ಶೇ40 ಪರ್ಸೆಂಟ್ ಕಮಿಷನ್ ಬಿಜೆಪಿ ಸರಕಾರವನ್ನು ಕಿತ್ತೊಗೆಯಿರಿ : ಸಲೀಂ ಅಹಮದ್
ತುಮಕೂರು: ಪಕ್ಷ ಸಂಘಟನೆ ಮತ್ತು ಹೋರಾಟ ಎರಡು ಜೊತೆ ಜೊತೆಯಾಗಿ ನಡೆಯುವ ಮೂಲಕ ರಾಜ್ಯದ ಶೇ40 ಕಮಿಷನ್ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 2022ರ ಜನವರಿ 09 ರಿಂದ 19ರವರೆಗೆ ನಡೆಯುವ ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಮೇಕೆದಾಟು ಯೋಜನೆಯಿಂದ ಕೇವಲ ಬೆಂಗಳೂರಿಗೆ ಅಷ್ಟೇ ಅಲ್ಲ.ಹಳೆ ಮೈಸೂರು ಭಾಗದ ಹಲವಾರು ಜಿಲ್ಲೆಗಳಿಗೆ ಕುಡಿಯುವ ನೀರು,ನೀರಾವರಿಗೆ ಅನುಕೂಲ ವಾಗಲಿದೆ.ಅಲ್ಲದೆ ಹೇಮಾವತಿ, ಹಾರಂಗಿ ಡ್ಯಾಂಗಳ ಮೇಲಿರುವ ಒತ್ತಡ ಕಡಿಮೆಯಾಗುವುದರಿಂದ ಕಾವೇರಿ ಕೊಳ್ಳದ ಹಲವು ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.ಹಾಗಾಗಿ ಈ ಹೋರಾಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ, ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಕಳೆದ ಹಾನಗಲ್ ವಿಧಾನಸಭೆಯ ಉಪಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದು ನಮ್ಮೆಲ್ಲಾ ಕಾರ್ಯಕರ್ತರ ನಿರಂತರ ಪರಿಶ್ರಮಕ್ಕೆ ಸಿಕ್ಕ ಗೆಲುವು. ಅಲ್ಲದೆ ಕಾಂಗ್ರೆಸ್ ಪಕ್ಷದ ಸಿದ್ದಾಂತ ಮತ್ತು ವಿಚಾರಧಾರೆಗಳಿಗೆ ಸಿಕ್ಕ ಜಯ ಎಂಬುದು ನಮ್ಮ ಅಭಿಪ್ರಾಯ. ಜನ ಈಗಾಗಲೇ ಬಿಜೆಪಿಪಕ್ಷವನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಇತ್ತೀಚಿನ ಹಲವು ಚುನಾವಣೆಗಳ ಫಲಿತಾಂಶವೇ ಸಾಕ್ಷಿಯಾಗಿದೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಒಗ್ಗಟ್ಟು ಕಾಪಾಡಿಕೊಂಡು,ಪಕ್ಷವನ್ನು ಬೂತ್ ಮಟ್ಟದಿಂದ ಕಟ್ಟುವ ಕೆಲಸ ಮಾಡಬೇಕೆಂದು ಸಲೀಂ ಅಹಮದ್ ತಿಳಿಸಿದರು.
ಮುಂಬರುವ 2022ರ ಜನವರಿ 09 ರಿಂದ 19ವರೆಗೆ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಈ ಪಾದಯಾತ್ರೆ ಸುಮಾರು 160 ಕಿ.ಮಿ.ಕ್ರಮಿಸಲಿದ್ದು, 100 ಕಿ.ಮಿ.ಗ್ರಾಮೀಣ ಭಾಗದಲ್ಲಿ, 60 ಕಿ.ಮಿ.ನಗರದಲ್ಲಿ ಸಂಚರಿಸಲಿದೆ. ಪ್ರತಿದಿನ ಸಾವಿರಾರು ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ರೂಪುರೇಷೆಗಳ ಕುರಿತಂತೆ ಡಿಸೆಂಬರ್ 26ರ ಭಾನುವಾರ ನಗರದ ಡಿ.ಎನ.ಡಿ.ಎಸ್. ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನಡೆಸಲಿದ್ದು, ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ,ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 40-50 ಸಾವಿರ ಜನರನ್ನು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ನೊಂದಾಯಿಸುವಂತೆ ಈಗಾಗಲೇ ಮುಖಂಡರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ನಾಳೆ ನಡೆಯುವ ಸಭೆಯಲ್ಲಿ ಪ್ರತಿ ಬ್ಲಾಕ್ ನಿಂದ 200 ಜನರು ಭಾಗವಹಿಸಲು ನಿರ್ದೇಶನ ನೀಡಿದ್ದು, ಸಭೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಭಾಗವಹಿಸಬೇಕೆಂದರು.
ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್,ಡಾ.ರಮೇಶ್‌ಬಾಬು,ಮುಖಂಡರಾದ ಮುರುಳೀಧರ ಹಾಲಪ್ಪ, ಹೊನ್ನಗಿರಿಗೌಡ,ಚಂದ್ರಶೇಖರಗೌಡ ಅವರುಗಳು ಸಭೆಯನ್ನು ಕುರಿತು ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್,ಅಸಂಘಟಿತ ಕಾರ್ಮಿಕ ವಿಭಾಗದ ಡಾ.ಇಂತಿಯಾಜ್ ಅಹಮದ್, ಮಂಜುನಾಥ್,ವಿ.ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.