ಕೋವಿಡ್ ಸೋಂಕು ತಡೆಗಟ್ಟಲು ಹೊಸ ಮಾರ್ಗಸೂಚಿ, ವಾರಾಂತ್ಯದ ಕರ್ಫ್ಯೂಗೆ ಸಹಕರಿಸಿ : ಸಚಿವ ಮಾಧುಸ್ವಾಮಿ
ತುಮಕೂರು: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಿ ವರದಿಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹೊಸ ಮಾರ್ಗಸೂಚಿಯು ಜನವರಿ 5ರ ರಾತ್ರಿ 10 ಗಂಟೆಯಿಂದ ಜನವರಿ 19ರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿದ್ದು, ಸಾರ್ವಜನಿಕರು ಸೇರಿದಂತೆ ಎಲ್ಲಾ ಅಧಿಕಾರಿಗಳು, ಸಂಘ ಸಂಸ್ಥೆಗಳು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.
ಹೊಸ ಮಾರ್ಗಸೂಚಿಗಳನ್ವಯ ಪ್ರತಿ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯ ಲ್ಲಿರುತ್ತದೆ. ಸರ್ಕಾರದ ಎಲ್ಲಾ ಇಲಾಖೆಗಳು ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದೆ. ಆದರೆ ಅಗತ್ಯ ಸೇವೆ ಒದಗಿಸುವ ಇಲಾ ಖೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಅದೇ ರೀತಿ ಶುಕ್ರವಾರದ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದರು.
ಬೆಂಗಳೂರು ನಗರದಲ್ಲಿ ಮಾತ್ರ ಇಂದಿನಿಂದ(ಜನವರಿ 6) 10 ರಿಂದ 12ನೇ ತರಗತಿ ಸೇರಿದಂತೆ ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ಹೊರತುಪಡಿಸಿ ಶಾಲಾಗಳನ್ನು ಮುಚ್ಚಲಾಗುವುದು. ಆದರೆ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವ ಬಗ್ಗೆ ಯಾವುದೇ ನಿರ್ಣಯವನ್ನು ಈವರೆಗೂ ಕೈಗೊಂಡಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಪಬ್/ಬಾರ್/ರೆಸ್ಟೋರೆಂಟ್/ಹೋಟೆಲ್/ ಸಿನಿಮಾ ಮಂದಿರಗಳ ಸಾಮರ್ಥ್ಯದ ಶೇ.50ರಷ್ಟು ಆಸನಗಳಿಗೆ ಅನ್ವಯಿಸುವಂತೆ ಮಾತ್ರ ಕೋವಿಡ್ ನಿಯಮ ಪಾಲನೆಯೊಂದಿಗೆ ಸೇವೆ ಒದಗಿಸಬೇಕು. ಮದುವೆ ಮತ್ತಿತರ ಶುಭ ಸಮಾರಂಭಗಳನ್ನು ನಡೆಸಲು ಹೊರಾಂಗಣ ಪ್ರದೇಶಗಳಲ್ಲಿ 200 ಹಾಗೂ ಒಳಾಂಗಣದಲ್ಲಿ 100 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದರು.
ದೇವಸ್ಥಾನ ಸೇರಿದಂತೆ ಮತ್ತಿತರ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಕೈಂಕರ್ಯ ಮತ್ತು ದೇವರ ದರ್ಶನಕ್ಕೆ ಮಾತ್ರ ಅನುಮತಿಸಲಾಗಿದೆ. ಕೋವಿಡ್ 2ನೇ ಡೋಸ್ ಲಸಿಕೆ ಪಡೆದವರ ಪ್ರಮಾಣ ಪತ್ರ ಖಚಿತಪಡಿಸಿಕೊಂಡ ನಂತರವಷ್ಟೇ ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಅನುಮತಿಸಬೇಕು. ವಿಶೇಷ ಪೂಜಾ ಸೇವೆಗೆ ಅವಕಾಶವಿರುವುದಿಲ್ಲ. ಧಾರ್ಮಿಕ ಸ್ಥಳಗಳಿಗೆ 50 ಮಂದಿ(ಎರಡು ಡೋಸ್ ಲಸಿಕೆ ಪಡೆದ)ಗೆ ಮಾತ್ರ ಪ್ರವೇಶ ಕಲ್ಪಿಸಬೇಕು ಎಂದು ಸಂಬಂಧಿಸಿದವರಿಗೆ ನಿರ್ದೇಶಿಸಲಾಗಿದೆ ಎಂದರು.