ಕುಣಿಗಲ್
ಹಂಗರಹಳ್ಳಿ ಕಲ್ಲುಗಣಿಗಾರಿಕೆ ಪ್ರಾಣಿ ಸಂಕುಲಕ್ಕೆ ಮಾರಕ : ಸಿ.ಎಸ್.ದ್ವಾರಕನಾಥ್
ಕುಣಿಗಲ್ : ತಾಲ್ಲೂಕಿನ ಕಸಬಾ ಹೋಬಳಿ ಹಂಗರಹಳ್ಳಿ ಸರ್ವೆ ನಂಬರ್ 46 ಮತ್ತು ಹಂದಲಕುಪ್ಪೆ ಸರ್ವೆ ನಂಬರ್ 198ರಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿರುವುದು ಮಾನವ ಸಂಕುಲಕ್ಕೆ ಪ್ರಾಣಿ ಸಂಕುಲಕ್ಕೆ ಮಾರಕವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಸಿ ಎಸ್ ದ್ವಾರಕನಾಥ್ ಆತಂಕ ವ್ಯಕ್ತಪಡಿಸಿದರು.
ಕಲ್ಲು ಗಣಿಗಾರಿಕೆ ಸಮೀಪ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸರ್ಕಾರ ಕಲ್ಲುಗಣಿ ಗುತ್ತಿಗೆ ನೀಡುವಾಗ ಕಲ್ಲುಗಣಿ ಗುತ್ತಿಗೆ ಪಡೆಯುವ ಮಾಲೀಕರಿಗೆ ವಿಧಿಸಿರುವ ಷರತ್ತು ಗಳ ಅನ್ವಯ ನಿಗದಿಯಾದ ಸ್ಥಳದಲ್ಲಿ ಕಲ್ಲುಗಣಿಗಾರಿಕೆ ಮಾಡುತ್ತಿಲ್ಲ. ಸರ್ಕಾರ ನಿಗದಿಪಡಿಸಿರುವ ಪ್ರಮಾಣ ಮೀರಿ ಕಲ್ಲು ಸಂಪತ್ತನ್ನು ಅಕ್ರಮವಾಗಿ ಹೊರತೆಗೆದು ಸರ್ಕಾರ ಕಾಲಕಾಲಕ್ಕೆ ನಿಗದಿಪಡಿಸಿದ ರಾಜಧನವನ್ನು ಪಾವತಿಸದೆ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ.
ಕಲ್ಲುಗಣಿಗಾರಿಕೆ ಸ್ಥಳದಲ್ಲಿ ಬಂಡೆಯನ್ನು ಸ್ಪೋಟ ಮಾಡುವಾಗ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಗತ್ಯಕ್ಕೆ ಬೇಕಾಗಿರುವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಎದ್ದು ಕಾಣುತ್ತಿದೆ
ಕಲ್ಲು ಗಣಿಗಾರಿಕೆ ಮಾಡುವ ಮಾಲೀಕರು ಗಣಿಗಾರಿಕೆ ಸ್ಥಳಕ್ಕೆ ಸ್ಪೋಟಕಗಳನ್ನು ಸಾಗಿಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅವೈಜ್ಞಾನಿಕವಾಗಿ ಯಾವುದೇ ತರಬೇತಿ ಇಲ್ಲದ ವ್ಯಕ್ತಿಗಳನ್ನು ಬಳಸುತ್ತಿರುವುದು ಕಂಡುಬರುತ್ತಿದೆ
ಬಂಡೆ ಸ್ಪೋಟ ಮಾಡುವ ಸಲುವಾಗಿ 40 ರಿಂದ 50 ಅಡಿ ಆಳದವರೆಗೆ ಯಂತ್ರಗಳಿಂದ ಬಂಡೆಕೊರೆದು ಸ್ಫೋಟಿಸುವುದರಿಂದ ಭೂಮಿ ಕಂಪಿಸಿ ಅಕ್ಕ ಪಕ್ಕದ ಗ್ರಾಮದ ಮನೆಯ ಗೊಡೆಗಳು ಬಿರುಕು ಬಿಟ್ಟಿವೆ, ಕೆಲವು ಮನೆಗಳು ಉರುಳಿ ಹೋಗಿವೆ
ಸರ್ಕಾರ ಕಲ್ಲುಗಣಿಗಾರಿಕೆಗೆ ಅನುಮತಿ ನೀಡುವಾಗ ಬಂಡೆ ಸ್ಪೋಟದಿಂದ ಉಂಟಾಗುವ ಶಬ್ದದ ತೀವ್ರತೆ ಹಾಗೂ ಭೂ ಕಂಪನದ ತೀವ್ರತೆಯನ್ನು ಮಾಪನ ಮಾಡಲು ಸೈಸ್ಮೋಮೀಟರ್ ಅಳವಡಿಸಬೇಕೆಂದು ಸ್ಪಷ್ಟವಾಗಿ ಹೇಳಿದ್ದರೂ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳದಲ್ಲಿ ಈ ಮಾಪನವನ್ನು ಅಳವಡಿಸದೇಅಕ್ರಮವಾಗಿಬಂಡೆಸ್ಪೋಟಮಾ ಡಲಾಗುತ್ತಿದೆ.
ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸರ್ವೆ ನಂಬರ್ ಗೆ ಹೊಂದಿಕೊಂಡು ಮೀಸಲು ಅರಣ್ಯ ಇದೆ. ಇಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ದೂಳು ಮತ್ತು ಶಬ್ದ ಮಾಲಿನ್ಯದಿಂದಾಗಿ ಜೀವ ಜಂತುಗಳ ವಿನಾಶಕ್ಕೆ ಕಾರಣವಾಗಿದೆ.
ಸರ್ವೆ ನಂಬರ್ 46 ರ ಗೋಮಾಳ ಜಾಗದಲ್ಲಿ ಕಾಡುಗೊಲ್ಲ ಬುಡಕಟ್ಟು ಜನಾಂಗ ಕುಲ ಕಸುಬಾದ ಕುರಿ ಮೇಯಿಸುವುದನ್ನು ಮಾಡುತ್ತಿದ್ದು ಸದರಿ ಜಾಗದಲ್ಲಿಕಲ್ಲುಗಣಿಗಾರಿಕೆನಡೆಯುತ್ ತಿರುವುದರಿಂದ ಪಶುಪಾಲನೆಗೆ ಮಾಡಲು ಸಾಧ್ಯವಾಗುತ್ತಿಲ್ಲ. ಕಲ್ಲುಗಣಿಗಾರಿಕೆ ನಡೆಯುತ್ತಿರುವ ಸ್ಥಳದಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಲಂಬಾಣಿ ತಾಂಡ್ಯದ ಬಹುತೇಕ ಮನೆಗಳು ಬಿರುಕು ಬಿಟ್ಟಿವೆ ಕೆಲವು ಮನೆಗಳ ಮೇಲ್ಛಾವಣಿ ಬಂಡೆ ಸ್ಪೋಟದ ಕಂಪನಕ್ಕೆ ಕುಸಿದು ಬೀಳುವ ಹಂತದಲ್ಲಿದ್ದು ಇಲ್ಲಿನ ತಾಂಡ್ಯದ ಜನರು ಆತಂಕದಿಂದ ಜೀವನ ಸಾಗಿಸುತ್ತಿದ್ದಾರೆ ಎಂದ ಅವರು ಈ ಹಟ್ಟಿಯ ಜನರು ಕುಡಿಯುವ ನೀರು ಗಣಿಗಾರಿಕೆಯಿಂದ ಸಂಪೂರ್ಣ ಮಲೀನವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ ಎಂದರು.
ಕಸಬಾ ಹೋಬಳಿ ತರೀಕೆರೆ ಗ್ರಾಮ , ಸರ್ವೆ ನಂಬರ್: 80 ಮತ್ತು 81 ರಲ್ಲಿ ಕಾನೂನು ಉಲ್ಲಂಘನೆ ಮಾಡಿ ಕ್ರಷರ್ ಗಳನ್ನು ನಡೆಸುತ್ತಿರುವುದು ಕಂಡುಬಂದಿದೆ ಕಲ್ಲು ಗಣಿಗಾರಿಕೆ ಮಾಡುವ ಮಾಲೀಕರು ಕ್ರಷರ್ ಘಟಕಗಳನ್ನು ಸ್ಥಾಪನೆ ಮಾಡಿದ್ದು ಸರ್ಕಾರ ಗೊತ್ತುಪಡಿಸಿದ ಮಾರ್ಗಸೂಚಿಗಳನ್ನು ಮಾಲೀಕರು ಪಾಲಿಸದೆ ಇರುವುದು ಎದ್ದು ಕಾಣುತ್ತಿದೆ ರೈತರ ಕೃಷಿ ಭೂಮಿಯಲ್ಲಿ ಭೂ ಪರಿವರ್ತನೆ ಮಾಡಿಕೊಳ್ಳದೆ ಕ್ರಷರ್ ಘಟಕಗಳನ್ನು ಸ್ಥಾಪನೆ ಮಾಡಬಾರದೆಂದು ಸರಕಾರದ ನಿಯಮವಿದ್ದರೂ ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಕ್ರಷರ್ ನಡೆಸುತ್ತಿರುವುದು ಎಷ್ಟು ಸರಿ. ಸರ್ಕಾರಿ ಗೋಮಾಳ ಜಾಗದಲ್ಲಿ ಕ್ರಷರ್ ಘಟಕಗಳನ್ನು ಸ್ಥಾಪನೆ ಮಾಡುವಾಗ ಆ ಜಮೀನಿನಲ್ಲಿ ರೈತರು ಕೃಷಿ ಮಾಡುತ್ತಿರಬಾರದು , ಬಗರ್ ಹುಕ್ಕುಂ ಸಾಗುವಳಿ ಭೂ ಸಕ್ರಮಾತಿಗಾಗಿ ಅರ್ಜಿ ಹಾಕಿರುವ ಜಾಗದಲ್ಲಿ ಕ್ರಷರ್ ಘಟಕಗಳಿಗೆ ಭೂ ಮಂಜೂರು ಮಾಡಬಾರದು ಎಂದು ಸರ್ಕಾರದ ನಿಯಮ ಇದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ರೃತರಿಗೆ ಬಗರ್ ಹುಕುಂ ಸಾಗುವಳಿಯಲ್ಲಿ ಮಂಜೂರಾಗಿರುವ ಭೂಮಿಯನ್ನು