ಮದಲೂರು ಕೆರೆಗೆ ನಾವೆಲ್ಲರೂ ಒಗ್ಗಟ್ಟಾಗಿ ಸೇರಿ ನೀರು ಹರಿಸಿದೆವು ಎಂದರೆ ಸಾರ್ಥಕ : ನಂಜಾವಧೂತ ಸ್ವಾಮೀಜಿ
ಮದಲೂರು ಕೆರೆಗೆ ಬಾಗಿನ ಅರ್ಪಿಸಿದ ನಂಜಾವಧೂತ ಸ್ವಾಮೀಜಿ
ಶಿರಾ : ಮದಲೂರು ಕೆರೆಗೆ ನೀರು ಹರಿಸಿದ ಯಶಸ್ಸು ನಾನು ಅನ್ನೋದಕ್ಕಿಂತ ನಾವುಗಳು ಒಟ್ಟಾಗಿ ಸೇರಿ ಜನಹಿತ ಕಾಪಾಡಿದೇವು ಎಂದರೆ ನೀರು ಹರಿಸಿದ್ದೂ ಸಾರ್ಥಕ ಕಾಣಲಿದೆ ಎಂದು ಪಟ್ಟನಾಯಕನಹಳ್ಳಿ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಮದಲೂರು ಕೆರೆಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿ ಮಾತನಾಡಿದರು. ಮದಲೂರು ಕೆರೆಗೆ ನೀರು ಹರಿಯಲು ಶ್ರೀಮಠ ಸೇರಿದಂತೆ ಮಾಜಿ ಶಾಸಕ ಪಿಎಂ ರಂಗನಾಥಪ್ಪ, ಮಾಜಿ ಸಚಿವ ದಿವಂಗತ ಬಿ ಸತ್ಯನಾರಾಯಣ, ಮಾಜಿ ಸಚಿವ ಟಿ ಬಿ ಜಯಚಂದ್ರ, ಶಾಸಕ ಡಾ ರಾಜೇಶ್ ಗೌಡ ಸೇರಿದಂತೆ ರೈತ ಹಾಗೂ ಶಾಶ್ವತ ನೀರಾವರಿ ಹೋರಾಟಗಾರರ ಪಾತ್ರವೂ ಇದೆ. ದಶಕಗಳಿಂದ ನೀರಾವರಿ ಹಕ್ಕೊತ್ತಾಯ ಸಮಾವೇಶ ಮಾಡಿ ಬರದ ನಾಡಿನ ರೈತ ಹಾಗೂ ತಾಲೂಕಿನ ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಗಳ ನೂರಾರು ಗ್ರಾಮಗಳ ಅಂತರ್ಜಲ ವೃದ್ಧಿಸುವ ಜೀವನಾಡಿ ಮದಲೂರು ಕೆರೆ ನೀರು ಹರಿಸುವಂತೆ ಒತ್ತಾಯ ಮಾಡಿದ್ದರ ಫಲ ಇಂದ ಮದಲೂರು ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದು ಜನಸಾಮಾನ್ಯರ ಕುಡಿಯುವ ನೀರಿನ ಬವಣೆ ಕಡಿಮೆಯಾದಂತಾಗಿದೆ ಎಂದರು.
ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್ ಆರ್ ಗೌಡ ಮಾತನಾಡಿ ಶಿರಾ ಸೇರಿದಂತೆ ಬಯಲುಸೀಮೆಗೆ ನೀರಾವರಿ ಯೋಜನೆ ಅನುಷ್ಠಾನಗೊಳ್ಳಬೇಕು ಎಂಬ ಇಚ್ಛಾಶಕ್ತಿಯನ್ನು ಪ್ರಥಮವಾಗಿ ಪ್ರದರ್ಶನ ಮಾಡಿದ್ದು ಪೂಜ್ಯ ನಂಜಾವಧೂತ ಶ್ರೀಗಳು ಶ್ರೀಗಳ ಜನ್ಮದಿನದ ನೀರಾವರಿ ಹಕ್ಕೊತ್ತಾಯ ದಿನ ಮದಲೂರು ಕೆರೆಗೆ ಹೇಮಾವತಿ ನೀರು ತರಲು ಪ್ರೇರಣೆಯಾಯಿತು ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರು ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ನೀರು ಹರಿಸಿದ್ದಾರೆ, ಇದಕ್ಕೆ ನಮ್ಮ ಪಕ್ಷದ ಶಾಸಕ ರಾಜೇಶ್ ಗೌಡ ಸೇರಿದಂತೆ ಎಲ್ಲರ ಪರಿಶ್ರಮ ಇದೆ ಈ ವರ್ಷ ಮದಲೂರು ಕೆರೆಗೆ ನೀರು ಹರಿಸಿ ಭರ್ತಿಮಾಡಿದ ನಮ್ಮ ಬಿಜೆಪಿ ಸರಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಧುಸ್ವಾಮಿ ರವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಎಸ್ ರಾಮಕೃಷ್ಣ, ಮದಲೂರು ಮೂರ್ತಿ ಮಾಸ್ಟರ್, ಶ್ರೀರಂಗ ಯಾದವ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿಡಿ ಮಲ್ಲೇಶ್, ಡಿಸಿ ಅಶೋಕ್, ಮದಲೂರು ಗ್ರಾಪಂ ಅಧ್ಯಕ್ಷ ಶಂಕರ್, ನರಸಿಂಹಯ್ಯ ಸೇರಿದಂತೆ ಹಲವರು ಹಾಜರಿದ್ದರು.