ಶೋಷಿತರಿಗೆ ಆತ್ಮಗೌರವ ಮೂಡಿಸಿದ ದಿನವೇ ಕೋರೆಗಾಂ ವಿಜಯೋತ್ಸವ ದಿನ: ಟೈರ್ ರಂಗನಾಥ್
ಶಿರಾ : ಇಡೀ ಪ್ರಪಂಚದಲ್ಲಿ ಸ್ವಾಭಿಮಾನಕ್ಕಾಗಿ ಯುದ್ಧ ನಡೆದಿದ್ದರೆ ಅದು ಕೋರೆಗಾಂ ಯುದ್ಧ. ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದು ಪೇಶ್ವೆಗಳ ವಿರುದ್ದ ಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿದ ಹಾಗೂ ಶೋಷಿತರ ಆತ್ಮಗೌರವ ಮೂಡಿಸಿದ ಆತ್ಮಾಭಿಮಾನದ ದಿನವೇ ಕೋರೆಗಾಂವ್ ವಿಜಯೋತ್ಸವದ ದಿನವಾಗಿದೆ ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಅಧ್ಯಕ್ಷ ಟೈರ್ ರಂಗನಾಥ್ ಹೇಳಿದರು.
ಅವರು ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಬಳಿ ಭೀಮಾ ಕೋರೆಗಾಂ ವಿಜಯೋತ್ಸವ ಆಚರಿಸಿ ಮಾತನಾಡಿದರು. ಕೋರೆಗಾಂ ಯುದ್ದವು ಹಣ, ಅಂತಸ್ತು, ಸಾಮ್ರಾಜ್ಯಕ್ಕಾಗಿ ನಡೆಯಲಿಲ್ಲ. ಸ್ವಾಭಿಮಾನಕ್ಕಾಗಿ ನಡೆದ ಯುದ್ದವೇ ಭೀಮಾ ಕೋರೆಗಾಂ ಯುದ್ದ. ಸಮಾನತೆಯಲ್ಲಿ ಬದುಕಬೇಕೆಂಬ ಉದ್ದೇಶದಿಂದ ನಡೆದ ಯುದ್ದವೇ ಕೋರೆಗಾಂ ಯುದ್ದ. 1818ರ ಜನವರಿ 1 ರಂದು ಕೇವಲ 500 ಮಂದಿ ಮಹಾರ್ ಯೋಧರು 25 ಸಾವಿರಕ್ಕೂ ಅಧಿಕವಿದ್ದ ಪೇಶ್ವೆ 2ನೇ ಬಾಜೀರಾಯ ಸೇನೆಯನ್ನು ಸೋಲಿಸಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಜಾತೀಯತೆಯ ವಿರುದ್ಧ ಪಡೆದ ಗೆಲುವಾಗಿದೆ. ನಾವುಗಳು ನೈಜ ಇತಿಹಾಸ ತಿಳಿದು ಬದುಕಬೇಕು. ಶೋಷಿತ ಸಮುದಾಯ ಇಂದು ಸಾಮಾಜಿಕವಾಗಿ ಎಲ್ಲರಂತೆ ಜೀವನ ನಡೆಸಲು ಕಾರಣ ಕೋರೆಗಾಂವ್ ವಿಜಯೋತ್ಸವ. ಈ ಇತಿಹಾಸವನ್ನು ಮುಚ್ಚಿ ಹಾಕಲಾಗಿದೆ. ಇವುಗಳನ್ನು ದಲಿತ ಯುವಕರು ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಶಾಂತರಾಜು, ನವೋದಯ ಯುವ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ, ಕೆ.ರಾಜು, ಕಾರೇಹಳ್ಳಿ ರಂಗನಾಥ್, ತಿಪ್ಪೇಶ್, ದಲಿತ ಯುವಸೇನೆಯ ಕುಮಾರ್, ರಂಗನಾಥ್, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.