ಸರ್ಕಾರಿ ಗೋಮಾಳ ಜಾಗ ಎಂದು ಸುಳ್ಳು ವರದಿ ನೀಡಿ ಕ್ರಷರ್ ಮಾಲೀಕರು ಅಕ್ರಮವಾಗಿ ಕ್ರಷರ್ ಸ್ಥಾಪನೆ ಮಾಡಲು ಅನುಕೂಲ ಮಾಡಿಕೊಟ್ಟಿರುವುದು ತಪ್ಪಲ್ಲವೇ ಇದಲ್ಲದೆ ಕ್ರಷರ್ ಮಾಲೀಕರು ತಾವು ಕ್ರಷರ್ ಘಟಕ ಸ್ಥಾಪನೆ ಮಾಡಿರುವ ಸ್ವತ್ತಿನ ವಿವರವನ್ನು ತಪ್ಪಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕ್ರಷರ್ ಮಾಲೀಕರಿಗೆ ತಿಳಿಸಿರುವ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಕ್ರಷರ್ ಘಟಕಗಳಿಂದ ಉತ್ಪಾದನೆಯಾಗುವ ಎಂ . ಸ್ಯಾಂಡ್ ಅನ್ನು ತೊಳೆದ ತ್ಯಾಜವನ್ನು ನೇರವಾಗಿ ಪರಿಸರಕ್ಕೆ ಬಿಡುವುದರಿಂದ ಸುತ್ತಲಿನ ಪರಿಸರಕ್ಕೆ ಹಾನಿ.
ಕ್ರಷರ್ ಘಟಕ ದಿಂದ ಹೊರಸೂಸುವ ದೂಳಿನಿಂದ ಸರ್ವೆ ನಂಬರ್ 80 & 81 ಮತ್ತು ಸರ್ವೆ ನಂಬರ್ 46 ರಲ್ಲಿ ಇರುವ ನೈಸರ್ಗಿಕ ಕಾಲುವೆ ಮುಚ್ಚಿಕೊಂಡಿದ್ದು ಈ ಕಾಲುವೆಯ ನೀರನ್ನು ಆಶ್ರಯಿಸಿದ್ದ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗೆ ತುಂಬಾ ಹಾಹಾಕಾರ ಉಂಟಾಗಿದೆ ಮತ್ತು ರೈತರ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿರುವುದರಿಂದ ದಿನ ನಿತ್ಯ ಸಾವಿರಾರು ಟಿಪ್ಪರ್ ಲಾರಿಗಳು ಸಂಚರಿಸಿ ಅಕ್ಕ ಪಕ್ಕದ ರೈತರ ಬೆಳೆಗಳಿಗೆ ದೂಳು ತುಂಬಿಕೊಂಡು ಬೆಳೆನಾಶವಾಗಿ ಇಲ್ಲಿನ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಈ ಭಾಗದ ರೈತರು ಪಾರಂಪರಿಕ ಮೈಸೂರು ರೇಷ್ಮೆ ಬೆಳೆಯುತ್ತಿದ್ದು ಕ್ರಷರ್ ಪಕ್ಕದಲ್ಲಿನ ಇಪ್ಪನೇರಳೆ ಸೊಪ್ಪಿಗೆ ರಸ್ತೆ ದೂಳು ಕುಳಿತುಕೊಳ್ಳುವುದರಿಂದ ಇಪ್ಪನೇರಳೆ ಹಾಳಾಗಿ ರೇಷ್ಮೆ ಬೆಳೆಯುವ ರೈತರಿಗೆ ತುಂಬಾ ಅನ್ಯಾಯವಾಗಿದೆ ಕಲ್ಲು ಗಣಿಗಾರಿಕೆ ಮಾಡುವ ಮಾಲೀಕರು ರೈತರ ಜಮೀನಿನ ಮೇಲೆ ರಸ್ತೆ ಮಾಡುವಾಗ ಭೂ ಪರಿವರ್ತನೆ ಮಾಡಿಸಿಲ್ಲ ರಸ್ತೆ ನಿರ್ಮಾಣ ಮಾಡುವಾಗ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರುವುದು ಕಂಡು ಬಂದಿಲ್ಲ ಎಂದು ಹತ್ತು ಹಲವಾರು ಆರೋಪಗಳನ್ನು ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲರ ಹೋರಾಟ ಸಮಿತಿ ರಾಜ್ಯ ಸಂಚಾಲಕ ಜಿ ಕೆ ನಾಗಣ್ಣ ಪುರಸಭೆ ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್ ಒಳಗೊಂಡಂತೆ ಧನಂಜಯ,ರಾಜಣ್ಣ,ಮಾರೇಗೌಡ,ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.