ರಾಜ್ಯಕ್ಕೆ ಅನ್ಯಾಯವಾದರೂ ಚಕಾರವೆತ್ತದ ಸರ್ಕಾರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ತುಮಕೂರು: ರಾಜ್ಯದಿಂದ ಇಸ್ರೋಗೆ ಸಂಬಂಧಿಸಿದ ಯುನಿಟ್‌ಗಳನ್ನು ಗುಜರಾತ್‌ಗೆ ಶಿಫ್ಟ್ ಮಾಡುವ ಪ್ರಯತ್ನ ನಡೆಸಿ, ರಾಜ್ಯಕ್ಕೆ ಅನ್ಯಾಯವೆಸಗುತ್ತಿದ್ದರೂ ಡಬಲ್‌ಇಂಜಿನ್ ಸರಕಾರವಾಗಲಿ,26 ಜನ ಸಂಸದರಾಗಲಿ ಬಾಯಿ ಬಿಡುತ್ತಿಲ್ಲ.ಇಂತಹ ಸರಕಾರ ಕರ್ನಾಟಕಕ್ಕೆ ಆಗತ್ಯವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಕೇಟ್‌ಗಳನ್ನು ಹಾರಿಬಿಡಲು ಸಮುದ್ರ ತೀರದ ಅಗತ್ಯವಿದೆ ಎಂಬ ನೆಪವೊಡ್ಡಿ ಇಸ್ರೋವನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗುವ ಪ್ರಸ್ತಾವ ಕೇಂದ್ರ ಸರಕಾರದ ಮುಂದಿದೆ.ಹೀಗಿದ್ದರೂ ರಾಜ್ಯ ಸರಕಾರ ಒಂದು ಚಕಾರವೆತ್ತುತ್ತಿಲ್ಲ.ಕನಿಷ್ಠ ಸರ್ವ ಪಕ್ಷದ ನಿಯೋಗವನ್ನಾದರೂ ಪ್ರಧಾನಿಗಳ ಬಳಿ ಕರೆದುಕೊಂಡು ಹೋದರೆ ರಾಜ್ಯದ ಪರವಾಗಿ ನಾವು ದ್ವನಿ ಎತ್ತಲಿದ್ದೇವೆ ಎಂದರು.
ಸಮುದ್ರ ತಟವೇ ಬೇಕು ಎಂದು ಮೊದಲೇ ಹೇಳಿದ್ದರೆ,ನಮ್ಮಲ್ಲಿಯೂ ಕರಾವಳಿ ಪ್ರದೇಶ ಸಾಕಷ್ಟಿದೆ,ನೀಡಬಹುದಾಗಿತ್ತು. ತುಮಕೂರಿನ ಜನ ನೋವಿನಿಂದಲೇ ಹೆಚ್.ಎಂ.ಟಿ ತ್ಯಾಗ ಮಾಡಿ ಇಸ್ರೋಗೆ ಜಾಗ ನೀಡಿದ್ದಾರೆ.ತುಮಕೂರು ಬೆಂಗಳೂರಿಗೆ ಸಾಟಲೈಟ್ ನಗರವಾಗಿ ಬೆಳೆಯಲಿದೆ ಎಂಬ ಕನಸು ಕಂಡಿದ್ದರು.ಆದರೆ ಸರಕಾರ ಜನರಿಗೆ ಅನ್ಯಾಯ ಮಾಡುತ್ತಿದೆ.ಇದರ ವಿರುದ್ದ ದ್ವನಿ ಎತ್ತುವ ಅಗತ್ಯವಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಮೇಕೆದಾಟು ಯೋಜನೆಗೆ ನಮ್ಮ ಕಾಲದಲ್ಲಿ ಎಲ್ಲಾ ರೀತಿಯ ಪ್ಲ್ಯಾನಿಂಗ್ ಆಗಿ, ಡಿಪಿಆರ್ ಕೂಡ ತಯಾರಾಗಿತ್ತು.ಪರಿಸರ ಇಲಾಖೆಯ ಅನುಮತಿಯಷ್ಟೇ ಬಾಕಿ ಉಳಿದಿತ್ತು.ನಮ್ಮ ರಾಜ್ಯದ ಭೂಮಿ, ನೀರು, ಹಣ ಬಳಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು,ಈ ಯೋಜನೆಯಿಂದ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದಲ್ಲದೆ ಮತ್ತು 400 ಮೆ.ವ್ಯಾ ವಿದ್ಯುತ್ ಗೆ ಆಗುತ್ತದೆ.ಈ ವರ್ಷ 160 ಟಿಎಂಸಿಯಷ್ಟು ನೀರು ಸಮುದ್ರದ ಪಾಲಾಗಿದೆ.ಮೇಕೆದಾಟು ನಮ್ಮ ಹಕ್ಕು.ಹಾಗಾಗಿ ಪಕ್ಷದವತಿಯಿಂದ 2022ರ ಜನವರಿಯಲ್ಲಿ ಮೇಕೆದಾಟಿನಿಂದ ಬೆಂಗಳೂರಿನವರೆಗೆ ಸುಮಾರು 130 ಕಿ.ಮಿ.ಪಾದಯಾತ್ರೆ ಹಮ್ಮಿಕೊಳ್ಳಲಿದೆ.ಪಕ್ಷದ ಎಲ್ಲ ಮುಖಂಡರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿದೆ.ತುಮಕೂರಿಗೆ ಬಂದ ಮೇಲೆ ಯಾಕೋ ನಿಧಾನ ಗತಿಯಲ್ಲಿ ಸಾಗಿದೆ. ದೊಡ್ಡಬಳ್ಳಾಪುರ ಮತ್ತು ತುಮಕೂರಿನ ಭೂಮಿಯ ನಡುವೆ ಇರುವ ಪರಿಹಾರದ ಹಣದ ವೆತ್ಯಾಸ ಸರಿಪಡಿಸಿ,ಬೇಗ ಭೂಸ್ವಾದೀನ ಪ್ರಕ್ರಿಯೆ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.ಬಹುಶಃ ದೇಶ ದಲ್ಲಿಯೇ ಅತಿ ದೊಡ್ಡ ಭ್ರಷ್ಟ ಸರಕಾರವಿದ್ದರೆ ಅದು ರಾಜ್ಯದ ಬಿಜೆಪಿ ಸರಕಾರ.ಶೇ40ರಷ್ಟು ಕಮಿಷನ್ ಬಗ್ಗೆ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಅಕ್ರಮಗಳ ವಿರುದ್ದ ಸೂಕ್ತ ತನಿಖೆ ನಡೆಸಲಿದೆ ಎಂದರು.
