ಜೆ.ಸಿ.ಮಾಧುಸ್ವಾಮಿ ಅವರಿಗೆ ಪುನಃ ತುಮಕೂರು ಜಿಲ್ಲಾ ಉಸ್ತುವಾರಿ ನೀಡುವಂತೆ ಅಭಿಮಾನಿಗಳ ಆಗ್ರಹ
ರಾಜ್ಯಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ ಜೆ.ಸಿ.ಮಾಧುಸ್ವಾಮಿ ಅಭಿಮಾನಿಗಳು
ತಿಪಟೂರು : ಜಿಲ್ಲೆಯಲ್ಲಿ ಜಾತ್ಯಾತೀತವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ನಿಷ್ಠಾವಂತ, ಸಮರ್ಥ ನಾಯಕ ಸಚಿವ ಜೆ.ಸಿ.ಮಾಧುಸ್ವಾಮಿರನ್ನು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತೆಗೆದು ಹಾಕಿದ್ದು ಜಿಲ್ಲೆಯ ಜನತೆಗೆ ನೋವು ತಂದಿದೆ ಎಂದು ಜೆ.ಸಿ.ಮಾಧುಸ್ವಾಮಿ ಅಭಿಮಾನಿ ಲಕ್ಮಗೊಂಡನಹಳ್ಳಿ ರವೀಂದ್ರ ಕುಮಾರ್ ಬೇಸರ ಹೊರಹಾಕಿದ್ದಾರೆ.
ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಪ್ರವಾಸಿ ಮಂದಿರದಲ್ಲಿ ಬುಧವಾರ ಜೆ.ಸಿ.ಮಾಧುಸ್ವಾಮಿ ಅಭಿಮಾನಿಗಳು ಸುದ್ದಿಗೋಷ್ಠಿ ನಡೆಸಿದರು.
ಸಚಿವ ಜೆ.ಸಿ.ಮಾಧುಸ್ವಾಮಿ ತುಮಕೂರು ಜಿಲ್ಲೆಯ ಆಳ, ಅಗಲ, ವಿಚಾರವನ್ನು ತಿಳಿದುಕೊಂಡಿದ್ದು ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ರಾಜ್ಯಸರ್ಕಾರದ ಮುಖ್ಯಮಂತ್ರಿಗಳು ದಿಢೀರ್ ತುಮಕೂರು ಜಿಲ್ಲಾ ಉಸ್ತುವಾರಿಯಿಂದ ತೆಗೆದು ಜಿಲ್ಲೆಯಿಂದ ಹೊರಗಿನವರಿಗೆ ನೀಡಿರುವುದು ನಿಜಕ್ಕೂ ನೋವು ತಂದಿದೆ. ಜಿಲ್ಲಾ ಉಸ್ತುವಾರಿ ಸ್ಥಾನದಿಂದ ತೆಗೆಯಲು ಸೂಕ್ತ ಕಾರಣ ನೀಡದೇ ತೆಗೆದು ಹಾಕಿರುವುದು ಅಭಿವೃದ್ಧಿಗೆ ಕುಂಠಿತಕ್ಕೆ ಕಾರಣವಾಗುತ್ತದೆ. ಜಿಲ್ಲೆಯ ವಿರೋಧ ಪಕ್ಷದಿಂದ ಹಿಡಿದು ಅನೇಕ ಮುಖಂಡರು, ನಾಯಕರುಗಳು ಬದಲಾವಣೆಯನ್ನು ವಿರೋಧಿಸಿದ್ದಾರೆ. ಸಣ್ಣ ನೀರಾವರಿ ಖಾತೆಯನ್ನು ತೆಗೆದುಕೊಂಡು ರಾಜ್ಯದ ರೈತರಿಗೆ, ಜಿಲ್ಲೆಯ, ತಾಲ್ಲೂಕಿನ ರೈತರಿಗೆ ಅಗತ್ಯವಿರುವ ಸೌಕರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅಲ್ಲದೇ ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಅತೀ ಹೆಚ್ಚು ಸಭೆ ನಡೆಸಿ ಕೊರೊನಾ ತಡೆಗೆ ಶ್ರಮಿಸಿದ ಸಚಿವರನ್ನು ತೆಗೆದು ಹಾಕಿರುವುದು ಖಂಡನೀಯ. ಹೊರಗಿನಿಂದ ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳು ಹೇಳಿದ ಮಾತಿಗೆ ಕೇಳಿಕೊಂಡು ಕಾಟಾಚಾರಕ್ಕೆ ಸಭೆ ನಡೆಸಿ ತೆರಳುತ್ತಾರೆ. ಅದ್ದರಿಂದ ಕೂಡಲೇ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ಪುನಃ ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಜಿಲ್ಲಾ ಉಸ್ತುವಾರಿಯನ್ನು ವಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳನ್ನು ಅಭಿಮಾನಿಗಳು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗುತ್ತದೆ ಎಂದು ರಾಜ್ಯಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದರು.
