ತುಮಕೂರು

ಡಿಸೆಂಬರ್ 21ಕ್ಕೆ ಮುನಿಸಿಪಲ್ ನೌಕರರಿಂದ ಬೆಳಗಾವಿ ಚಲೋ : ಸೈಯದ್ ಮುಜೀಬ್

ತುಮಕೂರು: ಪೌರಕಾರ್ಮಿಕರ ಖಾಯಂ, ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ ಪದ್ದತಿ ರದ್ದತಿ ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮುನ್ಸಿಪಲ್ ನೌಕರರು ಡಿಸೆಂಬರ್ 21 ರಂದು ಬೆಳಗಾವಿ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ತಿಳಿಸಿದ್ದಾರೆ.
ಜನ ಚಳವಳಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲದೆ,ಗುತ್ತಿಗೆ,ಹೊರಗುತ್ತಿಗೆ,ನೇರ ಪಾವತಿ ಹೀಗೆ ಹಲವು ರೀತಿಯಲ್ಲಿ ನಗರದ ಕಸ ಸ್ವಚ್ಚಗೊಳಿಸಿ,ರೋಗ ರಜೀನಗಳಿಂದ ದೂರ ಮಾಡುವ ಪೌರಕಾರ್ಮಿಕರು,ಲೋಡರ್‌ಗಳು, ವಾಟರ್‌ಮನ್‌ಗಳು, ಕಸದ ಆಟೋ ಚಾಲಕರು, ಕಂಪ್ಯೂಟರ್ ಅಪರೇರ‍್ಸ್ಗಳು ಸ್ಥಿತಿ ಅತಂತ್ರದಲ್ಲಿದೆ.20 ರಿಂದ 22 ವರ್ಷಗಳ ಕೆಲಸ ಮಾಡಿದರೂ ಸೇವೆ ಖಾಯಂ ಇಲ್ಲದೆ,ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲದೆ ಪರಿತಪಿಸುತ್ತಿದ್ದಾರೆ.ಈ ಎಲ್ಲಾ ಬೇಡಿಕೆಗಳ ಬಗ್ಗೆ ಸಂಬಂಧಪಟ್ಟ ಸಚಿವರು,ಶಾಸಕರು,ಡಿಎಂಎಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ರೀತಿಯ ಸ್ಪಂದನೆ ಇಲ್ಲ. ಹಾಗಾಗಿ ನಮ್ಮ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಡಿಸೆಂಬರ್ 21ರಂದು ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು.
ಪೌರಕಾರ್ಮಿಕರು, ವಾಟರ್‌ಮನ್‌ಗಳು ಇನ್ನಿತರ ನೌಕರರ ಬಗ್ಗೆ ರಾಜ್ಯ ಹೈಕೋರ್ಟಿನಿಂದ ಹಿಡಿದು, ಸುಪ್ರಿಂಕೋರ್ಟು ಸಹ ಇವರ ಸೇವೆಯನ್ನು ಖಾಯಂಗೊಳಿಸಬೇಕೆಂದು ತೀರ್ಪು ನೀಡಿದ್ದರೂ ಅಧಿಕಾರಿಗಳು, ಸದರಿ ತೀರ್ಪುಗಳ ವಿರುದ್ದ ಮೇಲ್ಮನವಿ ಸಲ್ಲಿಸುತ್ತಾ, ನ್ಯಾಯಾಲಯದ ತೀರ್ಪು ಜಾರಿ ಮಾಡುವುದನ್ನು ವಿಳಂಬ ಮಾಡುತ್ತಿದ್ದಾರೆ.ಹಾಗಾಗಿ ಸರಕಾರದ ಗಮನ ಸೆಳೆಯಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಒಂದು ವೇಳೆ ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ 2022ರ ಫೆಬ್ರವರಿ 23 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸೈಯದ್ ಮುಜೀಬ್ ತಿಳಿಸಿದರು.
ಕೇಂದ್ರ ಸರಕಾರದ ನಿಯಮದ ಪ್ರಕಾರ ಕನಿಷ್ಠ ಕೂಲಿ ಎಂದರೆ, ಕೇಂದ್ರ ಸರಕಾರದ ಡಿ ದರ್ಜೆ ನೌಕರರಿಗೆ ನೀಡುವ ವೇತನವಾಗಿದೆ.ಹಾಗಾಗಿ ರಾಜ್ಯದ 200ಕ್ಕು ಹೆಚ್ಚು ಮುನಿಸಿಪಾಲಿಟಿಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಕನಿಷ್ಠ ಮಾಸಿಕ 24 ಸಾವಿರ ರೂ ವೇತನ ನೀಡಬೇಕಾಗಿದೆ. ಆದರೆ ರಾಜ್ಯ ಸರಕಾರ ಕೇವಲ 14 ರಿಂದ 15 ಸಾವಿರ ರೂ ನೀಡುತ್ತಿದ್ದಾರೆ. ಅಲ್ಲದೆ ಫಿ.ಎಫ್., ಇಎಸ್‌ಐ ಬಗ್ಗೆ ಸಾಕಷ್ಟು ಗೊಂದಲಗಳಿವೆ.ಗುತ್ತಿಗೆದಾರರು ಹಲವು ವರ್ಷಗಳಿಂದ ಕೆಲ ನೌಕರರ ಪಿ.ಎಫ್.ಭರ್ತಿ ಮಾಡಿಲ್ಲ.ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊAಡು ಡಿಸೆಂಬರ್ 21 ರಂದು ಬೆಳಗಾವಿ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ 19 ಜಿಲ್ಲೆಗಳಿಂದ ಸುಮಾರು 1000-1500 ಜನ ಪೌರಕಾರ್ಮಿಕರು, ಮುನಿಸಿಪಲ್ ನೌಕರರು ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದು, ತುಮಕೂರಿನಿಂದ 700ಕ್ಕು ಹೆಚ್ಚು ಜನರು ಬೆಳಗಾವಿ ಚಲೋ ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸೈಯದ್ ಮುಜೀಬ್ ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯ ಮುಖಂಡರಾದ ಎನ್.ಕೆ.ಸುಬ್ರಮಣ್ಯ ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋರೋನ ವೇಳೆಯಲ್ಲಿ ಕೆಲಸ ಮಾಡಿದ ಮುನ್ಸಿಪಲ್ ನೌಕರರನ್ನು ಕೋರೋನ ವಾರಿಯರ್ಸ ಎಂದು ಸಂಬೋಧಿಸಿ, ಅವರಿಗೆ ಹಾರ ತುರಾಯಿ ಹಾಕಿ,ಹೂ ಮಳೆ ಸುರಿಸಿ,ಗೌರವಿಸುವ ನಾಟಕ ಮಾಡಿತ್ತು.ಆದರೆ ಕೋರೋನ ಸಂದರ್ಭದಲ್ಲಿ ಕೆಲಸ ಮಾಡುತ್ತಲೇ ಆಸು ನೀಗಿದ ನೂರಾರು ಪೌರಕಾರ್ಮಿಕರಿಗೆ ಇದುವರೆಗೂ ಪರಿಹಾರ ದೊರೆತ್ತಿಲ್ಲ. ಇಲ್ಲದ ಸಬೂಬು ಹೇಳಿ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸಹಕಾರ್ಯದರ್ಶಿ ಸಿ.ವೆಂಕಟೇಶ್, ಖಜಾಂಚಿ ಮಂಜುನಾಥ್, ತುಮಕೂರು ಮಹಾನಗರ ಪಾಲಿಕೆ ಕಸದ ಆಟೋ ಚಾಲಕರು ಮತ್ತು ಸಹಾಯಕರ ಸಂಘದ ಅಧ್ಯಕ್ಷರಾದ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker