ಶಿರಾ ನಗರಸಭೆ ವಾರ್ಡ್ ನಂ. 21ರ ಕಾಂಗ್ರೆಸ್ ಅಭ್ಯರ್ಥಿ ಚಾಂದ್‌ಪಾಷ ನಿಧನ, ಚುನಾವಣೆ ಮುಂದೂಡಿಕೆ
ಶಿರಾ : ಶಿರಾ ನಗರಸಭೆಗೆ ವಾರ್ಡ್ ನಂ. 21ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ನಗರಸಭಾ ಸದಸ್ಯರಾಗಿದ್ದ ಅಲ್ ಹಜ್ ಚಾಂದ್ ಪಾಷ (72) ಅವರು ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಳೆದ ಸುಮಾರು 18 ವರ್ಷಗಳಿಂದ ಜಾಮಿಯಾ ಮಸೀದಿಯ ಮುತ್ತುವಲ್ಲಿಯಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ, ನಟರಾಜ ಬೀಡಿ ಮಾಲೀಕರಾಗಿದ್ದರು. ಮತ್ತು ಅರ್ ರೆಹಾನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು.
ಶುಕ್ರವಾರ ವಾರ್ಡಿನಲ್ಲಿ ಪ್ರಚಾರ ನಡೆಸಿ ಸುಸ್ತಾಗಿದ್ದ ಚಾಂದ್ ಪಾಷ ಅವರು ರಾತ್ರಿ ಸುಮಾರು 3 ಗಂಟೆಗೆ ಎದೆ ನೋವು ಕಾಣಿಸಿಕೊಂಡು ತಕ್ಷಣ ಶಿರಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ತುಮಕೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಸಂತಾಪ: ಮಾಜಿ ನಗರಸಭಾ ಸದಸ್ಯ ಅಲ್ ಹಜ್ ಚಾಂದ್ ಪಾಷ ಅವರ ನಿಧನಕ್ಕೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ರೇಷ್ಮೆ ಉದ್ಯಮಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ತೆಂಗು ಮತ್ತು ನಾರು ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ನಗರಸಭಾ ಅಧ್ಯಕ್ಷ ಅಮಾನುಲ್ಲಾ ಖಾನ್, ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಮಾಜಿ ತಾ.ಪಂ. ಅಧ್ಯಕ್ಷ ಸತ್ಯಪ್ರಕಾಶ್, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮಾಜಿ ಜಿ.ಪಂ. ಸದಸ್ಯ ಸಿ.ಆರ್.ಉಮೇಶ್, ಮಾಜಿ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಜಿ.ಗೋವಿಂದಪ್ಪ, ಅಹಿಂದ ಯುವ ಮುಖಂಡ ರೂಪೇಶ್ ಕೃಷ್ಣಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಚುನಾವಣೆ ಮುಂದೂಡಿಕೆ: ಶಿರಾ ನಗರಸಭೆ ಚುನಾವಣೆಯ ವಾರ್ಡ್ ನಂ. 21 ರ ಕಾಂಗ್ರೆಸ್ ಅಭ್ಯರ್ಥಿ ಚಾಂದ್‌ಪಾಷ ಅವರು ನಿಧನ ಹೊಂದಿರುವುದರಿಂದ ಅವರ ಮಗನಾದ ಇರ್ಷಾದ್ ಪಾಷ ಅವರು ಸದರಿ ವಾರ್ಡಿನ ಚುನಾವಣೆಯನ್ನು ಮುಂದೂಡಬೇಕೆಂದು ಮನವಿ ಸಲ್ಲಿಸಿರುವುದರಿಂದ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು 1977 ರ ನಿಯಮ 28(ಸಿ) ರಂತೆ ಡಿ.27 ರಂದು ನಿಗಧಿಯಾಗಿದ್ದ ವಾರ್ಡ್ ನಂ. 21 ರ ಮತದಾನವನ್ನು ಚುನಾವಣಾಧಿಕಾರಿಗಳು ರದ್ದುಪಡಿಸಿದ್ದಾರೆ.