ಸಾಹಿತಿ ಡಾ.ಎಂ.ವಿ.ನಾಗರಾಜರಾವ್ ರವರ ಅಮೃತ ಮಹೋತ್ಸವ
ತುಮಕೂರು: ಜಿಲ್ಲೆಯ ಹಿರಿಯ ಬರಹಗಾರರು, ಆದರ್ಶ ಗುರುಗಳು, ದಕ್ಷ ಅನುವಾದಕರೂ ಆದ ಚಿಕ್ಕನಾಯಕನಹಳ್ಳಿಯ ಡಾ. ಎಂ.ವಿ.ನಾಗರಾಜರಾವ್ ಅವರಿಗೆ 80 ವಸಂತಗಳು ತುಂಬುವ ಸಂದರ್ಭದಲ್ಲಿ ಕವಿತಾಕೃಷ್ಣ ಸಾಹಿತ್ಯ ಮಂದಿರ ಮತ್ತು ಬಾಪೂಜಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ 12ರಂದು ಬೆಳಗ್ಗೆ 10.30ಕ್ಕೆ ನಗರದ ರವೀಂದ್ರ ಕಲಾನಿಕೇತನದಲ್ಲಿ ಅಮೃತೋತ್ಸವವು ಜರುಗಲಿದೆ.
ಡಾ. ಎಂ.ವಿ.ನಾ. ಅಮೃತ ಮಹೋತ್ಸವವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಉದ್ಘಾಟಿಸಲಿದ್ದಾರೆ. ಹಾಗೆಯೇ ಎಂ.ವಿ.ನಾ. ಅವರ ಲಿಯೋಟಾಲ್ಸ್ಟಾಯ್ ಹೃದಯಸ್ಪರ್ಶಿ ಕಥೆಗಳು ಕೃತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಶ್ರಾಣತ ಉಪ ನಿರ್ದೇಶಕ ಹೆಚ್.ಕೆ.ನರಸಿಂಹಮೂರ್ತಿ ಮತ್ತು ಲಿಯೋಟಾಲ್ಸ್ಟಾಯ್ ಮನಮುಟ್ಟುವ ಕಥೆ ಕೃತಿಯನ್ನು ನಿವೃತ್ತ ಪ್ರಾಧ್ಯಾಪಕಿ ಕೃಷ್ಣಾಬಾಯಿ ಹಾಗಲವಾಡಿ ಬಿಡುಗಡೆ ಮಾಡಲಿದ್ದಾರೆ.
ಡಾ. ಎಂ.ವಿ.ನಾಗರಾಜರಾವ್ ಸಾಹಿತ್ಯ ಪ್ರಶಸ್ತಿಯನ್ನು ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಬಸವಯ್ಯ ಮತ್ತು ಶಿರಡಿ ಸಾಯಿನಾಥ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗುರುಸಿದ್ದಪ್ಪ ಪ್ರದಾನ ಮಾಡಲಿದ್ದಾರೆ. ಜಿಲ್ಲೆಯ ಸಾಹಿತಿ, ಸಾಧಕರಾದ ಪೌಳಿ ಶಂಕರಾನಂದಪ್ಪ, ಪ್ರೊ. ಎಸ್.ಆರ್.ದೇವಪ್ರಕಾಶ್, ಗೌರಮ್ಮ ಬಸವಯ್ಯ, ಡಾ. ಯೋಗೀಶ್ವರಪ್ಪ, ಡಾ. ಹೊಲತಾಳ್ ಸಿದ್ದಗಂಗಯ್ಯ, ಜಿ.ಕೆ.ಕುಲಕರ್ಣಿ, ಬಾ.ಹ.ರಮಾಕುಮಾರಿ, ಕಮಲಾ ಬಡ್ಡಿಹಳ್ಳಿ, ಪದ್ಮಾ ಕೃಷ್ಣಮೂರ್ತಿ, ಗಿರಿಸುತ ಮರಿಬಸಪ್ಪ, ಕೃಷ್ಣಮೂರ್ತಿ ಬಿಳಿಗೆರೆ, ಡಾ. ನಂದೀಶ್ವರ್, ಡಾ. ಗಂಗಾಧರ ಕೊಡ್ಲಿಯವರ, ಗಣಪತಿ ಹೆಗಡೆ, ಬ್ಯಾಡನೂರು ನಾಗಭೂಷಣ, ತುರುವೇಕೆರೆ ಪ್ರಸಾದ್, ಡಾ. ಪ್ರಕಾಶ್ ನಾಡಿಗ್, ಕಲಾರತ್ನ ಎಂ.ವಿ.ನಾಗಣ್ಣ, ಪ್ರೊ. ಮ.ಲ.ನ.ಮೂರ್ತಿ, ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಕುಲಭೂಷಣ ಪ್ರಶಸ್ತಿ ಪ್ರದಾನ ಮಾಡಿ ಡಾ. ಎಂ.ವಿ.ನಾಗರಾಜರಾವ್ ದಂಪತಿಗಳನ್ನು ಗೌರವಿಸಲಿದ್ದಾರೆ. ಪ್ರೊ. ರವಿಕುಮಾರ್ ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ.