ಭ್ರಷ್ಟಾಚಾರ ತೊಡೆದುಹಾಕುವಲ್ಲಿ ಯುವಕರು ಮುಂದಾಗಬೇಕಿದೆ : ರಾಹುಲ್ ಕುಮಾರ್ ಶಹಾಪುರ್‌ವಾಡ್
ಶಿರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುನಶ್ಚೇತನ ಕಾರ್ಯಕ್ರಮ

ಶಿರಾ : ನಾಗರೀಕ ಸೇವೆಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವವರು ಸೇವಾ ಮನೋಭಾವದವರಾಗಿರಬೇಕು. ಭ್ರಷ್ಟಾಚಾರವನ್ನು ತೊಡೆದು ಹಾಕಬೇಕು. ಭ್ರಷ್ಟಾಚಾರ ತೊಡೆದುಹಾಕುವಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಎಂದು ತುಮಕೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್ ಕುಮಾರ್ ಶಹಾಪುರ್‌ವಾಡ್ ಹೇಳಿದರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2021-22ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದಿರುವ ಸ್ನಾತಕ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ “ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಾಧನೆಯ ಕನಸು ಕಾಣಬೇಕು, ಅದನ್ನು ನನಸಾಗಿಸಲು ನಿರಂತರವಾದ ಅಧ್ಯಯನ ಮತ್ತು ಪರಿಶ್ರಮವಿರಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಕೇಂದ್ರ ತೆರಿಗೆ ಇಲಾಖೆಯ, ಉಪ ಆಯುಕ್ತರಾದ ಭೈರಪ್ಪ.ಪಿ.ವಿ., ಐ.ಆರ್.ಎಸ್., ಅವರು ವಿದ್ಯಾರ್ಥಿಗಳಿಗೆ “ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಪದವಿ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಯನ್ನು ಪಡೆದು, ದಿನನಿತ್ಯ ನಿಗಧಿತ ಸಮಯವನ್ನು ಮೀಸಲಿಡುವುದರ ಮೂಲಕ ಪದವಿ ಪೂರ್ಣಗೊಳಿಸುವ ಹೊತ್ತಿಗೆ ಉನ್ನತ ಅಧಿಕಾರಿಗಳಾಗಿ ಹೊರಹೊಮ್ಮಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಿಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ, ಉಪ ಕುಲಸಚಿವರಾದ ಮಂಗಳಗೌರಿ, ಅವರು ವಿದ್ಯಾರ್ಥಿಗಳಿಗೆ “ರಾಷ್ಟ್ರೀಯ ಶಿಕ್ಷಣ ನೀತಿ” ಕುರಿತು ಮಾಹಿತಿಯನ್ನು ನೀಡಿ ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಇಲ್ಲಿ ವಿದ್ಯಾರ್ಥಿಯ ಕಲಿಕಾ ಆಸಕ್ತಿಗೆ ಹೆಚ್ಚಿನ ಪ್ರಾಧ್ಯಾನ್ಯತೆಯನ್ನು ನೀಡಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಟಿ.ರಂಗಪ್ಪನವರು ಮಾತನಾಡಿ ಶಿಸ್ತು, ಸಂಯಮ ಮತ್ತು ಸಮಯ ಪಾಲನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ನಿಮ್ಮ ಹೆಗಲೇರುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ತಮ್ಮ ಜ್ಞಾನದಾಹವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣ ಪಡೆದುಕೊಂಡಾಗ ಎಲ್ಲಾ ಕ್ಷೇತ್ರಗಳಲ್ಲೂ ಸಫಲತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಕಾಲೇಜಿನ ಐ.ಕ್ಯು.ಎ.ಸಿ. ಸಂಚಾಲಕರಾದ ಡಾ. ನಾಗಭೂಷಣಯ್ಯ.ಬಿ.ಎನ್., ರಾಜಣ್ಣ., ಶ್ರೀದೇವಿ., ಸುಷ್ಮಾ, ಪ್ರಾಧ್ಯಾಪಕರಾದ ಹೇಮಲತಾ. ಬಿ.ಆರ್., ಸುಕನ್ಯ.ಟಿ.ಎಲ್., ಶಾಮ್ ಸಾಬ್ ಮುಜಾವರ್, ಡಾ. ವೆಂಕಟರವಣಪ್ಪ.ಎಂ., ಗೋವಿಂದರಾಜು.ಎನ್., ಸತೀಶ್ ಗೌಡ ಸೇರಿದಂತೆ ಹಲವರು ಹಾಜರಿದ್ದರು.