ಮನುಷ್ಯನ ಮಾನಸಿಕ ಆರೋಗ್ಯ ಕಾಪಾಡಲು ಯೋಗ ಮುಖ್ಯ: ವಿಶ್ವದಾಖಲೆಗಾಗಿ 75 ಕೋಟಿ ಸೂರ್ಯ ನಮಸ್ಕಾರ: ಸಿದ್ಧಗಂಗಾಶ್ರೀ
ತುಮಕೂರು: ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ದೊಡ್ಡ ಸಾಧನ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಸಿದ್ದಗಂಗಾ ಮಠದಲ್ಲಿ 75ನೇ ಸ್ವಾತಂತ್ರ್ಯದ ಸವಿನೆನಪಿಗಾಗಿ ಏರ್ಪಡಿಸಿದ್ದ ವಿಶ್ವದಾಖಲೆ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ವಿಶ್ವಕ್ಕೆ ನಮ್ಮ ದೇಶದ ದೊಡ್ಡ ಕೊಡುಗೆ ಯೋಗ. ಯೋಗ ಈಗ ವಿದೇಶಗಳಲ್ಲೂ ಪ್ರಸಿದ್ದಿಯಾಗಿದ್ದು, ಪ್ರತಿಯೊಬ್ಬರೂ ಯೋಗ ಮಾಡುವತ್ತ ಚಿತ್ತ ಹರಿಸಿದ್ದಾರೆ. ಇದೊಂದು ಉತ್ತಮ ಆರೋಗ್ಯಕ್ಕೆ ಪ್ರಮುಖ ಸಾಧನವಾಗಿದೆ ಎಂದರು.
ಚಿಕ್ಕಂದಿನಿಂದಲೂ ಯೋಗಾಭ್ಯಾಸ ಮಾಡಿದರೆ ಮಾನಸಿತ ಸ್ಥಿತಿ ಸಮಚಿತ್ತದಿಂದ ಇರುತ್ತದೆ. ಜತೆಗೆ ಆತ್ಮತೃಪ್ತಿ, ಸಂತೋಷ, ಸುಖ, ನೆಮ್ಮದಿಯೂ ಪ್ರಾಪ್ತಿಯಾಗುತ್ತದೆ ಎಂದರು.
ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮತೋಲನ ಕಾಪಾಡಲು ಸಹ ಯೋಗ ಸಹಕಾರಿಯಾಗಿದೆ ಎಂದ ಅವರು, ಸೂರ್ಯನಮಸ್ಕಾರದಲ್ಲಿ 12 ಆಸನಗಳಿದ್ದು, ಒಂದೊಂದು ಆಸನವೂ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿದೆ. ಧ್ಯಾನ, ಪ್ರಾಣಾಯಾಮ ಮನುಷ್ಯನ ಉಸಿರಾಟವನ್ನು ಸರಾಗಗೊಳಿಸುತ್ತವೆ ಎಂದರು.
ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತಿ ಮುಖ್ಯ. ಆರೋಗ್ಯವೇ ಭಾಗ್ಯ. ಬದುಕಿನಲ್ಲಿ ಆರೋಗ್ಯಕ್ಕಿಂತ ಮಿಗಿಲಾದ್ದು ಬೇರೇನೂ ಇಲ್ಲ. ನಾವು ಆಯುಷ್ಯ ಪೂರ್ತಿ ಆರೋಗ್ಯಯುತವಾಗಿ ಬದುಕಬೇಕಾದರೆ ಶಿಸ್ತುಬದ್ಧ ಜೀವನ, ಯೋಗ ಅತ್ಯವಶ್ಯ ಎಂದರು.
ಆರೋಗ್ಯವಂತ ಮನುಷ್ಯ ನಿಜವಾದ ಸಂಪತ್ತು ಉಳ್ಳಂತಹವನು. ಅವನೇ ಶ್ರೀಮಂತ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯ ಶ್ರೀಮಂತಿಕೆ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಪ್ರಸ್ತುತ ದಿನಗಳಲ್ಲಿ ಗಾಳಿ, ನೀರು, ಆಹಾರ, ಪರಿಸರ ಕಲುಷಿತವಾಗಿದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತಿದೆ. ಶಿಸ್ತು ಬದ್ಧ ಜೀವನ ಮತ್ತು ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದರು.
ಸೂರ್ಯ ನಮಸ್ಕಾರವನ್ನು ಅಚ್ಚುಕಟ್ಟಾಗಿ ಮಾಡಿದರೆ ಬೇರೆ ಯಾವ ಆಸನವನ್ನು ಮಾಡುವ ಅಗತ್ಯವಿಲ್ಲ. ಸೂರ್ಯ ನಮಸ್ಕಾರವನ್ನು ಕ್ರಮಬದ್ಧವಾಗಿ, ನಿಯಮ ಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಅಳವಡಿಸಿಕೊಂಡು ಮಾಡಬೇಕು ಎಂದು ಹೇಳಿದರು.
ಯೋಗ ನಮ್ಮ ಮನಸ್ಸಿನ ನಿರೋಗವನ್ನೆಲ್ಲಾ ಹೋಗಲಾಡಿಸಿ ನೆಮ್ಮದಿ ತರುವುದರ ಜತೆಗೆ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದರು.
ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು. ಇದನ್ನು ಗುರುವಿನ ಮಾರ್ಗದರ್ಶನದಲ್ಲೆ ಕಲಿತು ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಆರೋಗ್ಯದ ಮೂಲಕ ಅಮೃತತ್ವವನ್ನು ಹೊಂದುವ ಕೆಲಸ ಮಾಡೋಣ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಾಗಾರವನ್ನು ನಡೆಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಅಂತಾರಾಷ್ಟ್ರೀಯ ಯೋಗ ಸಂಸ್ಥೆಯ ನಿರಂಜನಮೂರ್ತಿ ಮಾತನಾಡಿ, ಮಾನವ ಪ್ರಾಣಿಯನ್ನು ಹೊರತುಪಡಿಸಿದರೆ ಯಾವ ಪ್ರಾಣಿಯನ್ನು ಕೂರಿಸಿ ಯೋಗ ಮಾಡಿಸುವ ಅಗತ್ಯವಿಲ್ಲ. ಮನುಷ್ಯ ಎಂಬ ಪ್ರಾಣಿಗೆ ಮಾತ್ರ ಇದು ಅವಶ್ಯಕತೆ ಇದೆ ಎಂದರು.
ನಮ್ಮ ಮನಸ್ಸಿಗೆ ಕೊಂಚ ಅಸಮಾಧಾನ, ಶ್ರಮವಾದರೆ ಸೋಮಾರಿಯಾಗಿ, ವಿರಮಿಸುವತ್ತ ಗಮನ ಹರಿಸುತ್ತೇವೆ. ಹಾಗಾಗಿ ಮಾನವನಿಗೆ ಅತ್ಯವಶ್ಯಕವಾಗಿ ಸೂರ್ಯ ನಮಸ್ಕಾರ ಬೇಕಾಗಿದೆ. ಉಸಿರಾಟದ ಅಭ್ಯಾಸಗಳನ್ನು ಸೂರ್ಯ ನಮಸ್ಕಾರದಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಮಕ್ಕಳು ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.
ಈ ಸಂದರ್ಭದಲ್ಲಿ ಮೈಸೂರಿನ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.