ಅಂಬೇಡ್ಕರ್‌ಗೆ ಅವಮಾನ ದೇಶಕ್ಕೆ ಅಪಮಾನ : ನ್ಯಾಯಾಧೀಶರನ್ನು ವಜಾಗೊಳಿಸಲು ನಿಟ್ಟೂರು ರಂಗಸ್ವಾಮಿ ಆಗ್ರಹ
ಗುಬ್ಬಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ತಡ ಮಾಡುತ್ತಿರುವ ಸರ್ಕಾರ ವಿರುದ್ದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ ಗುಬ್ಬಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣ ಬಳಿ ಹೆದ್ದಾರಿಯಲ್ಲಿ ನ್ಯಾಯಾಧೀಶರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿ ನಂತರ ತಾಲ್ಲೂಕು ಕಛೇರಿ ತಲುಪಿ ನ್ಯಾಯಾಧೀಶರ ವಿರುದ್ಧ ಘೋಷಣೆ ಕೂಗಿದರು. ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಅಪಮಾನಿಸಿದ ತಾಲ್ಲೂಕಿನ ಕೆಲ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಭೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಮಾನವತಾವಾದ ಜೊತೆಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ಪವಿತ್ರ ಗ್ರಂಥ ಸಂವಿಧಾನ ರಚಿಸಿಕೊಟ್ಟ ಮಹಾನ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಟ್ಟ ಸ್ಥಾನವನ್ನು ಅಲಂಕರಿಸಿ ಜಾತಿ ಪದ್ಧತಿ ಬಿಂಬಿಸುತ್ತಾ ಕೀಳು ಭಾವನೆ ತೋರಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಕೂಡಲೇ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಇವರು ವಿದ್ಯಾಭ್ಯಾಸ ಮಾಡಿದ ಕಾನೂನು ಬರೆದವರ ಬಗ್ಗೆ ತಿಳಿದೂ ಕೂಡಾ ಅವಮಾನ ಮಾಡಿದ ಈ ಘೋರ ಅಪರಾಧ ಇಡೀ ದೇಶವೇ ತಲೆ ತಗ್ಗಿಸುವಂತಹದು. ಆರೋಪಿ ನ್ಯಾಯಾಧೀಶರನ್ನು ಹುದ್ದೆಯಿಂದ ವಜಾಗೊಳಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ದಸಂಸ ತಾಲ್ಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ಗಣರಾಜ್ಯೋತ್ಸವ ಅಂದರೆ ಸಂವಿಧಾನ. ಸಾಮಾಜಿಕ ನ್ಯಾಯ ಮತ್ತು ಶೋಷಿತ ವರ್ಗಕ್ಕೆ ನೆರವಾದ ಅಂಬೇಡ್ಕರ್ ಅವರಿಗೆ ಅವಮಾನಿಸುವುದು ದೇಶ ದ್ರೋಹ ಕೆಲಸವೇ ಆಗಿದೆ. ಗೌರವಾನ್ವಿತ ಹುದ್ದೆ ಅಲಂಕರಿಸಿ ಹಾಳು ಜಾತಿ ಪದ್ಧತಿ ಮೆರೆದ ನ್ಯಾಯಾಧೀಶ ಪರ ಸರ್ಕಾರ ನಿಂತಿರುವುದು ಸರಿಯಲ್ಲ. ತಿಳಿಯದು. ಇಂತಹ ಕೃತ್ಯ ದೇಶದ ಪ್ರಜೆಗಳಿಗೆ ಮಾಡಿದ ಅವಮಾನ. ಆದರೂ ಕಾನೂನು ಮಂತ್ರಿ ಜಾತಿ ವ್ಯಾಮೋಹ ತೋರುತ್ತಿದ್ದಾರೆ ಎಂದು ಛೇಡಿಸಿ, ತಾಲ್ಲೂಕಿನ ಕಡಬ ನಾಡ ಕಚೇರಿ, ಜಿ.ಹೊಸಹಳ್ಳಿ ಮತ್ತು ಸಿ.ಎಸ್.ಪುರ ಗ್ರಾಪಂ ಕಚೇರಿಯಲ್ಲಿ ಸಹ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಈ ಅಧಿಕಾರಿಗಳಿಗೂ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಮುಖಂಡ ಕೊಡಿಯಾಲ ಮಹದೇವು ಮಾತನಾಡಿ ಅತೀ ಹೆಚ್ಚು ಪದವಿ ಪಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ದೇಶಕ್ಕೆ ಶಾಂತಿ ಬದುಕು ಕಟ್ಟಿಕೊಡುವ ಸಂವಿಧಾನ ರಚಿಸಿಕೊಟ್ಟರು. ಅವರ ಬರವಣಿಗೆಯಂತೆ ದೇಶದ ಅಡಳಿತ ಚುಕ್ಕಾಣಿ ನಡೆಯುವಾಗ ಇಂತಹ ನ್ಯಾಯಾಧೀಶರು ಅವರಿಗೆ ಅವಮಾನ ಮಾಡಿ ತಮ್ಮ ಕೀಳು ಭಾವನೆ ತೋರಿದ್ದಾರೆ. ಈ ದುಷ್ಕೃತ್ಯ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆ ತಂದಿದೆ. ನ್ಯಾಯಾಧೀಶರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ನಂತರ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಪತ್ರವನ್ನು ಉಪ ತಹಸೀಲ್ದಾರ್ ಶ್ರೀನಿವಾಸ್ ಅವರ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್, ಸಮಿತಿಯ ಮಾರನಹಳ್ಳಿ ಶಿವಯ್ಯ, ಜಿ.ವಿ.ಮಂಜುನಾಥ್, ಬಿ.ವಿ.ರತ್ನಕುಮಾರ್, ಮಂಜೇಶ್, ಕಲ್ಲೂರು ಗ್ರಾಪಂ ಅಧ್ಯಕ್ಷ ರವಿಕುಮಾರ್, ಇಡಗೂರು ಮಂಜುನಾಥ್, ಸಿ.ಎಸ್.ಪುರ ಬೆಟ್ಟಸ್ವಾಮಿ, ನಾರಾಯಣ್, ಸತೀಶ್, ಹರೀಶ್, ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.