ಜಿಲ್ಲೆತುಮಕೂರು

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ : ಹನುಮಂತರಾಯಪ್ಪ ಮತ್ತು ಲೋಕೇಶ್ ಡಿ.ನಾಗರಾಜಯ್ಯ ಗೆಲುವು

ತುಮಕೂರು- ಕರ್ನಾಟಕ ರಾಜ್ಯ ಒಕ್ಕಲಿಗರ ನಿರ್ದೇಶಕ ಸ್ಥಾನಕ್ಕೆ ಡಿ. 12 ರಂದು ಜಿಲ್ಲೆಯಲ್ಲಿ ನಡೆದ ಚುನಾವಣೆಯಲ್ಲಿ ಹನುಮಂತರಾಯಪ್ಪ ಮತ್ತು ಲೋಕೇಶ್ ಡಿ. ನಾಗರಾಜಯ್ಯ ಅವರು ಜಯಭೇರಿ ಭಾರಿಸಿದ್ದಾರೆ.
ನಗರದ ಹೊರವಲಯದ ಸಿರಾ ಗೇಟ್ ಬಳಿ ಇರುವ ಕಾಳಿದಾಸ ಪ್ರೌಢಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆದು ಮಧ್ಯಾಹ್ನ 2 ಗಂಟೆ ಬಳಿಕ ಫಲಿತಾಂಶ ಹೊರ ಬಿದ್ದಿದ್ದು, ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ,ಆರ್, ಹನುಮಂತರಾಯಪ್ಪ ಅವರು 14901 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಲೋಕೇಶ್ ಡಿ. ನಾಗರಾಜಯ್ಯ ಅವರು 11027 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ.
ಡಿ. 12 ರಂದು ರಾಜ್ಯ ಒಕ್ಕಲಿಗರ ಸಂಘದ 2 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಗೆ 7 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಒಕ್ಕಲಿಗ ಸಮುದಾಯದ ಮತದಾರರು ,ಆರ್ ,ಹನುಮಂತರಾಯಪ್ಪ ಮತ್ತು ಲೋಕೇಶ್ ಡಿ. ನಾಗರಾಜಯ್ಯ ಅವರ ಕೈ ಹಿಡಿದಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದ್ದ ಕಪನಿಗೌಡ 211 ಮತ, ಬೆಳ್ಳಿ ಲೋಕೇಶ್ 8022 ಮತ, ಶಿವರಾಮಯ್ಯ 137 ಮತ, ಡಾ. ಸಿ.ಕೆ.ಎಂ. ಗೌಡ 4042 ಮತ ಹಾಗೂ ಸುಜಾತ ನಂಜೇಗೌಡ ಅವರು 6261 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮಾತನಾಡಿದ, ಆರ್, ಹನುಮಂತರಾಯಪ್ಪ ಅವರು, ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ಒಕ್ಕಲಿಗರ ಭವನ ನಿರ್ಮಾಣ, ಆಸ್ಪತ್ರೆ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಮೂಲಕ ಜನಾಂಗದವರ ಋಣ ತೀರಿಸಲು ಶ್ರಮ ವಹಿಸಿ ಕೆಲಸ ಮಾಡುವುದಾಗಿ ಅವರು ಹೇಳಿದರು.
ನನಗೆ ತುಂಬಾ ಸಂತಸವಾಗುತ್ತಿದೆ. ಕುಲಬಾಂಧವರು ನಮ್ಮ ಕೈ ಹಿಡಿದು ನಮ್ಮ ಬಗ್ಗೆ ಒಲವು ತೋರಿಸಿದ್ದಾರೆ. ನಮ್ಮ ಬಗ್ಗೆ ಅತಿಯಾದ ಪ್ರೀತಿ ವಿಶ್ವಾಸ ಇಟ್ಟು ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸಮುದಾಯದ ಜನರ ಆಸೆಯನ್ನು ರಾಜ್ಯ ಸಂಘದಿಂದ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನನಗೆ ಗೆಲುವಿನ ನಿರೀಕ್ಷೆ ಇತ್ತು. ನಾನು ಪ್ರಚಾರಕ್ಕೆ ಹೋದೆಡೆಯಲ್ಲ ಮತದಾರರು ಸಂಪೂರ್ಣ ಭರವಸೆ ನೀಡಿದ್ದರು. ಹಾಗಾಗಿ ಜಿಲ್ಲೆಯ ಮತದಾರರಿಗೆ ಸದಾ ಚಿರಋಣಿಯಾಗಿದ್ದೇನೆ ಎಂದರು.
ಈ ಚುನಾವಣೆ ರಾಜ್ಯ ಒಕ್ಕಲಿಕರ ಸಂಘದ ಅಭಿವೃದ್ಧಿಗೆ ಪ್ರಮುಖವಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಜನಾಂಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ಮತ್ತೊಬ್ಬ ನೂತನ ನಿರ್ದೇಶಕ ಲೋಕೇಶ್ ಡಿ. ನಾಗರಾಜಯ್ಯ ಮಾತನಾಡಿ, ಜನಾಂಗದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ನನ್ನ ಕೈಲಾದಷ್ಟು ಮಟ್ಟಿಗೆ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಜಿಲ್ಲೆಗೆ ದೊರೆಯುವ ಎಲ್ಲ ಸೌಕರ್ಯಗಳನ್ನು ಸಂಘದ ವತಿಯಿಂದ ಒದಗಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನಮ್ಮ ತಂದೆಯವರ ಕೆಲಸ ಕಾರ್ಯಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಿವೆ. ಜನರ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ,ಆರ್, ಹನುಮಂತರಾಯಪ್ಪ ಮತ್ತು ಲೋಕೇಶ್ ಅವರನ್ನು ಜನಾಂಗದ ಮುಖಂಡರುಗಳು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಿಗೌಡ, ಕೆಂಪರಾಜು, ಕೃಷ್ಣಮೂರ್ತಿ, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker