ಗಾಂಧಿ ಸಿದ್ದಾಂತಕ್ಕೆ ತದ್ವಿರುದ್ದ ನಡವಳಿಕೆಯ ಬಿಜೆಪಿ ಆಡಳಿತ : ಡಾ.ರಫೀಕ್ ಅಹಮದ್

ತುಮಕೂರು : ತನ್ನ ತನು,ಮನ, ಪ್ರಾಣ್ಯವನ್ನು ಕೊಟ್ಟು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಗಾಂಧಿಯ ಸತ್ಯ, ಅಹಿಂಸೆ ಮತ್ತು ಜಾತ್ಯಾತೀತ ತತ್ವಗಳಿಗೆ ವಿರುದ್ದವಾಗಿ ಇಂದಿನ ಬಿಜೆಪಿ ಸರಕಾರ ನಡೆದುಕೊಳ್ಳುತ್ತಿದ್ದು, ಯುವಜನರು ಇದರ ವಿರುದ್ದ ಸಿಡಿದೇಳಬೇಕಿದೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಕರೆ ನೀಡಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಸರ್ವೋದಯ, ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ಮಾತನಾಡುತಿದ್ದ ಅವರು, ಗಾಂಧೀಜಿಯವರ ಜಾತ್ಯಾತೀತ, ಸಹೋದರತ್ವ ತತ್ವಗಳನ್ನು ಕಾಂಗ್ರೆಸ್ ಪಕ್ಷದ ತನ್ನಲ್ಲಿ ಅಳವಡಿಸಿಕೊಂಡು ಇದುವರೆಗೂ ಅಧಿಕಾರ ನಡೆಸುವ ಮೂಲಕ ದೇಶದ ಎಲ್ಲಾ ಸಮುದಾಯಗಳಿಗೂ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಸರ್ವ ಧರ್ಮ ಸಮನ್ವಯ ಭಾವದಿಂದ ನಡೆದುಕೊಂಡಿದೆ.ಆದರೆ ಇಂದಿನ ಸರಕಾರ ಇದಕ್ಕೆ ತದ್ವಿರುದ್ದವಾದ ನಡೆವಳಿಕೆಗಳು ದೇಶಕ್ಕೆ ಮಾರಕವಾಗಿವೆ ಎಂದರು.
ಮಹಾತ್ಮಗಾಂಧಿ ಒರ್ವ ದೂರದೃಷ್ಟಿ ಉಳ್ಳ ನಾಯಕ.ದೇಶದ ಸ್ವಾತಂತ್ರಕ್ಕೆ ಎಲ್ಲ ಸಮುದಾಯಗಳು ಒಗ್ಗೂಡಬೇಕು ಎಂಬ ಉದ್ದೇಶದಿಂದಲೇ ಇಡೀ ರಾಷ್ಟçವನ್ನು ಸುತ್ತಿ,ಎಲ್ಲಾ ಸಮುದಾಯಗಳ ಜನರ ವಿಶ್ವಾಸ ಪಡೆದು ನಡೆಸಿದ ಆಹಿಂಸಾ ಹೋರಾಟದ ಫಲವಾಗಿ ಭಾರತ ಸ್ವಾತಂತ್ರ ಗಳಿಸುವಂತಾಯಿತು.ಆದರೆ ಸ್ವಾತಂತ್ರ ನಂತರದಲ್ಲಿ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಾಥೂರಾಮ್ ಗೂಡ್ಸೆಯನ್ನು ಇಂದಿನ ಆಡಳಿತ ಪಕ್ಷ ಪೂಜಿಸುವ ಮೂಲಕ ಯುವಜನತೆಗೆ ಕೆಟ್ಟ ಸಂದೇಶವನ್ನು ನೀಡುತ್ತಿದೆ. ಇದರ ವಿರುದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಚ್ಚೆತ್ತುಕೊಂಡು,ಬಿಜೆಪಿಯ ಒಡೆದು ಆಳುವ ನೀತಿ, ದುರಾಡಳಿತ,ಕೋಮು ದ್ವೇಷದ ಹಿಂದಿನ ಅಧಿಕಾರದಾಹ ಮನಸ್ಥಿತಿಯನ್ನು ಜನರ ಮುಂದಿಡಬೇಕಾಗಿದೆ ಎಂದು ಡಾ.ರಫೀಕ್ ಅಹಮದ್ ತಿಳಿಸಿದರು.
