ನ್ಯಾಯಾಧೀಶ ಮಲ್ಲಿಕಾರ್ಜುನಗೌಡರನ್ನು ಅಮಾನತು ಮಾಡಿ, ದೇಶದ್ರೋಹ ಪ್ರಕರಣ ದಾಖಲಿಸಿ : ಬಜಗೂರು ಮಂಜುನಾಥ್
ತಿಪಟೂರು : ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿದ ಸಂವಿಧಾನದ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದ್ದುಕೊಂಡು ಅದೇ ಸಂವಿಧಾನದ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿರುವುದನ್ನು ಸಹಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಎಪಿಎಂಸಿ ಸದಸ್ಯ ಹಾಗೂ ಛಲವಾದಿ ಮಹಾಸಭಾದ ತಾಲ್ಲೋಕು ಅಧ್ಯಕ್ಷ ಬಜಗೂರು ಮಂಜುನಾಥ್ ಹೇಳಿದರು.
ನಗರದಲ್ಲಿ ತಾ.ಜಯಕರ್ನಾಟಕ ಜನಪರ ವೇದಿಕೆಯಿಂದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ಮಾಡಿರುವ ಅಪಮಾನದ ವಿರುದ್ದ ಉಪವಿಭಾಗಾಧಿಕಾರಿ ಕಛೇರಿಯ ತಹಸೀಲ್ದಾರ್ ಪರಮೇಶ್ವರಯ್ಯರವರ ಮೂಲಕ ಘನತೆವೆತ್ತ ರಾಜ್ಯಪಾಲರಿಗೆ ಜಿಲ್ಲಾ ನ್ಯಾಯಾಧೀಶರನ್ನು ಅಮಾನತು ಮಾಡಿ ಗಡೀಪಾರು ಮಾಡುವ ಬಗ್ಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು, ದೇಶದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯದಂತೆ ನಡೆದುಕೊಂಡು ಬರುತ್ತಿವೆ. ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರವರು ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯದಂತೆಯೇ ಕಾರ್ಯವನ್ನು ನಿರ್ವಹಿಸುತ್ತಿದ್ದರೂ ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್‌ರವರ ಪೋಟೋವನ್ನು ತೆಗೆಸಿ ಅಪಮಾನವನ್ನು ಎಸಗಿದ್ದಾರೆ. ಕೂಡಲೇ ರಾಜ್ಯಪಾಲರು ಅವರನ್ನು ಅಮಾನತು ಮಾಡಿ, ಗಡೀಪಾರುಮಾಡಬೇಕೆಂದು ರಾಜ್ಯಪಾಲರನ್ನು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಯುವಘಟಕದ ಉಪಾಧ್ಯಕ್ಷ ಬಿ.ಬಿ.ಬಸವರಾಜು ಮಾತನಾಡಿ, ಒಬ್ಬವ್ಯಕ್ತಿ ಭೂಮಿಯ ಮೇಲೆ ನಿಂತು ತಾನು ನಿಂತಿರುವ ಭೂಮಿಯನ್ನೇ ಸರಿಯಿಲ್ಲವೆಂದು ಹೇಳಿದಂತೆ, ಸಂವಿಧಾನದ ಮೂಲಕ ನ್ಯಾಯಾಧೀಶರ ಸ್ಥಾನವನ್ನು ಅಲಂಕರಿಸಿ ಅದನ್ನು ರಚಿಸಿದ ಡಾ.ಅಂಬೇಡ್ಕರ್‌ರವರ ಪೋಟೋವನ್ನು ತೆರವುಗೊಳಿಸಿದರೆ ಮಾತ್ರವೇ ನಾನು ಗಣರಾಜ್ಯೋತ್ಸವದಲ್ಲಿ ಭಾಗವಹಿಸುತ್ತೇನೆಂಬುದು ಅವರನ್ನು ಅಪಮಾನಿಸಿದಂತೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಧೀಶರ ವಿರುದ್ದ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ಗಡೀಪಾರು ಮಾಡಬೇಕೆಂದು ರಾಜ್ಯಪಾಲರಲ್ಲಿ ವಿನಂತಿಸಿಕೊAಡರು.
ಕರವೇ ನಗರ ಅಧ್ಯಕ್ಷ ವೈ.ವಿ.ವೆಂಕಟೇಶ್ ಮಾತನಾಡಿ, ದೇಶದ ಯಾವುದೇ ಪ್ರಜೆ ಇಂತಹ ವರ್ತನೆಯನ್ನು ತೋರಿಸಬಾರದು, ಅದರಲ್ಲಿಯೂ ನ್ಯಾಯಾಧೀಶರು ಇಂತಹ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾದವೆಂದು ಪರಿಗಣಿಸಿ ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ಸಂಘಟನೆಯ ತಾ.ಅಧ್ಯಕ್ಷ ಬಿ.ಟಿ.ಕುಮಾರ್, ಕಾರ್ಯದರ್ಶಿ ಹಿಂಡಿಸ್ಕೆರೆ ರವಿಕುಮಾರ್, ನಗರ ಕಾರ್ಯದರ್ಶಿ ಲೊಕೇಶ್, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಫೈರೋಜ್, ಪ್ರಧಾನ ಕಾರ್ಯದರ್ಶಿ ಶಾಬುದ್ದೀನ್, ಕಾರ್ಮಿಕ ಘಟಕದ ಉಮಾಶಂಕರ್, ಕುಮಾರ್ ಮತ್ತು ಸುದೀಂದ್ರ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.