ಚನ್ನಯ್ಯನಪಾಳ್ಯದಲ್ಲಿ ಚಿರತೆ ದಾಳಿಗೆ ಮೇಕೆ ಬಲಿ : ಚಿರತೆ ಬಂಧನಕ್ಕೆ ಗ್ರಾಮಸ್ಥರ ಒತ್ತಾಯ
ಗುಬ್ಬಿ: ಗ್ರಾಮದ ಮಧ್ಯ ಭಾಗದಲ್ಲಿನ ಮನೆ ಮುಂದೆ ಕಟ್ಟಿ ಹಾಕಿದ್ದ ಮೇಕೆಯ ರಕ್ತ ಹೀರಿ ಬಲಿ ಪಡೆದ ಚಿರತೆ ಗ್ರಾಮಸ್ಥರನ್ನು ಕಂಡು ಪರಾರಿಯಾದ ಘಟನೆ ತಾಲೂಕಿನ ಕಸಬ ಹೋಬಳಿ ಚನ್ನಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಗುರುವಾರ ಸಂಜೆ 7 ರ ಸಮಯದಲ್ಲಿ ಮನೆಯ ಹೊರಭಾಗದಲ್ಲಿ ಮೇಕೆ ಕಟ್ಟಿ ಹಾಕಿದ ರೈತ ಚಿಕ್ಕರಂಗಯ್ಯ ಮನೆಯ ಒಳಭಾಗದಲ್ಲೇ ಟಿವಿ ನೋಡುತ್ತಿರುವ ವೇಳೆ ಏಕಾಏಕಿ ಚಿರತೆ ಪ್ರತ್ಯೇಕವಾಗಿ ಮೇಕೆಯ ಕತ್ತು ಸೀಳಿದೆ. ಸದ್ದಿಲ್ಲದೆ ಬೇಟೆಗೆ ಬಂದ ಚಿರತೆ ಕಂಡ ಕೆಲವರು ಕೂಗಾಡಿದ ನಂತರ ಮೇಕೆ ಬಿಟ್ಟು ಚಿರತೆ ಪರಾರಿಯಾಗಿದೆ.
ಗ್ರಾಮದ ನಡು ಮಧ್ಯೆ ಇರುವ ಚಿಕ್ಕರಂಗಯ್ಯ ಅವರ ಮನೆಯತ್ತ ಚಿರತೆ ಹೇಗೆ ಬಂತು ಎಂಬುದೇ ಜನರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಹೊರಭಾಗದಲ್ಲಿ ಹಲವು ಬಾರಿ ಚಿರತೆ ಕಂಡದ್ದು ಗ್ರಾಮಸ್ಥರು ಹೇಳುತ್ತಿದ್ದರು. ಆದರೆ ಈ ಬಾರಿ ಗ್ರಾಮಕ್ಕೆ ನುಗ್ಗಿ ಮೇಕೆ ಬಲಿ ಪಡೆದಿದ್ದು ಇಡೀ ಗ್ರಾಮಕ್ಕೆ ಭಯ ಹುಟ್ಟಿಸಿದೆ. ಈ ಬಗ್ಗೆ ಅಗತ್ಯ ಕ್ರಮ ಅರಣ್ಯ ಇಲಾಖೆ ಮಾಡಬೇಕು. ವಿಳಂಬವಾದಲ್ಲಿ ಸಣ್ಣ ಮಕ್ಕಳ ಬಲಿ ಪಡೆಯುವ ಸಾಧ್ಯತೆ ಹೆಚ್ಚು. ಕೂಡಲೇ ಚಿರತೆ ಬಂಧಿಸಿ ಜೊತೆಗೆ ಮೇಕೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಸ್ಥಳೀಯ ಮುಖಂಡ ಗಂಗಾಧರ್ ಒತ್ತಾಯಿಸಿದರು.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿ ಚಿರತೆ ಬಂಧನಕ್ಕೆ ಕ್ರಮ ವಹಿಸುವ ಭರವಸೆ ನೀಡಿದರು.