ಕೆ.ಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಮಹಾತ್ಮಗಾಂಧಿಯ ಜೊತೆಗೆ ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಎಲ್ಲಾ ಮಹನೀಯರನ್ನು ಸ್ಮರಿಸುವ ಮೂಲಕ ಗಾಂಧಿಜೀಯವರು ಹತರಾದ ದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.ಬಿಜೆಪಿ ಮುಖಂಡರು ನಾಥೂರಾಮ್ ಗೂಡ್ಸೆಯನ್ನು ಪೂಜಿಸುವ ಮೂಲಕ ಈ ದೇಶದ ಸ್ವಾತಂತ್ರ ಹೋರಾಟವನ್ನು ಅವಮಾನಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಭಾರತದ ಸ್ವಾತಂತ್ರ ಹೋರಾಟದಲ್ಲಿ ಮಡಿದ ಎಲ್ಲಾ ಮಹನೀಯರನ್ನು ಸ್ಮರಿಸುವ ಸಲುವಾಗಿ ಗಾಂಧಿಜೀ ಅವರು ಸಾವನ್ನಪ್ಪಿದ ದಿನವನ್ನು ಹುತಾತ್ಮರ ದಿನವನ್ನಾಗಿ ಇಡೀ ವಿಶ್ವದಾದ್ಯಂತ ಆಚರಸಲಾಗುತ್ತಿದೆ.ಸ್ವಾತಂತ್ರ ಪಡೆದ ಸಂದರ್ಭದಲ್ಲಿ ಈ ದೇಶವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು ಮಹಾತ್ಮಗಾಂಧಿ ಅವರ ಮಾರ್ಗದರ್ಶನ ಅಗತ್ಯವಿತ್ತು. ಆದರೆ ಈ ದೇಶದ ಮನುವಾದಿಗಳು ಇದಕ್ಕೆ ಅವಕಾಶ ನೀಡದಿರುವುದು ದುರಂತ ಎಂದರು.
ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ಉದ್ದೇಶದಿಂದ ಇಡೀ ರಾಷ್ಟçದಾದ್ಯಂತ ನೊಂದಣಿ ಅಭಿಯಾನವನ್ನು ಆರಂಭಿಸಲಾಗಿದೆ.ಪ್ರತಿ ಸದಸ್ಯರು ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯಲು ಇಚ್ಚಿಸುವ ಇಬ್ಬರನ್ನು ನೊಂದಾಯಿಸುವ ಮೂಲಕ ಪಕ್ಷವನ್ನು ಬಲಪಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆಟೋ ರಾಜು, ಮೆಹಬೂಬ್ ಪಾಷ, ಡಾ.ಅರುಂಧತಿ, ಕಾರ್ಮಿಕ ಘಟಕದ ಅಬ್ದುಲ್ ರಹೀಂ,ವಕ್ತಾರರಾದ ಸುಜಾತ,ಎಂ.ವಿ.ರಾಘವೇಂದ್ರಸ್ವಾಮಿ,ಗೀತ, ಸಿಮೆಂಟ್ ಮಂಜಣ್ಣ, ರುದ್ರೇಶ್, ರಘು,ಎಂ.ಷಪಿಅಹಮದ್,ನರಸಿಂಹಯ್ಯ,ಭಾಗ್ಯಮ್ಮ,ಕವಿತಾ,ಮಹಾಲಕ್ಷ್ಮಿ,ಶ್ರೀನಿವಾಸ್,ಲಕ್ಷ್ಮಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.