ಎರಡು ವರ್ಷಗಳಿಂದ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕ: ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಹುಳಿಯಾರು : ಹುಳಿಯಾರು ಬಸ್ ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಸಲುವಾಗಿ ಸಂಸದರಾಗಿದ್ದ ಕಾಲದಲ್ಲಿ ಎಸ್.ಪಿ.ಮುದ್ಧಹನುಮೇಗೌಡರು ಬಸ್ ನಿಲ್ದಾಣದಲ್ಲಿ ಕಿರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರು.
ಈ ಘಟಕಕ್ಕೆ ಹುಳಿಯಾರು ಪಟ್ಟಣ ಪಂಚಾಯ್ತಿಯಿಂದ ನೀರು ಸರಬರಾಜು ಮಾಡುತ್ತಿತ್ತು. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ನೀರು ಬರದಂತ್ತಾಗಿದೆ. ಪರಿಣಾಮ ಬಸ್ ನಿಲ್ದಾಣಕ್ಕೆ ಬರುವ ವಿದ್ಯಾರ್ಥಿಗಳು. ಮಹಿಳೆಯರು, ವೃದ್ಧರು ನೀರಿಲ್ಲದೆ ಪರದಾಡುವಂತ್ತಾಗಿದೆ.
ಈ ಹಿಂದೆ ಬಸ್ ನಿಲ್ದಾಣದಲ್ಲಿ ಟೀ ಅಂಗಡಿಗಳು, ಕೆರೆ ದಡದಲ್ಲಿ ಹೋಟೆಲ್‌ಗಳು ಇದ್ದವು. ನೀರಿನ ಘಟಕ ಕೆಟ್ಟಿದ್ದರೂ ಅಲ್ಲಿಗೆ ಹೋಗಿ ನೀರು ಕುಡಿಯುತ್ತಿದ್ದರು. ಆದರೆ ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳನ್ನು ತೆರವು ಮಾಡಿದ ನಂತರ ನೀರಿರುವ ಒಂದೇ ಒಂದು ಸ್ಥಳ ಇಲ್ಲಿ ಇಲ್ಲದಂತ್ತಾಗಿದೆ. ಪರಿಣಾಮ ಬಾಯಾರಿಕೆ ತಡೆಯಲಾಗದೆ ದುಡ್ಡು ಕೊಟ್ಟು ನೀರಿನ ಬಾಟಲ್ ಖರೀಧಿಸುತ್ತಿದ್ದಾರೆ.
ಈಗ ಬಿಸಿಲ ಝಳ ಸಹ ಹೆಚ್ಚಿದ್ದು ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಜನರಿಗೆ ನೀರಿನ ಅಗತ್ಯತೆ ಹೆಚ್ಚಾಗಿದೆ. ಆದರೆ ಬಸ್ ಸುಂಕ, ಫುಟ್‌ಪಾತ್ ಸುಂಕ ಸಂಗ್ರಹಿಸುವ ಪಟ್ಟಣ ಪಂಚಾಯ್ತಿ ಮೂಲ ಸೌಕರ್ಯ ಕಲ್ಪಿಸುವ ಹೊಣೆ ನಮ್ಮದೆನ್ನುವುದನ್ನು ಮರೆತಿದೆ. ಪ್ರಯಾಣಿಕರ ಅನುಕೂಲದ ದೃಷ್ಠಿಯಿಂದ ನೀರಿನ ಘಟಕ ದುರಸ್ತಿಗೆ ಮುಂದಾಗಲಿ ಎಂಬುದು ಸಾರ್ವಜನಿಕರ ಮನವಿಯಾಗಿದೆ.
ಹೇಳಿ ಹೇಳಿ ಸಾಕಾಗಿ ಹೋಗಿದೆ ಖಾಸಗಿ ಬಸ್ ಏಜೆಂಟ್ : ಚನ್ನಕೇಶವ
ಹುಳಿಯಾರು ಪಟ್ಟಣವು ವಾಣಿಜ್ಯವಾಗಿ ಮರ‍್ನಲ್ಕು ಜಿಲ್ಲೆಗಳ ಗಡಿಭಾಗದ ಜನರಿಗೆ ಆಸರೆಯಾಗಿದೆ. ಪರಿಣಾಮ ನಿತ್ಯ ಸಾವಿರಾರು ಜನರು ಬಸ್ ನಿಲ್ದಾಣಕ್ಕೆ ಬಂದೋಗುತ್ತಾರೆ. ಬಸ್ ಬರುವವರೆಗಿಗೂ ಪ್ರಯಾಣಿಕರು ನಿಲ್ದಾಣದಲ್ಲಿ ಕಾಯುತ್ತಾರೆ. ಈ ಸಂದರ್ಭದಲ್ಲಿ ಬಾಯಾರಿಗೆಯಾದಾಗ ಕುಡಿಯಲು ನೀರಿನ ಸೌಲಭ್ಯವೇ ಪಂಚಾಯ್ತಿ ಮಾಡಿಲ್ಲ. ನೀರಿನ ಘಟಕ ಕೆಟ್ಟಿದ್ದರೂ ದುರಸ್ತಿ ಮಾಡಿಲ್ಲ. ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳಿಗೆ ಹೇಳಿಹೇಳಿ ಸಾಕಾಗಿ ಹೋಗಿದೆ.
ನನ್ನ ಗಮನಕ್ಕೆ ಬಂದಿರಲಿಲ್ಲ : ಕೆಎಂಎಲ್ ಕಿರಣ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ
ನಾನಿನ್ನೂ ಹೊಸದಾಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷನಾಗಿದ್ದೇನೆ. ಬಸ್ ನಿಲ್ದಾಣದ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ಶೌಚಾಲಯದ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇನೆ. ಈಗ ಮಾಧ್ಯಮದವರಿಂದ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ತುರ್ತು ಆಧ್ಯತೆಯ ಮೇರೆಗೆ ನೀರಿನ ಘಟಕ ದುರಸ್ತಿ ಮಾಡಿಸಿ ಪ್ರಯಾಣಿಕರಿಗೆ ಶುದ್ಧ ನೀರು ಕೊಡುತ್ತೇವೆ. ಅಲ್ಲದೆ ಕಾಯಿನ್ ಹಾಕಿ ಶುದ್ಧ ನೀರು ಬಾಟಲ್‌ನಲ್ಲಿ ಹಿಡಿದುಕೊಂಡು ಹೋಗುವಂತಹ ಘಟನ ನಿರ್ಮಿಸುವ ಚಿಂತನೆ ಇದೆ.