ಶ್ರೀ ಸಿದ್ಧರಾಮೇಶ್ವರ ಜಯಂತಿ ಯಶಸ್ಸಿಗೆ ಭಕ್ತರ ಸಹಕಾರ ಮುಖ್ಯ : ರಂಗಾಪುರ ಶ್ರೀಗಳು
ಜಯಂತಿ ಅಂಗವಾಗಿ ಶ್ರೀಮಠದಲ್ಲಿ ನಡೆದ 2ನೇ ಪೂರ್ವಬಾವಿ
ತಿಪಟೂರು : ಶ್ರೀ ಗುರುಸಿದ್ಧರಾಮೇಶ್ವರ ಜಯಂತಿ ಆಡಂಬರಕ್ಕಿಂತ ಹೆಚ್ಚಿನದಾಗಿ ವ್ಯವಸ್ಥಿತವಾಗಿ ಹಾಗೂ ಶಿಸ್ತು ಬದ್ದವಾಗಿ ನಡೆಯುವ ಮೂಲಕ ಸಮಾಜದ ಎಲ್ಲ ವರ್ಗದವರಿಗೂ ಶ್ರೀ ಗುರುಸಿದ್ಧರಾಮರ ಕಾಯಕ ಸಂದೇಶವನ್ನು ತಲುಪಿಸಲು ಶ್ರೀಮಠದ ಭಕ್ತರು ಹಾಗೂ ಗುರುಸಿದ್ಧರಾಮರ ಅಭಿಮಾನಿಗಳು ಹಗಲಿರುಳು ಕಾರ್ಯನಿರ್ವಹಿಸಬೇಕೆಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ತಿಳಿಸಿದರು.
ತಾಲ್ಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ವತಿಯಿಂದ ನಗರದ ಶ್ರೀ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಆವರಣದಲ್ಲಿ ಜನವರಿ 15ರಂದು ನಡೆಯುತ್ತಿರುವ ಜಯಂತಿ ಆಚರಣೆಯ ಹಿನ್ನಲೆಯಲ್ಲಿ ಶ್ರೀಮಠದಲ್ಲಿ ನಡೆದ 2ನೇ ಪೂರ್ವಬಾವಿ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಈ ಜಯಂತಿ ಆಚರಣೆ ನೊಳಂಬ ಸಮಾಜ ಬಾಂಧವರನ್ನು ಒಗ್ಗೂಡಿಸುವಲ್ಲಿ ಹಾಗೂ ಸಿದ್ಧರಾಮರ ಆದರ್ಶ, ಕಾಯಕ, ಸತ್ಯನಿಷ್ಟ ಹಾಗೂ ಸಮಾಜ ಸುಧಾರಕ ಸಂದೇಶಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಕೆಲಸ ಕಾರ್ಯಗಳನ್ನು ಹಂಚಲು ವಿವಿಧ ಕಾರ್ಯಕಾರಿ ಉಪಸಮಿತಿಗಳನ್ನು ನೇಮಿಸಿದ್ದು ಪ್ರತಿಯೊಂದೂ ಸಮಿತಿಗಳು ತಮ್ಮದೇ ಯೋಜನೆಗಳನ್ನು ರೂಪಿಸಿಕೊಂಡು ಇಂದಿನಿಂದಲೆ ಕಾರ್ಯೋನ್ಮುಖರಾಗಬೇಕು. ಯಾರಿಗಾದರೂ ಗೊಂದಲಗಳಿದ್ದರೆ ಜಯಂತಿ ಸಮಿತಿಯನ್ನು ಸಂಪರ್ಕಿಸಿ ಪರಿಹರಿಸಿಕೊಂಡು ಸಮಾರಂಭದ ಯಶಸ್ಸಿಗೆ ಶ್ರಮಿಸಬೇಕೆಂದು ತಿಳಿಸಿದರು.
