ಕನ್ನಡ ದ್ವಜಕ್ಕೆ ಅಪಮಾನ : ಜಯಕರ್ನಾಟಕ ಸಂಘಟನೆ ಪ್ರತಿಭಟನೆ
ಪಾವಗಡ : ಕನ್ನಡ ನಾಡಿನ ಧ್ವಜವನ್ನು ಸುಟ್ಟು ಕನ್ನಡಿಗರಿಗೆ ಅಪಮಾನ ಮಾಡಿದ ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ತಾಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಗೋವರ್ಧನ್ ಒತ್ತಾಯಿಸಿದರು.
ಪಟ್ಟಣದ ಎಸ್.ಎಸ್.ಕೆ ವೃತ್ತದಲ್ಲಿ ಶಿವಸೇನೆ ಮತ್ತು ಎಂಇಎಸ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲೆ ಪ್ರತಿ ಕನ್ನಡಿಗರ ಸ್ವತ್ತಾಗಿದ್ದು ಕನ್ನಡ ನಾಡು, ನುಡಿ, ನೆಲ, ಜಲಗಳಿಗೆ ಧಕ್ಕೆ ತರಲು ಮಹಾರಾಷ್ರö್ಟದ ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದು ಕನ್ನಡಿಗರ ಮುಂದೆ ನಿಮ್ಮ ಪಿತೂರಿ ನಡೆಯುವುದಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲು ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ಉತ್ತರ ನೀಡಬೇಕಿದೆ ಎಂದರು.
ಈ ಕೂಡಲೆ ಮುಖ್ಯಮಂತ್ರಿಗಳು ಮಹರಾಷ್ಟ್ರದ ಶಿವಸೇನೆ ಮತ್ತು ಎಂಇಎಸ್ ಪುಂಡ ಕಾರ್ಯಕರ್ತರ ವಿರುದ್ದ ಕಠಿಣ ಕ್ರಮಕ್ಕೆ ಅಧಿಕಾರಿಗಳಿ ಸೂಚಿಸಿ ಕ್ರಮ ಜರುಗಿಸುವ ಮೂಲಕ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟಿಸಿ ಶಿವಸೇನೆ ಮತ್ತು ಎಂಇಎಸ್ ಪ್ರತಿಕೃತಿ ದಹನ ಮಾಡಲಾಗಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ಮುಂಭಾಗದಲ್ಲಿ ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರ ವಿರುದ್ದ ಘೋಷಣೆ ಕೂಗಿದ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರ್ ನಾಗರಾಜು ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದ ಉಪಾಧ್ಯಕ್ಷ ಗೋಪಾಲ್, ಸಂ.ಕಾರ್ಯದರ್ಶಿ ಡಿ.ರಫೀ, ಕಾಯದರ್ಶಿ ಪಾಂಡುರಂಗಪ್ಪ, ನರೇಶ್, ಕೆ.ವಿ.ರಮೇಶ್, ಮಹೇಶ್, ಲಿಂಗದಹಳ್ಳಿ ತಿಪ್ಪೇಸ್ವಾಮಿ, ಹನುಂತು ಸೇರಿದಂತೆ ತಾಲೂಕು ಹಾಗೂ ಹೋಬಳಿ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.