ರಾಜೇಂದ್ರರ ಗೆಲುವು 2023 ರ ವಿಧಾನಸಭಾ ಚುನಾವಣೆಯ ದಿಕ್ಸೂಚಿ : ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್
ಚಿಕ್ಕನಾಯಕನಹಳ್ಳಿ : ರಾಜೇಂದ್ರ ಅವರು ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಅವರ ಆಯ್ಕೆಯಾಗಿದ್ದು ಅವರನ್ನು ಗೆಲ್ಲಿಸಿಕೊಂಡು ಬರಬೇಕಾದ ಸಿದ್ದತೆಯಲ್ಲಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗು ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.
ಪಟ್ಟಣದ ತಾತಯ್ಯನಗೋರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅಭ್ಯರ್ಥಿ ರಾಜೇಂದ್ರ ಪರವಾಗಿ ಮತ ಯಾಚಿಸಿ ಮಾತನಾಡಿದರು.
ಈಗಾಗಲೇ ಚುನಾವಣಾ ನಿಮಿತ್ತ 6 ತಾಲ್ಲೂಕುಗಳಲ್ಲಿ ಸಂಚರಿಸಿದ್ದೇವೆ ಎಲ್ಲಾ ತಾಲ್ಲೂಕುಗಳಲ್ಲೂ ನಮಗೆ ಅಭೂತ ಪೂರ್ವ ಬೆಂಬಲ ದೊರಕಿದ್ದು ಎರಡೂ ಪಕ್ಷಗಳ ಸವಾಲನ್ನು ರಾಜೇಂದ್ರರ ಮೂಲಕ ಸ್ವೀಕರಿಸಿದ್ದೇವೆ. ಮಹಿಳೆಯರು, ಹಿಂದುಳಿದವರು, ಶೋಷಿತರಿಗೆ ಅಧಿಕಾರ ಸಿಗಲೆಂದು ಕಾಂಗ್ರೆಸ್ ಮೀಸಲಾತಿ ಜಾರಿಗೆ ತಂದಿತು. ಆದರೆ ಬಿಜೆಪಿಯ ರಾಮಜೋಯಿಸರು ಮೀಸಲಾತಿ ರದ್ದು ಮಾಡಬೇಕೆಂದು ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಬಿಜೆಪಿಯವರು ಯಾವ ನೈತಿಕತೆಯಿಂದ ಈ ಸಮುದಾಯಗಳ ಮತಗಳನ್ನು ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಗೋಹತ್ಯೆ ನಿಷೇಧ ರದ್ದುಗೊಳಿಸಲು ಕಾಂಗ್ರೆಸ್ ಗೆಲ್ಲಿಸಿ
ಗೋ ಹತ್ಯೆ ನಿಷೇಧ ಕಾನೂನನ್ನು ಬಿಜೆಪಿ ಸರಕಾರ ಯಾವುದೇ ಪೂರ್ವಪರ ಚರ್ಚೆ ನಡೆಸದೆ ರಾಜ್ಯದಲ್ಲಿ ಜಾರಿಗೆ ತಂದಿದೆ. ಇದನ್ನು ರದ್ದು ಮಾಡಲು ವಿಧಾನ ಪರಿಷತ್‌ನಲ್ಲಿ ನಮಗೆ ಬಲ ನೀಡಿ. ರಾಜೇಂದ್ರರ ಗೆಲುವು 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದರು.
ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ ಸಾರ್ವಜನಿಕ ಆಸ್ಥಿಗಳನ್ನು ಖಾಸಗಿಕರಣ ಮಾಡಿದ್ದೇ ಬಿಜೆಪಿಯವರ ಸಾಧನೆಯಾಗಿದೆ. ಯಾವುದೇ ಚರ್ಚೆ ನಡೆಸದೆ ಸಂಸತ್ತಿನಲ್ಲಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆದು ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಮುಖ್ಯಮಂತ್ರಿಗಳು ತಾವು ಪ್ರತಿನಿಧಿಸುತ್ತಿದ್ದ ಪಕ್ಕದ ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ಕಳೆದುಕೊಂಡಿದ್ದಾರೆ. ಡಿಕೆಶಿ, ಸಿದ್ದು ಹಾಗು ಪರಮೇಶ್ವರ್ ನಾಯಕತ್ವದಲ್ಲಿ 2023ರಲ್ಲಿ ಚುನಾವಣೆಯನ್ನು ಗೆದ್ದು ಬರಲಿದ್ದೇವೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ ಮಾತನಾಡಿ ಅಧಿಕಾರ ಯಾರಿಗೂ ಶಾಶ್ವತವಲ್ಲ, ಅದು ಸಿಕ್ಕಾಗ ದುರ್ಬಲರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕು. ರೈತರಿಗಾಗಿ ಜಾರಿಗೆ ತಂದಿದ್ದ ಸರಕಾರದ ಯೋಜನೆಗಳು ನಮ್ಮ ಡಿಸಿಸಿ ಬ್ಯಾಂಕಿನ ಮೂಲಕವೇ ಪಕ್ಷಾತೀತವಾಗಿ ಮಾಡಲಾಗಿದೆ ಎಂದರು.
