ರಾಗಿ ಖರೀದಿ ಆರಂಭಿಸಲು ಜಿಲ್ಲಾ ಕಾಂಗ್ರೆಸ್ ಆಗ್ರಹ
ತುಮಕೂರು : ಬೆಂಬಲ ಬೆಲೆಯಲ್ಲಿ ರಾಗಿ ಕೇಂದ್ರಗಳಲ್ಲಿ ಕೂಡಲೇ ರಾಗಿ ಖರೀದಿ ಆರಂಭಿಸಬೇಕು ಹಾಗೂ ಖರೀದಿಗೆ ನಿಗಧಿಪಡಿಸಿರುವ ಪ್ರಮಾಣವನ್ನು ಹೆಚ್ಚು ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿವತಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಕೆಪಿಸಿಸಿ ವಕ್ತಾರರಾದ ಮುರುಳೀಧರ್ ಹಾಲಪ್ಪ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್‌ನ ವಿವಿಧ ಮುಖಂಡರು, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರಲ್ಲದೆ, ರಾಗಿ ಖರೀದಿಗಳಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆ ಕುರಿತಂತೆ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ,ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ನೊಂದಣಿ ಆರಂಭಿಸಿ, ಕೆಲವೇ ದಿನಗಳಲ್ಲಿ ಸ್ಥಗೀತಗೊಳಿಸಲಾಗಿದೆ.ಇದುವರೆಗೂ ರೈತರಿಂದ ರಾಗಿ ಖರೀದಿಸಿಲ್ಲ.ಆಯುಕ್ತರು,ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ,ಮನವಿ ಮಾಡಿದರೆ ಮಾಹಿತಿ ಪಡೆಯುತ್ತೇವೆ. ಸಭೆ ನಡೆಸುತ್ತೇವೆ ಎಂಬ ಉತ್ತರ ನೀಡುತ್ತಿದ್ದಾರೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ.ಕೂಡಲೇ ರಾಗಿ ಖರೀದಿ ಆರಂಭಿಸುವುದರ ಜೊತೆಗೆ, ನೊಂದಣಿಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಕೋರೋನದಿಂದಾಗಿ ಬೆಂಗಳೂರು ಸೇರಿದ್ದ ಯುವಜನರು ಊರುಗಳಿಗೆ ವಾಪಸ್ ಆಗಿದ್ದಾರೆ.ಅವರು ಸಹ ಕೃಷಿ ಕಾರ್ಯಗಳಲ್ಲಿ ತೊಡಗಿರುವುದರಿಂದ ಈ ಬಾರಿ ಹೆಚ್ಚು ಇಳುವರಿ ನಿರೀಕ್ಷೆಯಿದೆ. ಒಂದು ವೇಳೆ ಈ ಬಾರಿ ಅವರಿಗೆ ಸರಿಯಾದ ಬೆಲೆ ದೊರೆಯಲಿಲ್ಲವೆಂದರೆ ಕೃಷಿಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸರಕಾರ ಈ ಬಾರಿ ಹೆಚ್ಚಿನ ರಾಗಿ ಖರೀದಿಗೆ ಮುಂದಾಗಬೇಕೆಂದು ನಮ್ಮ ಕೋರಿಕೆಯಾಗಿದೆ ಎಂದು ಮುರುಳೀಧರ ಹಾಲಪ್ಪ ತಿಳಿಸಿದರು.
