ದಾಸೋಹ ದಿನಕ್ಕೆ ಸಿಎಂ ಬೊಮ್ಮಾಯಿ ಚಾಲನೆ : ಸರಕಾರದಿಂದ ತ್ರಿವಿಧ ದಾಸೋಹ ಸಮರ್ಪಣೆ

ತುಮಕೂರು : ನಡೆದಾಡುವ ದೇವರು, ತ್ರಿವಿಧ ದಾಸೋಹಮೂರ್ತಿ, ಕರ್ನಾಟಕ ರತ್ನ ಸಿದ್ದಗಂಗಾ ಮಠಾಧ್ಯಕ್ಷರಾಗಿದ್ದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನದ ಅಂಗವಾಗಿ ದಾಸೋಹ ದಿನಾಚರಣೆಗೆ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂಕೇತಿಕವಾಗಿ ಶ್ರೀಮಠದಲ್ಲಿಂದು ಚಾಲನೆ ನೀಡಿದರು.
ಶ್ರೀಗಳ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ದಾಸೋಹ ಮನೆಗೆ ತೆರಳಿ ಶ್ರೀಮಠದ ವಿದ್ಯಾರ್ಥಿಗಳಿಗೆ ದಾಸೋಹ ಬಡಿಸುವ ಮೂಲಕ ದಾಸೋಹ ದಿನಾಚರಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕೋವಿಡ್ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಇಂದು ಯಾವುದೇ ಅದ್ದೂರಿ ಆಡಂಬರದ ಸಮಾರಂಭ ನಡೆಸದೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀಗಳ ಪುಣ್ಯಸ್ಮರಣೆ ಮತ್ತು ದಾಸೋಹ ದಿನವನ್ನು ಸಾಂಕೇತಿಕವಾಗಿ ಆಚರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅನ್ನ, ಅಕ್ಷರ, ಆಶ್ರಯ ದಾಸೋಹವನ್ನು ನೀಡುವ ಮೂಲಕ ಸಿದ್ಧಗಂಗಾ ಮಠ ಭಾರತೀಯ ಪರಂಪರೆಯನ್ನು ಮುಂದುವರೆಸಿದೆ ಎಂದು ಹೇಳಿದರು.
ಮಠದಲ್ಲಿ ಒಂದು ವಿಶಿಷ್ಟ ಅನ್ನ ದಾಸೋಹದ ಮೂಲಕ ವಿದ್ಯೆ ಕೊಡುವ ಕೆಲಸವನ್ನು ಶಿವಕುಮಾರ ಸ್ವಾಮೀಜಿಗಳು ಮಾಡಿದರು. ಶ್ರೀಗಳವರು ನಾಡು ಕಂಡ ಕರ್ಮಯೋಗಿ. ಅವರ ಸಂಸ್ಮರಣೆ ಪ್ರಯುಕ್ತ ಸರ್ಕಾರದ ವತಿಯಿಂದ ಕಾರ್ಯಕ್ರಮವನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿದ್ದು, ಸಾಂಕೇತಿಕವಾಗಿ ದಾಸೋಹ ದಿನಕ್ಕೆ ಚಾಲನೆ ನೀಡಲಾಗಿದೆ ಎಂದರು.
ದಾಸೋಹ ಪರಂಪರೆಯನ್ನು ಶುರು ಮಾಡಿದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ದಾಸೋಹವನ್ನು ಸರ್ಕಾರದ ವತಿಯಿಂದ ಮಾಡಲು ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಈ ಆಧುನಿಕ ಕಾಲದಲ್ಲಿ ದಾಸೋಹಕ್ಕೆ ಮಹತ್ವ ಕೊಡಬೇಕು ಎಂಬ ನಿಟ್ಟಿನಲ್ಲಿ ದಾಸೋಹ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ನಮ್ಮಷ್ಟಕ್ಕೆ ನಾವೇ ದಾಸೋಹ ಪರಂಪರೆಗೆ ಸಮರ್ಪಣೆ ಮಾಡಿಕೊಳ್ಳುವ ಧ್ಯೇಯ ನಮ್ಮ ಸರ್ಕಾರದ್ದಾಗಿದೆ ಎಂದರು.
ಹಿರಿಯ ಶ್ರೀಗಳು ಶ್ರೀಮಠದಲ್ಲಿ ದಾಸೋಹ ಪರಂಪರೆಯನ್ನು ಮಾಡಿದ್ದಾರೆ. ಅದಕ್ಕೆ ನಾವು ದಾಸೋಹದ ದಿನಾಚರಣೆಯ ಮೂಲಕ ಗೌರವ ಸಲ್ಲಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಶ್ರೀಗಳಿಗೆ ಭಾರತರತ್ನ ನೀಡುವ ಬಗ್ಗೆ ಭಕ್ತರು ಸಾಕಷ್ಟು ಒತ್ತಾಯವನ್ನು ಮಾಡಿದ್ದಾರೆ. ಈ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕಾರ್ಮಿಕರ ಮಕ್ಕಳಿಗೆ ವಿದ್ಯೆ ನೀಡುವ ಯೋಜನೆಗೆ 150 ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಆಶ್ರಯ ದಾಸೋಹ ನೀಡುವ ನಿಟ್ಟಿನಲ್ಲಿ 5000 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫೂ್ಯ ಮುಂದುವರೆಸುವ ಸಂಬಂಧ ಇಂದು ನಡೆಯಲಿರುವ ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ ಅವರು, ಶಾಲೆಗಳಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದರು.
ವೀಕೆAಡ್ ಮತ್ತು ರಾತ್ರಿ ಕರ್ಫೂ್ಯನಿಂದ ಏನು ಫಲಶೃತಿಯಾಗಿದೆ ಎಂಬ ಕುರಿತು ಇಂದಿನ ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದ ಬಸವರಾಜು, ಶಾಸಕ ಜ್ಯೋತಿ ಗಣೇಶ್, ಮಾಜಿ ಶಾಸಕ ಸುರೇಶ್‌ಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿ.ಪಂ. ಸಿಇಒ ಡಾ. ಕೆ. ವಿದ್ಯಾಕುಮಾರಿ ಮತ್ತಿತರರು ಉಪಸ್ಥಿತರಿದ್ದರು.