ಪುತ್ತಾ ಎಂಬ ಅನುಮಾನಗಳು ಕಾಂಗ್ರೆಸ್ ವಲಯ ಗಳಲ್ಲಿ ಕೇಳಿಬರುತ್ತಿದೆ.
2023ರ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದ್ದು ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿದೆ ಈಗಾಗಲೇ 2 ಬಾರಿ ಸೋಲು ಕಂಡಿರುವ ಮಾಜಿ ಸಚಿವ ಟಿಬಿ ಜಯಚಂದ್ರ ರವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ಪ್ರತಿಷ್ಠೆಯಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಕಳೆದ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಎಐಸಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜಿತ್ ವಾಲಾ ರಾಜ್ಯ ನಾಯಕರ ಮೇಲೆ ಕೆಂಗಣ್ಣು ಬೀರಿ ಯುವಕರಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಇದಕ್ಕೆ ಪುಷ್ಟೀಕರಿಸುವಂತೆ ಇದೀಗ ಶಿರಾದಲ್ಲಿ ಯುವ ಮುಖಂಡ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಾಸಲು ಸತೀಶ್ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ.
ಸಾಸಲು ಸತೀಶ್ ಅವರಿಗೆ ಶಿರಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಎಲ್ಲರ ವಿಶ್ವಾಸ ಗಳಿಸುವಂತೆ ಹೈಕಮಾಂಡ್ ಹೇಳಿದೆ ಎನ್ನಲಾಗಿದ್ದು, ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸಾಸಲು ಸತೀಶ್ ಅವರು ಹಿಂದುಳಿದ ವರ್ಗದ ಮುಖಂಡರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ. ಮಾಜಿ ಶಾಸಕ ಎಸ್ ಕೆ ದಾಸಪ್ಪ ಅವರ ಪುತ್ರ ರಂಗನಾಥ್ ಮತ್ತು ಮತ್ತೊಬ್ಬ ಹಿರಿಯ ಕಾಂಗ್ರೆಸ್ ಮುಖಂಡ ಎಸ್ ಕೆ ಸಿದ್ದಣ್ಣ ಅವರ ಪುತ್ರ ನವೀನ್ ಹಾಗೂ ಮತ್ತೊಬ್ಬ ಮುಖಂಡ ಮುರುಗಪ್ಪ ಗೌಡ ಹಾಗೂ ಬೋವಿ ಸಮಾಜದ ಮಾಜಿ ಜಿಪಂ ಸದಸ್ಯ ಶ್ರೀನಿವಾಸ್ ರವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಈ ಬಾರಿ ಶಿರಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಮತಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ನನಗೆ ಟಿಕೆಟ್ ನೀಡಲಿದ್ದು ತಾವೆಲ್ಲರೂ ನನ್ನ ಕೈ ಬಲಪಡಿಸುವಂತೆ ಮುಖಂಡರಲ್ಲಿ ಮಾತುಕತೆ ನಡೆಸಿದ್ದಾರೆ.
ಇದಲ್ಲದೆ 22 ಸಾವಿರ ಮುಸ್ಲಿಂ ಸಮುದಾಯದ ಮತ ಗಳಿದ್ದು ಇವು ಸಾಂಪ್ರದಾಯಿಕ ಕಾಂಗ್ರೆಸ್ ಮತಗಳಾಗಿವೆ ಮುಸ್ಲಿಂ ಮುಖಂಡರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಉಪ್ಕಾರ್ ಗ್ಯಾಸ್ ಮಾಲೀಕ ನಸ್ರುಲ್ಲಾ ಖಾನ್ ಭೇಟಿ ಮಾಡಿ ಬೆಂಬಲಿಸುವAತೆ ಮನವಿ ಮಾಡಿದ್ದರು ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಅಹಿಂದ ಮುಖಂಡರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತರುವುದಾದರೆ ನಾವು ಬೆಂಬಲಿಸುವುದಾಗಿ ಸಾಸಲು ಸತೀಶ್ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಮುಖಂಡರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಸಾಸಲು ಸತೀಶ್ ಕಾಂಗ್ರೆಸ್ ಹೈಕಮಾಂಡ್ ನನಗೆ ಶಿರಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಮುಖಂಡರ ವಿಶ್ವಾಸ ಗಳಿಸುವಂತೆ ಸೂಚಿಸಿದ್ದು ಈ ನಿಟ್ಟಿನಲ್ಲಿ ನಾನು ಶಿರಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಕ್ಷ ಸಂಘಟನೆ ಕೈಗೊಂಡಿದ್ದೇನೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಹಿಂದುಳಿದ ವರ್ಗದ ಅಭ್ಯರ್ಥಿ ಆದ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಈ ನಿಟ್ಟಿನಲ್ಲಿ ನಾನು ಹೈಕಮಾಂಡ್ ಆದೇಶವನ್ನಷ್ಟೇ ಪಾಲಿಸುತ್ತಿದ್ದೇನೆ, ಇದು ಮಾಜಿ ಸಚಿವರ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು. ಶಿರಾ ಕ್ಷೇತ್ರ ಬದಲಾವಣೆ ಬಯಸುತ್ತಿದ್ದು ಹಿಂದುಳಿದ ದಲಿತ ಅಲ್ಪಸಂಖ್ಯಾತ ಮತಗಳು ಕ್ರೂಡೀಕರಣವಾಗಲಿವೆ ಎಂದರು.