ಶಾಸಕ ರಿಜ್ವಾನ್ ಆರ್ಷದ್ ಮಾತನಾಡಿ ಭ್ರಷ್ಟಾಚಾರದ ಆರೋಪವಿರುವ ಅಭ್ಯರ್ಥಿಗೆ ಜೆಡಿಎಸ್‌ನವರು ಟಿಕೆಟ್ ನೀಡುತ್ತಾರೆ. ಒಬ್ಬ ಸರಕಾರಿ ನೌಕರ ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬಂದಿದ್ದಾರೆ ಹಾಗೆಯೇ ಬಿಜೆಪಿಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಅಥವಾ ಕಾರ್ಯಕರ್ತರಿಗೆ ಟಿಕೆಟ್ ನೀಡದೆ ಬೆಂಗಳೂರಿನಿಂದ ಅಭ್ಯರ್ಥಿಯನ್ನು ಆಮದು ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಕಾಮಾಗಾರಿಗಳಿಗೆ ಶೇ 40 ರಷ್ಟು ಕಮಿಷನ್ ನೀಡಬೇಕೆಂದು ಸಂಸದರು, ಶಾಸಕರು ಒತ್ತಾಯಿಸುತ್ತಿದ್ದಾರೆಂದು ನಮ್ಮ ರಾಜ್ಯದ ಗುತ್ತಿಗೆದಾರರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇದನ್ನು ರಾಜ್ಯ ಸರಕಾರವು ಕೂಡ ಅಲ್ಲೆಗಳೆದಿಲ್ಲ. ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳು ಕಾಂಗ್ರೆಸ್ ಅವಧಿಯಲ್ಲಿ ಸಾಕಷ್ಟು ಹಣ ನೀಡಿ ಯೋಜನೆ ಪ್ರಗತಿಯಲ್ಲಿತ್ತು. ನಮ್ಮ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸುತ್ತೇನೆ ಎಂದು ಪತ್ರಿಕೆಗಳಲ್ಲಿ ಬಡಾಯಿ ಕೊಚ್ಚಿಕೊಳ್ಳುವುದು ಬಿಟ್ಟರೆ, ಹೇಮಾವತಿ, ಭದ್ರಾ ಹಾಗು ಎತ್ತಿನಹೊಳೆ ಯೋಜನೆಗಳಿಗೆ ಅವರ ನೆರವು ಏನು ಇಲ್ಲ ಎಂದು ಹೆಸರು ಹೇಳದೆ ಜಿಲ್ಲಾ ಸಚಿವರಿಗೆ ಕುಟುಕಿದರು.
ಸಮಾರಂಭದಲ್ಲಿ ಶಾಸಕ ರಂಗನಾಥ್, ಮಾಜಿ ಶಾಸಕ ಷಫಿ ಅಹಮದ್, ಷಡಕ್ಷರಿ, ಲಕ್ಕಪ್ಪ, ಅಭ್ಯರ್ಥಿ ರಾಜೇಂದ್ರ, ಮುಖಂಡರಾದ ಕೊಂಡವಾಡಿ ಚಂದ್ರಶೇಖರ್, ರಾಮಕೃಷ್ಣಯ್ಯ, ಡಾ. ಪರಮೇಶ್ವರ್, ರಘುನಾಥ್, ಶಶಿ ಹುಲಿಕುಂಟೆ, ಸಿದ್ದರಾಮಯ್ಯ, ಬಸವರಾಜ್, ಚಂದ್ರಶೇಖರ್, ಬ್ರಹ್ಮಾನಂದ್, ಕೃಷ್ಣೇಗೌಡ, ಸಾಸಲು ಮಂಜುನಾಥ್, ನಿಶಾನಿ ಕಿರಣ್, ಉಮಾ, ಸೇರಿದಂತೆ ಕಾರ್ಯಕರ್ತರು ಹಾಗು ಮುಖಂಡರಿದ್ದರು.