ರಾಜ್ಯ ನೊಳಂಬ ಸಂಘದ ಅಧ್ಯಕ್ಷರಾದ ಎಸ್.ಆರ್. ಪಾಟೀಲ್ ಮಾತನಾಡಿ ಪ್ರಸಿದ್ಧ ಪುಣ್ಯಕ್ಷೇತ್ರ ಕೆರೆಗೋಡಿ-ರಂಗಾಪುರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧರಾಮೇಶ್ವರರ 849ನೇ ಜಯಂತಿ ಅತ್ಯಂತ ವಿಶೇಷವಾಗಿರಲಿದೆ. ಶ್ರೀ ಗುರುಪರದೇಶಿಕೇಂದ್ರ ಪೂಜ್ಯರ ದರ್ಶನ ಸ್ವರ್ಶವೇ ಒಂದು ಸೌಭಾಗ್ಯ. ಜಯಂತಿ ಸಮಾರಂಭ ಅರ್ಥವತ್ತಾಗಿ ಹಾಗೂ ಯಶಸ್ವಿಯಾಗಿ ನಡೆಯಲು ನಮ್ಮ ಕೇಂದ್ರ ಸಮಿತಿಯು ತುಂಬು ಹೃದಯದ ಸಹಕಾರ ನೀಡಲಿದೆ. ಎಂದರು.
ಮಾಜಿ ಶಾಸಕ ಕೆ. ಷಡಕ್ಷರಿ ಮಾತನಾಡಿ ಜಯಂತಿ ಯಶಸ್ಸಿಗೆ ನಮ್ಮೆಲ್ಲರ ಸಹಕಾರ ಇದ್ದು ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಮಾರಂಭ ದೊಡ್ಡಮಟ್ಟದಲ್ಲಿ ನಡೆಯಲಿರುವುದರಿಂದ ಹಾಗೂ ಸಮಯದ ಅಭಾವ ಇರುವುದರಿಂದ ಕೆಲಸಗಳನ್ನು ವ್ಯವಸ್ಥಿತವಾಗಿ ನಡೆಯಬೇಕೆಂದು ತಿಳಿಸಿದರು.
ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಿಳಿಗೆರೆ ಚಂದ್ರಶೇಖರ್, ಕಾರ್ಯದರ್ಶಿ ಶಶಿಧರ್‌ಕಾಮನಕೆರೆ, ದಾನಿಗಳಾದ ಮಲ್ಲೇನಹಳ್ಳಿ ಶಿವಶಂಕರ್ ಮಾತನಾಡಿ ಗುರುಸಿದ್ಧರಾಮೇಶ್ವರರ ನಿಲುವು, ಕಾಯಕ ಏನಿತ್ತು ಎಂಬುದನ್ನು ಅವರ ಜಯಂತಿ ಮೂಲಕ ನಾಡಿಗೆ ತಿಳಿಸಬೇಕಿದೆ. ಶಿವಯೋಗ ಮತ್ತು ಕರ್ಮಯೋಗ ಎರಡೂ ಸಿದ್ಧರಾಮರಲ್ಲಿ ಮೇಳೈಸಿರುವುದು ಸಂತೋಷದ ಸಂಗತಿಯಾಗಿದ್ದು ಸಮಾರಂಭದ ಯಶಸ್ಸಿನಲ್ಲಿ ಎಲ್ಲರೂ ಪಾತ್ರದಾರಿಗಳಾಗಬೇಕೆಂದರು.