ಕುಂದೂರು ಮಂಜುನಾಥ್ ಮಾತನಾಡಿ ಕಳೆದ ಹತ್ತಾರು ವರ್ಷಗಳಿಂದ ನೆನೆಗುಡಿಗೆ ಬಿದ್ದಿದ್ದ ಕಾಮಾಗರಿಗಳನ್ನು ಕೈಗೆತ್ತಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದರು. ಜಿಲ್ಲೆಗೆ ನಾಲೆಯ ಮುಖಾಂತರ ಹರಿಯುವ ನೀರನ್ನು ಸಮರ್ಪಕವಾಗಿ ಎಲ್ಲಾ ಕೆರೆಗಳಿಗೆ ತುಂಬಿಸುವ ಕಾರ್ಯವನ್ನು ಕಳೆದ 3 ವರ್ಷದಿಂದ ಸರಾಗವಾಗಿ ಮಾಡುತ್ತಾ ಬಂದಿದ್ದಾರೆ. ರಾಜ್ಯಸರ್ಕಾರವು ಜಿಲ್ಲಾ ಉಸ್ತುವಾರಿಯಿಂದ ತೆಗೆಯಲು ಸೂಕ್ತ ಕಾರಣ ನೀಡಬೇಕಿದೆ. ಸಣ್ಣ ನೀರಾವರಿ ಸಚಿವರಾದರೂ ಸಹ ಬೆಂಗಳೂರಿನಲ್ಲಿ ನೆಲಸದೇ ಗ್ರಾಮೀಣ ಪ್ರದೇಶದಲ್ಲಿ ಉಳಿದುಕೊಂಡು ಕ್ಷೇತ್ರ, ಜಿಲ್ಲೆಯ ಜನರಿಗೆ ಅಗತ್ಯವಿರುವ ಕಾಮಗಾರಿ, ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ತುಮಕೂರು ಜಿಲ್ಲೆಗೆ ಮತ್ತೇ ಜೆ.ಸಿ.ಮಾಧುಸ್ವಾಮಿಯವರನ್ನು ಉಸ್ತವಾರಿ ಸಚಿವರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಬೇಕೆಂದು ತುಮಕುರಿನ ಜನತೆಯ ಪರವಾರಿ ಮನವಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಬಿಳಿಗೆರೆ ಗ್ರಾ.ಪಂ.ಸದಸ್ಯ ದೇವರಾಜು ಮಾತನಾಡಿ ರಾಜ್ಯದಲ್ಲಿ ಅಭಿವೃದ್ಧಿ, ಕಾರ್ಯನಿರ್ವಹಣೆ, ನಿಷ್ಠಾವಂತಿಕೆಗೆ ಹೆಸರುವಾಸಿ ಜೆ.ಸಿ.ಎಂ. ಅಂತಹವರನ್ನು ತುಕೂರು ಜಿಲ್ಲೆಯ ಉಸ್ತುವಾರಿಯಿಂದ ತೆಗೆದಿರುವುದು ನಿಜಕ್ಕೂ ದುರಂತದ ಸಂಗತಿ. ತುಮಕೂರಿನ ಜನತೆಯ ತಾಳ್ಮೆಯನ್ನು ರಾಜ್ಯಸರ್ಕಾರ ಪರೀಕ್ಷಿಸದೇ ತಮ್ಮ ತಪ್ಪನ್ನು ಅರಿತು ತುಮಕುರು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ಜೆ.ಸಿ.ಮಾಧುಸ್ವಾಮಿಯವರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದುಂಡ ಗ್ರಾ.ಪಂ.ಸದಸ್ಯ ನವೀನ್, ಲಕ್ಮಗೊಂಡನಹಳ್ಳಿ ಚಂದ್ರಶೇಖರ್, ವಿಶೇರ್, ನಾಗೇನಹಳ್ಳಿ ದಯಾನಂದ್, ಸಿದ್ದು, ಹಿಂಡಿಸ್ಕರೆ ಯತೀಶ, ಹಾಲುಗೊಣ ಚೇತನ್ ಸೇರಿದಂತೆ ಹಲವು ಅಭಿಮಾನಿಗಳಿದ್ದರು.