ತುಮಕೂರು
ಮೊಬೈಲ್ ಶೋರೂಂನ ಶೆಟರ್ ಮೀಟಿ ಮೊಬೈಲ್‌ಗಳನ್ನು ದೋಚಿರುವ ಕಳ್ಳರು
ತುಮಕೂರು: ಮೊಬೈಲ್ ಶೋರೂಂನ ಶೆಟರ್ ಮೀಟಿ ಮೊಬೈಲ್ ಶೋರೂಂಗೆ ನುಗ್ಗಿದ ಕಳ್ಳರು ಬೆಲೆಬಾಳುವ ಮೊಬೈಲ್‌ಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ನಗರದ ಶಿವಕುಮಾರಸ್ವಾಮೀಜಿ ವೃತ್ತದ ಬಳಿಯಿರುವ ಒನ್ ಪ್ಲಸ್ ಮೊಬೈಲ್ ಶೋರೂಂನಲ್ಲಿ ಈ ಘಟನೆ ನಡೆದಿದ್ದು, ಕಳೆದ ರಾತ್ರಿ ಶೋರೂಂನ ಶೆಟರ್ ಮೀಟಿ ಅದರಲ್ಲಿದ್ದ ಸುಮಾರು 40 ಲಕ್ಷ ರೂ.ಗಳ 80ಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್‌ಗಳನ್ನು ಕದ್ದಿದ್ದು, ಶೋ ರೂಂ ನಲ್ಲಿದ್ದ ಸಿಸಿ ಕ್ಯಾಮೆರಾ ಹಾಗೂ ಹೊರಗಿರುವ ಸಿಸಿ ಕ್ಯಾಮೆರಾಗಳಲ್ಲಿ ಪತ್ತೆ ಹಚ್ಚಬಹುದೆಂಬ ಶಂಕೆಯಿಂದ ಸಿಸಿ ಕ್ಯಾಮೆರಾ ಹಾರ್ಡ್ ಡಿಸ್ಕ್ನ್ನೂ ಸಹ ಕದ್ದೊಯ್ದಿದ್ದಾರೆ.
ಸೋಮವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.