ಜಯಂತಿ ಸಮಿತಿಯ ಮುಖ್ಯಸ್ಥರಾದ ಮಧು ಬೋರ್‌ವೆಲ್ ಮಾತನಾಡಿ ಜಯಂತಿ ಆಚರಣೆ ಕಲ್ಪತರು ನಾಡಿನ ಜನತೆಗೆ ತುಂಬಾ ಸಂತಸ ತಂದಿದೆ. ಜಯಂತಿ ಯಶಸ್ಸಿಗೆ ಅನುಕೂಲವಾಗಲೆಂದು ಸ್ವಾಗತ ಸಮಿತಿ, ಪ್ರಸಾದ ವ್ಯವಸ್ಥೆ, ಸ್ವಚ್ಚತೆ, ಶುದ್ಧ ನೀರು, ಆರೋಗ್ಯ, ಸಾರಿಗೆ, ಪ್ರಚಾರ, ವಿದ್ಯುತ್ ವಿಭಾಗ ಸೇರಿದಂತೆ ಹಲವು ಸಮಿತಿಗಳನ್ನು ರಚಿಸಿದ್ದು, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಜಯಂತಿಗೆ ಉತ್ತಮ ಹೆಸರು ಬರಲಿದೆ. ಹಾಗಾಗಿ ಪ್ರತಿಯೊಬ್ಬರೂ ನಿಸ್ವಾರ್ಥವಾಗಿ ದುಡಿಯೋಣ ಎಂದು ತಿಳಿಸಿದರು.
ಸಭೆಯಲ್ಲಿ ಕೆಎಂಎಫ್ ನಿರ್ಧೇಶಕ ಮಾದೀಹಳ್ಳಿ ಪ್ರಕಾಶ್ ಮಾತನಾಡಿ ಜಯಂತಿಗೆ ಬರುವ ಎಲ್ಲರಿಗೂ ಹಾಲು, ಮಜ್ಜಿಗೆ ಮೊಸರಿನ ವ್ಯವಸ್ಥೆ ಮಾಡುವುದಲ್ಲದೆ 5ಲಕ್ಷ ರೂಗಳ ವಂತಿಗೆ ಸಂಗ್ರಹಣೆ ಜವಾಬ್ದಾರಿ ವಹಿಸಿಕೊಂಡರು. ಕೊಬ್ಬರಿ ವರ್ತಕ ಲೋಕೇಶ್ವರ ರೂ 1ಲಕ್ಷ, ಕೊಪ್ಪದ ಹೇಮಂತ್ 100ಪಾಕೆಟ್ ಅಕ್ಕಿ, ವಸಂತ 25ಸಾವಿರ, ತಡಸೂರು ಸುರೇಶ್ 50ಚೀಲ ಅಕ್ಕಿ ಸೇರಿದಂತೆ ಹಲವರು ವಿವಿಧ ರೀತಿಯ ದಾನಗಳ ವಾಗ್ದಾನ ಮಾಡಿದರು. ಸಭೆಯಲ್ಲಿ ಜಯಂತಿಯ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು.
ಪೂರ್ವಬಾವಿ ಸಭೆಯಲ್ಲಿ ಸುಕ್ಷೇತ್ರದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹೆಚ್.ಬಿ. ದಿವಾಕರ್, ದಾನಿ ಕೆ.ಟಿ. ಶಾಂತಕುಮಾರ್, ಕೇಂದ್ರ ಸಮಿತಿಯ ನಿರ್ಧೇಶಕರುಗಳಾದ ಮಾದೀಹಳ್ಳಿ ದಯಾನಂದ್, ಎಂ.ಆರ್. ಸಂಗಮೇಶ್, ಖಜಾಂಚಿ ರುದ್ರಪ್ಪ, ನಗರಸಭೆ ಅಧ್ಯಕ್ಷರಾದ ರಾಮಮೋಹನ್, ಸಮಾಜ ಮುಖಂಡರುಗಳಾದ ಬಸ್ತೀಹಳ್ಳಿ ಮಹದೇವಪ್ಪ, ಕೆ.ಆರ್. ಶಂಕರಪ್ಪ, ಸೊಗಡು ಸೋಮಣ್ಣ, ಮಂಜುನಾಥ್, ತ್ರಿಯಂಬಕ, ಕೆ.ಎಂ. ರಾಜಣ್ಣ, ಯೋಗೀಶ್, ದೇವರಾಜು, ನಿಖಿಲ್ ಸೇರಿದಂತೆ ಹಲವರಿದ್ದರು. ಶಿಕ್ಷಕ ಗಂಗಣ್ಣನವರು ಸ್ವಾಗತಿಸಿ, ನಿರೂಪಿಸಿದರು.