ಬಿಜೆಪಿಯಿಂದ ಜನ ದೂರ ಆಗುತ್ತಿದ್ದಾರೆ.ಇದಕ್ಕೆ ಹಾನಗಲ್ ಉಪಚುನಾವಣೆಯೇ ಉದಾಹರಣೆ. ಎಲ್ಲಾ ಕಡೆ ಹಿಂಡು ಹಿಂಡಾಗಿ ಬಿಜೆಪಿ, ಜೆಡಿಎಸ್ ಮುಖಂಡರು ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ.ಕಾಂಗ್ರೆಸ್ ಗಾಳಿಬೀಸುತ್ತಿದೆ. ಜನ ಕಾಂಗ್ರೆಸ್ ಪರವಾಗಿ ನೋಡ್ತಿದ್ದಾರೆ.ಹಾಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ರಾಜೇಂದ್ರ ಪರ ಮತ ಚಲಾಯಿಸಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಸರಕಾರದ ಇಂದಿನ ಸ್ಥಿತಿ ಹೇಗಿದೆ ಎಂದರೆ ಕಳೆದ ಎರಡು ವರ್ಷಗಳಿಂದ ಖಾಸಗಿ ಶಾಲಾ, ಕಾಲೇಜುಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ಹಣ ಮತ್ತು ವಿಧ್ಯಾರ್ಥಿ ವೇತನದ ಹಣ ನೀಡಿಲ್ಲ.ದಲಿತ ಮತ್ತು ಒಬಿಸಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದ ಅವರು,ಡಿಸೆಂಬರ್ 10 ನಂತರ ಎಲ್ಲಾ ನಾಯಕರು ತಮ್ಮ ಬೂತ್‌ಗಳಲ್ಲಿದ್ದು ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.ನಾನು ಮತ್ತು ಎಐಸಿಸಿ ವತಿಯಿಂ ಇದರ ಮಾನಿಟರಿಂಗ್ ಮಾಡಲಿದ್ದೇವೆ. ಆ ನಂತರ ಚುನಾವಣೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದರು.
ಮುಂದಿನ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯುವಕರಿಗೆ, ಮಹಿಳೆಯರಿಗೆ ಹೆಚ್ಚಿನ ಅದ್ಯತೆ ನೀಡಲಿದೆ.ಯುವಜನತೆಯ ಪಡೆ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿದೆ ಎಂದ ಅವರು,ಕಾಂಗ್ರೆಸ್ ಎಂ.ಎಲ್.ಎಗಳನ್ನು ಹಣ ನೀಡಿಕೊಂಡವರು, ಇನ್ನು ಗ್ರಾ.ಪಂ. ಸದಸ್ಯರನ್ನು ಬಿಡುತ್ತಾರೆಯೇ, ಬಿಜೆಪಿಗೆ ಹಿಂಬಾಗಿಲು ರಾಜಕಾ ರಣ ಕರಗತವಾಗಿದೆ.ಆದರೆ ಇಂತಹ ಅಮೀಷಗಳಿಗೆ ಸ್ವಾಭಿಮಾನಿ ಗ್ರಾಪಂ.ಸದಸ್ಯರು ಬಲಿಯಾಗಲಾರರು ಎಂಬ ನಂಬಿಕೆ ನಮ್ಮದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರೊ.ರಾಧಾಕೃಷ್ಣ,ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಶಾಸಕ ಷಫಿ ಅಹಮ್ಮದ್,ಕೆ.ಷಡಕ್ಷರಿ,ಮಾಜಿ ಸಚಿವ ಟಿ.ಬಿ.ಜಯಚಂದ್ರ,ನಿಕೇತ್‌ರಾಜ್ ಮೌರ್ಯ ಮತ್ತಿತರರು ಉಪಸ್ಥಿತರಿದ್ದರು.