ತುಮಕೂರು

ಬಿಜೆಪಿ ಎಸ್ಸಿ ಮೋರ್ಚಾದಿಂದ ರಾಜ್ಯಾದ್ಯಂತ ಭೀಮಾ ಜ್ಯೋತಿ ಯಾತ್ರೆ : ಛಲವಾದಿ ನಾರಾಯಣಸ್ವಾಮಿ

ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೈಗೊಂಡಿರುವ ಕಾರ್ಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಭೀಮಾ ಜ್ಯೋತಿ ಹೆಸರಲ್ಲಿ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಯಾತ್ರೆ ಹಮ್ಮಿಕೊಳ್ಳಲಿದೆ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಎಸ್ಸಿ ಮೋರ್ಚಾ ರಾಜ್ಯ ಪದಾಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2022ರ ಏಪ್ರಿಲ್‌ನಿಂದ ಆರಂಭವಾಗುವ ಯಾತ್ರೆ ಒಂದು ತಿಂಗಳ ಕಾಲ ಇಡೀ ರಾಜ್ಯವನ್ನು ಸುತ್ತಿ, ಅಂತಿಮವಾಗಿ ಬೆಂಗಳೂರಿನಲ್ಲಿ ಐದು ಲಕ್ಷ ದಲಿತರನ್ನು ಸೇರಿಸಿ ದೊಡ್ಡ ಸಮಾವೇಶ ನಡೆಸುವ ಮೂಲಕ ಸಮಾಪ್ತಿಗೊಳ್ಳಲಿದೆ.ಇದಕ್ಕೆ ಮಾಜಿ ಶಾಸಕ ನಂಜುಂಡಸ್ವಾಮಿ ಯವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದರು.
ಬಿಜೆಪಿ ಪಕ್ಷದ ಎಸ್ಸಿ ಮೋರ್ಚಾ ನಡೆಸಲಿರುವ ಈ ಭೀಮಜ್ಯೋತಿ ಯಾತ್ರೆಯಲ್ಲಿ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳು, ಸಾಧನೆಗಳು,ಅವರು ಹುಟ್ಟಿದ, ವಾಸಮಾಡಿದ,ವಿದ್ಯೆ ಕಲಿತ, ಪರಿನಿರ್ಮಾಣ ಮಾಡಿದ ಸ್ಥಳಗಳನ್ನು ಘನತೆ ಕಾಪಾಡುವ ನಿಟ್ಟಿನಲ್ಲಿ ಬಿಜೆಪಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಕ್ರಮಗಳನ್ನು ಯಾತ್ರೆಯಲ್ಲಿ ಬಿಂಬಿಸುವ ಕೆಲಸವನ್ನು ಮಾಡಲಾಗುವುದು ಎಂದು ಚಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ದಲಿತರಿಗಾಗಿ ಬಿಜೆಪಿ ಪಕ್ಷ ಏನು ಮಾಡಿದೆ ಎಂಬುದರ ಅರಿವು ಇರಲಿಲ್ಲ. ಇದಕ್ಕೆ ಕಾಂಗ್ರೆಸ್ ಪಕ್ಷದ ಅಪಪ್ರಚಾರವೇ ಕಾರಣ.ಬಿಜೆಪಿ ದಲಿತ, ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ಅವರನ್ನು ತಮ್ಮ ಓಟ್ ಬ್ಯಾಂಕಾಗಿ ಮಾಡಿಕೊಂಡಿತ್ತು.ಆದರೆ ಈಗ ದಲಿತರಿಗೆ ಇದರ ಹಿಂದಿನ ಮರ್ಮ ತಿಳಿದಿದೆ. ಹಾಗಾಗಿಯೇ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಸುತ್ತಿ 150 ಕ್ಕೂ ಹೆಚ್ಚು ಸೀಟುಗಳನ್ನು ಬಿಜೆಪಿ ಪಕ್ಷಕ್ಕೆ ದೊರಕಿಸಿಕೊಡುವುದು ಎಸ್.ಸಿ. ಮೋರ್ಚಾದ ಗುರಿಯಾಗಿದೆ ಎಂದರು.
ನಾನು ಎಸ್ಸಿ ಮೋರ್ಚಾ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಒಂದುವರೆ ವರ್ಷದಲ್ಲಿ ಕೋರೋನ ನಡುವೆಯೂ ಇಡೀ ರಾಜ್ಯವನ್ನು ಮೂರು ಬಾರಿ ಪ್ರವಾಸ ಮಾಡಿ, ಘಟಕಕ್ಕೆ ಹೊಸ ಚೈತನ್ಯ ತುಂಬಲಾಗಿದೆ.ಕಾಂಗ್ರೆಸ್ ಪಕ್ಷದಿಂದ ದಲಿತರ ಉದ್ದಾರ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಭೀತಾಗಿದ್ದು, ರಾಜಕೀಯವಾಗಿ ಬಿಜೆಪಿ ದಲಿತರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡಲಿದೆ ಎಂದು ಚಲವಾದಿ ನಾರಾಯಣಸ್ವಾಮಿ ತಿಳಿಸಿದರು.
ದೇಶದಲ್ಲಿ 65 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಅತ್ತು ಕರೆದ ಮೇಲೆ ಡಾ.ಜಿ.ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದರು. ಆದರೆ ಬಿಜೆಪಿ ಯಾವುದೇ ಒತ್ತಡವಿಲ್ಲದ ಗೋವಿಂದ ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿ, ದಲಿತರ ಆತ್ಮಗೌರವ ಹೆಚ್ಚಿಸಿತ್ತು. ಒಂದೊಮ್ಮೆ ದಲಿತರನ್ನು ಬಿಜೆಪಿ ಪಕ್ಷದಲ್ಲಿಯೇ ಮುಖ್ಯಮಂತ್ರಿ ಮಾಡುವ ಕಾಲವೂ ಬರಬಹುದು.ದಲಿತರ ಪ್ರೇರಕ ಶಕ್ತಿಯಾಗಿದ್ದ ಕವಿ ಸಿದ್ದಲಿಂಗಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ, ಅವರ ಗೌರವದ ಜೊತೆಗೆ, ದಲಿತ ಸಮುದಾಯಕ್ಕೆ ಗೌರವ ಸಲ್ಲಿಸಿದೆ ಎಂದರು.
ರಾಯಚೂರು ಜಿಲ್ಲಾ ನ್ಯಾಯಾಧೀಶರಿಂದ ಅಂಬೇಡ್ಕರ್ ಅವರಿಗೆ ಅಪಮಾನವಾದ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯಪಾಲರಿಗೆ,ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.ಎಲ್ಲ ಸರಕಾರಿ ಕಚೇರಿಯಲ್ಲಿ ಭಾವಚಿತ್ರ ಅಳವಡಿಕೆಗೆ ಅವಕಾಶ ಕಲ್ಪಿಸಲಾಗಿತ್ತು,ಆದರೆ ನ್ಯಾಯಾಲಯದಲ್ಲಿ ಅಳವಡಿಸುವಂತೆ ಸೂಚಿಸಿರಲಿಲ್ಲ. ಈ ಘಟನೆ ನ್ಯಾಯಾಂಗದ ಆವರಣದಲ್ಲಿ ನಡೆದಿದ್ದರಿಂದ ಸರಕಾರ ಮಧ್ಯಸ್ಥಿಕೆ ವಹಿಸಲು ಸಾಧ್ಯವಾಗುತ್ತಿಲ್ಲ. ಕಾನೂನು ಸಚಿವರ ಮೂಲಕ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಸಲ್ಲಿಸಿ ನ್ಯಾಯಾಧೀಶರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ನಂಜುಂಡಸ್ವಾಮಿ,ಬಸವರಾಜ ನಾಯ್ಕ್, ದೊಡ್ಡೇರಿ ವೆಂಕಟೇಶ್, ನರಸಿಂಹಮೂರ್ತಿ, ವೈ.ಹೆಚ್.ಹುಚ್ಚಯ್ಯ,ಜಿಲ್ಲಾ ಮಾಧ್ಯಮ ಸಹಪ್ರಮುಖ ಜೆ.ಜಗದೀಶ್,ಟೂಡಾ ಸದಸ್ಯರಾದ ಹನುಮಂತಪ್ಪ, ಪ್ರತಾಪಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker