ವೈಜ್ಞಾನಿಕ ಪಶುಪಾಲನೆಯಿಂದ ಹೈನುಗಾರಿಕೆಗೆ ಲಾಭದಾಯಕ : ಡಾ.ರೆ.ಮ.ನಾಗಭೂಷಣ
ಹುಳಿಯಾರು: ಹಳೆ ಕಾಲದ ನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕವಾಗಿ ಪಶು ಪಾಲನಾ ಕ್ರಮಗಳನ್ನು ಅನುಸರಿಸಿದರೆ ಹೈನುಗಾರಿಕೆ ಲಾಭದಾಯಕವಾಗಿ ವರದಾನವಾಗುತ್ತದೆ ಎಂದು ಚಿಕ್ಕನಾಯಕನಹಳ್ಳಿ ಪಶುಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರೆ.ಮ.ನಾಗಭೂಷಣ ತಿಳಿಸಿದರು.
ಹುಳಿಯಾರು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ದ ಪಶು ಆರೋಗ್ಯ ಉಚಿತ ತಪಾಸಣೆ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿಗೆ ಅತಿಯಾದ ಮಳೆ ಸುರಿದ ನಂತರ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಎಂಬ ಖಾಯಿಲೆಯು ಅನೇಕ ಗ್ರಾಮಗಳ ಕಂಡು ಬಂದಿರುತ್ತದೆ. ಇದು ಮಾರಣಾಂತಿಕ ರೋಗ ಅಲ್ಲದಿದ್ದರೂ ಮೈತುಂಬಾ ಗುಳ್ಳೆಗಳು ಕಂಡು ಬಂದು ನಂತರ ಗಂಟುಗಳಾಗಿ ವಿಪರೀತ ನೋವು ಉಂಟುಮಾಡುತ್ತದೆ. ಪಶುವೈದ್ಯರ ಸಲಹೆ ಮೇರೆಗೆ ಔಷದೋಪಚಾರವನ್ನು ಕ್ರಮಬದ್ದವಾಗಿ ನಡೆಸಿದ್ದಲ್ಲಿ ರೋಗವನ್ನು ಹತೋಟಿಗೆ ತರಲು ಸಾಧ್ಯವಿದೆ ಎಂದು ತಿಳಿಸಿದರು.
ಅನುಗ್ರಹ ಯೋಜನೆಯ ಅಡಿಯಲ್ಲಿ ರೋಗ ಅಥವಾ ಆಕಸ್ಮಿಕ ಅನಾಹುತಗಳಿಂದ ಮರಣಿಸುವ ಕುರಿ/ಮೇಕೆಗಳಿಗೆ ಸರ್ಕಾರವು ತಲಾ 5 ಸಾವಿರ ರೂ.ಗಳ ಪರಿಹಾರ ನೀಡುವ ಕಾರ್ಯಕ್ರಮವನ್ನು ಮತ್ತೆ ಚಾಲ್ತಿಗೆ ತಂದಿರುತ್ತದೆ. ಇದರ ಉಪಯೋಗವನ್ನು ರೈತರು ಉಪಯೋಗಿಸಿಕೊಳ್ಳಿ ಎಂದು ತಿಳಿಸಿದರು.
ಹೊಯ್ಸಳಕಟ್ಟೆ ಪಶು ಆಸ್ಪತ್ರೆ ಪಶುವೈದ್ಯಾಧಿಕಾರಿ ಕಾವ್ಯಾ ಇವರ ನೇತೃತ್ವದಲ್ಲಿ 38 ಕರುಗಳಿಗೆ ಐವರ್‌ಮೆಕ್ಸಿನ್ ಎಂಬ ಜಂತುನಾಶಕ ಮತ್ತು ವಿಟಮಿನ್‌ಯುಕ್ತ ಚುಚ್ಚುಮದ್ದಗಳನ್ನು ನೀಡಲಾಯಿತು. ಪ್ರತಿ ಕರುವಿಗೆ ಜಂತುನಾಶಕ ಔಷದಿಯನು ಕುಡಿಸಲಾಯಿತು. ನಂತರ ಕರುಗಳಿಗೆ ಪ್ರತಿದಿನ ಕುಡಿಸಲೆಂದು ಲವಣ, ಖನಿಜ ಮತ್ತು ಜೀವಸತ್ವಗಳ ಅಂಶಗಳಿರುವ ಆರೋಗ್ಯ ವರ್ಧಕ ಟಾನಿಕ್ ಅನ್ನು ನೀಡಲಾಯಿತು. ಗ್ರಾಮದ 697 ಕುರಿ ಮತ್ತು 116 ಮೇಕೆಗಳಿಗೆ ಜಂತುನಾಶಕ ಔಷದಿಗಳನ್ನು ವಿತರಿಸಲಾಯಿತು.
67 ಜಾನುವಾರುಗಳಿಗೆ ಜಂತು ನಾಶಕ ಔಷದಿಯನ್ನು ಕುಡಿಸಲಾಯಿತು. 16 ರಾಸುಗಳ ಗರ್ಭಪರೀಕ್ಷೆ ನಡೆಸಲಾಯಿತು. ಗರ್ಭಧರಿಸಿದ ಎಲ್ಲಾ ರಾಸುಗಳಿಗೆ ಲವಣ/ಖನಿಜ ಮಿಶ್ರಣವನ್ನು ನೀಡಲಾಯಿತು. 19 ರಾಸುಗಳಿಗೆ ಸಾಮಾನ್ಯ ತೊಂದರೆಗಳಿಗೆ ಚಿಕಿತ್ಸೆ ನೀಡಲಾಯಿತು. 10 ಬಂಜೆತನ/ಗರ್ಭಕೋಶಗಳ ತೊಂದರೆಗೆ ಸಮಗ್ರ ಚಿಕಿತ್ಸೆಯನ್ನು ನೀಡಲಾಯಿತು.
ಗಾಣಧಾಳು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಯೋಗೀಶ್, ಗ್ರಾಮ ಪಂಚಾಯಿತಿ ಸದಸ್ಯ ರಘುವೀರ್, ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಸೇವಾನಾಯ್ಕ, ದಬ್ಬಘುಂಟೆ ಪಶುವೈದ್ಯಕೀಯ ಪರೀಕ್ಷಕರಾದ ವೆಂಕಟಪ್ಪ, ಪಶುವೈದ್ಯಕೀಯ ಪರೀಕ್ಷಕರಾದ ಭವ್ಯರಾಣಿ, ಕಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಚಂದ್ರಶೇಕರ್, ಸಿಬ್ಬಂದಿಗಳಾದ ಅತಾವುಲ್ಲಾ, ಕಾಮಾಕ್ಷಿ. ಅಭಿಷೇಕ್, ಸಿದ್ದೇಶ್, ಗಜೇಂದ್ರ, ಅತೀಕ್, ಮುಖ್ಯಸ್ಥರಾದ ಈರಣ್ಣ, ದೊಡ್ಡರಂಗಪ್ಪ, ಚಿದಾನಂದಮೂರ್ತಿ ಭಾಗವಹಿಸಿದ್ದರು.