ಕುಣಿಗಲ್
ಕುಣಿಗಲ್ ಪುರಸಭೆಯ ಅಧ್ಯಕ್ಷರಾಗಿ ರಂಗಸ್ವಾಮಿ, ಉಪಾಧ್ಯಕ್ಷರಾಗಿ ಶಬಾನಾ ತಬಸ್ಸುಮ್ ಸದಾಕತ್ ಅವಿರೋಧವಾಗಿ ಆಯ್ಕೆ

ಕುಣಿಗಲ್ : ಕುಣಿಗಲ್ ಪುರಸಭೆಯ ನೂತನ ಅಧ್ಯಕ್ಷರಾಗಿ ಹಿಂದುಳಿದ ವರ್ಗದ ರಂಗಸ್ವಾಮಿ ಉಪಾಧ್ಯಕ್ಷರಾಗಿ ಮುಸ್ಲಿಂ ಸಮುದಾಯದ ಮಹಿಳೆ ಶಬಾನಾ ತಬಸ್ಸುಮ್ ಸದಾಕತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಪುರಸಭೆಗೆ ಈ ಮೊದಲಿದ್ದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಚುನಾವಣೆ ನಡೆದು ಕುಣಿಗಲ್ ಪುರಸಭೆ ನೂತನ ಅಧ್ಯಕ್ಷರಾಗಿ ರಂಗಸ್ವಾಮಿ ಉಪಾಧ್ಯಕ್ಷರಾಗಿ ಶಬಾನಾ ತಬಸ್ಸುಮ್ ಸದಾಕತ್ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ನೂತನ ಅಧ್ಯಕ್ಷ ರಂಗಸ್ವಾಮಿ ಗುರುಗಳಾದ ಸಂಸದ ಡಿ ಕೆ ಸುರೇಶ್ ಹಾಗೂ ಶಾಸಕರಾದ ಡಾ, ಎಚ್ ಡಿ ರಂಗನಾಥ್ ಅವರುಗಳ ಆಶೀರ್ವಾದದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು ತುಂಬ ಸಂತೋಷವನ್ನುಂಟು ಮಾಡಿದೆ. ಇದಕ್ಕೂ ಮುನ್ನ ಅಧ್ಯಕ್ಷ ಸ್ಥಾನಕ್ಕೆ 3ಬಾರಿ ಪೈಪೋಟಿ ಮಾಡಿ ಅಧ್ಯಕ್ಷ ಸ್ಥಾನ ಸಿಗದೆ ವಂಚಿತನಾಗಿದ್ದೆ ಆಗ ಬೇರೆ ಪಕ್ಷದವರು ನನ್ನನ್ನು ಅಧ್ಯಕ್ಷ ನನ್ನಾಗಿ ಮಾಡುತ್ತೇವೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆದಿದ್ದರು ಆದರೆ ನಾನು ನಿರಾಕರಿಸಿದ್ದೆ ಕಾಂಗ್ರೆಸ್ ಪಕ್ಷ ಬೆಳೆದು ನಿಂತಿರುವ ಆಲದ ಮರ ಇದ್ದ ಹಾಗೆ ಇದರಲ್ಲಿ ನಾನು 1ಎಲೆ ಎಂದು ತಿಳಿದುಕೊಂಡು ಪ್ರಾಮಾಣಿಕವಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ನನಗೆ ಅಧ್ಯಕ್ಷ ಸ್ಥಾನ ದೊರಕಿದೆ. ಈಗ ಲಭಿಸಿರುವ ಅಧ್ಯಕ್ಷ ಸ್ಥಾನವನ್ನು ದುರುಪಯೋಗ ಪಡಿಸಿಕೊಳ್ಳದೆ ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಕ್ತಿ ಮೀರಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದ ಅವರು ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಸಂಸದರಿಗೆ ಹಾಗೂ ಶಾಸಕರಿಗೆ ಪುರಸಭೆ ಸದಸ್ಯರುಗಳಿಗೆ ಹಾಗೂ ನನ್ನೆಲ್ಲ ಕಾರ್ಯಕರ್ತರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಶಾಸಕ ಡಾ ಎಚ್ ಡಿ ರಂಗನಾಥ್ ಮಾತನಾಡಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ ಎಂಬುದನ್ನು ಪುರಸಭೆ ಸದಸ್ಯರು ತೋರಿಸಿಕೊಟ್ಟಿದ್ದಾರೆ ಈ ಮೊದಲು ಸಮ್ಮಿಶ್ರ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಪಟ್ಟಣದ ಅಭಿವೃದ್ಧಿಗೆಂದು ನೀಡಿದಂಥ ಅನುದಾನವನ್ನೆಲ್ಲ ಬಿಜೆಪಿ ಸರ್ಕಾರ ಹಿಂಪಡೆದಿದೆ ಆದ್ದರಿಂದ ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದೆ ಆದರೂ ಇದ್ದಂತಹ ಅನುದಾನವನ್ನು ಬಳಸಿಕೊಂಡು ಪಟ್ಟಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದ ಅವರು ಪಟ್ಟಣದ ಅಭಿವೃದ್ಧಿ ವಿಚಾರವಾಗಿ ಎಲ್ಲಾ ಹಂತದಲ್ಲಿಯೂ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಸಹಕಾರ ನೀಡುತ್ತೇನೆ ಎಂದು ತಿಳಿಸಿ ಇಬ್ಬರಿಗೂ ಅಭಿನಂದನೆ ಸಲ್ಲಿಸಿದರು.
ನೂತನ ಅಧ್ಯಕ್ಷ ರಂಗಸ್ವಾಮಿಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟ್ಟಣದ ನಾನಾ ಕಡೆ ಮೆರವಣಿಗೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಎಲ್ಲಾ ಸದಸ್ಯರು ಪಕ್ಷದ ಕಾರ್ಯಕರ್ತರು ಹಾಜರಿದ್ದರು.