ಜನವರಿ 3, 4, 5 ರಂದು ಕಾಲೇಜು ರಂಗೋತ್ಸವ : ನಾಳೆ `ವೀರ ವನಿತೆ ಒನಕೆ ಓಬವ್ವ’ ನಾಟಕ ಪ್ರದರ್ಶನ
ತುಮಕೂರು: ಶಿವಮೊಗ್ಗ ರಂಗಾಯಣದ ವತಿಯಿಂದ ಇದೇ ತಿಂಗಳ 3 ರಿಂದ ಮೂರು ದಿವಸಗಳ ಕಾಲ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರತಿ ದಿನ ಸಂಜೆ 6.30 ಕ್ಕೆ ತುಮಕೂರು ಜಿಲ್ಲಾ ಕಾಲೇಜು ರಂಗೋತ್ಸವ 2021-22 ಹಮ್ಮಿಕೊಳ್ಳಲಾಗಿದೆ ಎಂದು ರಂಗೋತ್ಸವದ ಜಿಲ್ಲಾ ಸಂಚಾಲಕ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
ಕಾಲೇಜು ರಂಗೋತ್ಸವಕ್ಕೆ ಜಿಲ್ಲೆಯ ಮೂರು ಕಾಲೇಜನ್ನು ಆಯ್ಕೆಮಾಡಿಕೊಂಡಿದ್ದು ಕಳೆದ ಒಂದು ತಿಂಗಳಿನಿಂದ ಕಾಲೇಜು ವಿದ್ಯಾರ್ಥಿಗಳು ನಾಟಕದ ತಾಲೀಮಿನಲ್ಲಿ ತೊಡಗಿದ್ದು ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಜನವರಿ 3 ರಂದು ಸಂಜೆ 6.30 ಕ್ಕೆ ಜಿ.ಎಸ್. ಶ್ರೀನಿವಾಸಮೂರ್ತಿ ಅವರು ರಚಿಸಿ ನಿರ್ದೇಶಿಸಿರುವ `ವೀರ ವನಿತೆ ಓಬವ್ವ’ ನಾಟಕ ಪ್ರದರ್ಶನವಿದೆ. ಈ ನಾಟಕದಲ್ಲಿ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ. 4 ರಂದು ದೇವನೂರು ಮಹಾದೇವ ಅವರು ರಚಿಸಿರುವ ನವೀನ ಭೂಮಿ ನಿರ್ದೇಶಿಸಿರುವ ಒಡಲಾಳ ನಾಟಕ ಪ್ರದರ್ಶನವಿದೆ. ಈ ನಾಟಕದಲ್ಲಿ ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನಟಿಸಲಿದ್ದಾರೆ. ಹಾಗೆಯೇ ಜನವರಿ 5 ರಂದು ತುಮಕೂರಿನ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿರುವ ಅಯಸಿಸ್ ನಾಟಕ ಪ್ರದರ್ಶನವಿದೆ. ಈ ನಾಟಕವನ್ನು ರಾಜಪ್ಪ ದಳವಾಯಿ ರಚಿಸಿದ್ದರೆ, ನಿರ್ದೇಶನದ ಜವಾಬ್ದಾರಿಯನ್ನು ಚೇತನ್ ತುಮಕೂರು ಹೊತ್ತಿದ್ದಾರೆ. ಈ ಮೂರು ದಿವಸದ ರಂಗೋತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
ಜನವರಿ 3 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ರಂಗೋತ್ಸವಕ್ಕೆ ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಎಸ್. ಪರಮೇಶ್ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಪ.ಪೂ. ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ಕೆ. ದೊರೈರಾಜು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ರಂಗ ಸಮಾಜದ ಸದಸ್ಯರಾದ ಹೆಲನ್, ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಸ್. ಕುಮಾರ್, ವಿವಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಶಾಲಿನಿ ಹಾಗೂ ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಪ್ರಾಂಶುಪಾಲ ಡಾ. ನಿಂಗಯ್ಯ ಆಗಮಿಸಲಿದ್ದಾರೆ.
5 ರಂದು ನಡೆಯಲಿರುವ ಜಿಲ್ಲಾ ಕಾಲೇಜು ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನು ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಆಡಲಿದ್ದಾರೆ. ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ಲಕ್ಷ್ಮಣದಾಸ್, ಕಾಲೇಜು ರಂಗೋತ್ಸವದ ಪ್ರಧಾನ ಸಂಚಾಲಕ ಪ್ರವೀಣ್ ಎಸ್. ಹಾಲ್ಮೂತ್ತೂರು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಹಾಗೂ ನಾಟಕಮನೆ ಮಹಾಲಿಂಗು ಆಗಮಿಸಲಿದ್ದಾರೆ.