ಒಂದು ಕ್ವಿಂಟಾಲ್ ರಾಗಿಗೆ ಸರಕಾರ 3377 ರೂ ದರ ನಿಗಧಿ ಮಾಡಿದೆ. ಈ ಹಣದಲ್ಲಿ ರೈತ ಲಾಭ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಒಂದು ಕ್ವಿಂಟಾಲ್ ರಾಗಿಗೆ 4000 ರೂಗಳ ದರ ನಿಗಧಿಯ ಜೊತೆಗೆ,ಗರಿಷ್ಠ 20 ಕ್ವಿಂಟಾಲ್‌ನಿAದ 25 ಕ್ವಿಂಟಾಲ್‌ಗೆ ಪ್ರಮಾಣ ಹೆಚ್ಚಿಸಬೇಕು.ಅಲ್ಲದೆ ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಬೆಳೆಯೂ ಚನ್ನಾಗಿದೆ.ಆದ್ದರಿಂದ ಖರೀದಿ ಪ್ರಮಾಣವನ್ನು ಹೆಚ್ಚಿಗೆ ಮಾಡುವಂತೆ ಸರಕಾರದೊಂದಿಗೆ ಮಾತುಕತೆ ನಡೆಸಲು ಜೆ.ಡಿ.ಯವರನ್ನು ಒತ್ತಾಯಿಸಿರುವುದಾಗಿ ಮುರುಳೀಧರ ಹಾಲಪ್ಪ ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ,ಕಳೆದ ಸಾಲಿನಲ್ಲಿ ಜಿಲ್ಲೆಯಿಂದ 38 ಸಾವಿರ ಜನ ರೈತರು ಹೆಸರು ನೊಂದಾಯಿಸಿದ್ದರು, ಸುಮಾರು 8.46 ಲಕ್ಷ ಕ್ವಿಂಟಾಲ್ ರಾಗಿಯನ್ನು ಖರೀದಿಸಿದ್ದು, ಶೇ99ರಷ್ಟು ರೈತರಿಗೆ ಹಣ ಸಂದಾಯವಾಗಿದೆ.ತಾಂತ್ರಿಕ ಕಾರಣಗಳಿಂದ 10-15 ಜನರ ರೈತರಿಗೆ ಹಣ ಸಂದಾಯವಾಗಬೇಕಿದೆ.ಈ ಬಾರಿ ಜಿಲ್ಲೆಯಿಂದ 25,809 ಜನ ರೈತರು 4.26 ಲಕ್ಷ ಕ್ವಿಂಟಾಲ್ ರಾಗಿ ಖರೀದಿಗೆ ಹೆಸರು ನೊಂದಾಯಿಸಿದ್ದಾರೆ. ಕೇಂದ್ರ ಸರಕಾರ ಈ ವರ್ಷ ರಾಜ್ಯದಿಂದ 2.10 ಲಕ್ಷ ಮೆ.ಟನ್ ರಾಗಿ ಖರೀದಿಗೆ ಗುರಿ ನಿಗಧಿ ಪಡಿಸಿದ್ದು, ಸದರಿ ಗುರಿ ತಲುಪಿದ ಹಿನ್ನೇಲೆಯಲ್ಲಿ ನೊಂದಣಿ ಸ್ಥಗೀತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ 9 ಕಡೆಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಫೆಬ್ರವರಿ 1 ರಿಂದ ರಾಗಿ ಖರೀದಿ ಆರಂಭವಾಗಲಿದೆ. ಪ್ರಸ್ತುತ ನಿಮ್ಮ ಮನವಿಯನ್ನು ಇಂದೇ ಇಲಾಖೆಯ ಆಯುಕ್ತರಿಗೆ ಕಳುಹಿಸಿ, ಸೂಕ್ತ ನಿರ್ದೇಶಕ ನೀಡಲು ಕೋರುವುದಾಗಿ ಶ್ರೀನಿವಾಸಯ್ಯ ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ರೇವಣ್ಣಸಿದ್ದಯ್ಯ, ಸಿಮೆಂಟ್ ಮಂಜುನಾಥ್, ಗೋವಿಂದೇಗೌಡ,ಸಿದ್ದಲಿಂಗೇಗೌಡ, ಪ್ರಕಾಶ್,ಎಂ.ಹೆಚ್.ನಾಗರಾಜು,ವಕೀಲರಾದ ನಿರಂಜನ್,ಕಾರ್ಮಿಕ ಘಟಕದ ನದೀಂ, ಆದಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.