ಜಿಲ್ಲೆತುಮಕೂರುಶಿರಾ

ಮದಲೂರು ಕೆರೆ ತುಂಬಲು ಯಡಿಯೂರಪ್ಪ ಕಾರಣರಲ್ಲ, ವರುಣನ ಕೃಪೆ ನಮ್ಮ ಪರಿಶ್ರಮವೇ ಕಾರಣ : ಮಾಜಿ ಸಚಿವ ಟಿ.ಬಿ.ಜಯಚಂದ್ರ

ಶಿರಾ : ಮದಲೂರು ಕೆರೆ ತುಂಬಿ ಕೋಡಿ ಹರಿಯಲು ಕಾರಣ ವರುಣನ ಕೃಪೆ ಹಾಗೂ ನಮ್ಮ ಪರಿಶ್ರಮವೇ ಹೊರತು ಯಾವ ಬಿಜೆಪಿ ನಾಯಕರೂ ಕಾರಣರಲ್ಲ, ಯಾವ ಯಡಿಯೂರಪ್ಪನೂ ಕಾರಣರಲ್ಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಅವರು ತಾಲ್ಲೂಕಿನ ಮದಲೂರು ಕೆರೆಗೆ ಸೋಮವಾರ ಪತ್ನಿ ನಿರ್ಮಲ ಜಯಚಂದ್ರ ಅವರೊಂದಿಗೆ ಬಾಗಿನ ಅರ್ಪಿಸಿ ಗಂಗಾಪೂಜೆ ನೆರವೇರಿಸಿ ಮಾತನಾಡಿದರು. ಶಿರಾ ತಾಲ್ಲೂಕು ಬರದ ನಾಡು ಇಲ್ಲಿ ಕುಡಿಯುವ ನೀರಿಗೂ ಬವಣೆ ಇದೆ ಎಂಬುದನ್ನು ಅರಿತ ನಾನು 2000 ನೇ ಇಸವಿಯಲ್ಲಿಯೇ ಹೇಮಾವತಿಯಿಂದ ಕಳ್ಳಂಬೆಳ್ಳ ಮತ್ತು ಶಿರಾ ದೊಡ್ಡ ಕೆರೆಗೆ 0.9 ಟಿಎಂಸಿ ನೀರನ್ನು ಹರಿಸಲು ಆದೇಶ ಮಾಡಿಸಿದೆ. ನಂತರ ಕಳ್ಳಂಬೆಳ್ಳ ಮತ್ತು ಶಿರಾ ದೊಡ್ಡ ಕೆರೆಗಳಿಗೆ ಹರಿಸಿ ಹೆಚ್ಚುವರಿಯಾಗಿದ್ದ 0.4 ಟಿಎಂಸಿ ನೀರನ್ನು ಮದಲೂರು ಮತ್ತು ಅದರ ಮಾರ್ಗಮಧ್ಯೆ ಬರುವ 11 ಕೆರೆಗಳಿಗೆ ಹರಿಸಬೇಕೆಂದು ನಿರ್ಧರಿಸಿ ನಾನು ಅಧಿಕಾರದಲ್ಲಿರದಿದ್ದರೂ ಅಂತಹ ಸಂದರ್ಭದಲ್ಲಿ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಅವರ ಸಹಕಾರದಿಂದ ಅನದಾನವನ್ನು ತಂದು ಮದಲೂರು ಕೆರೆ ಕಾಲುವೆ ಮಾಡಿಸಿದ್ದರ ಫಲವಾಗಿ ಇಂದು ಮಳೆ ಉತ್ತಮವಾಗಿ ಬಂದು ಮದಲೂರು ಕೆರೆ ತುಂಬಿದೆ. ಇಂದು ಮದಲೂರು ಕೆರೆಯ ವಿಚಾರ ಹೇಳಿಕೊಂಡು ಎಲ್ಲರೂ ರಾಜಕೀಯ ಮಾಡಲು ಬರುತ್ತಿದ್ದಾರೆ. ಅವರೆಲ್ಲರೂ ಅಂದು ಹೇಮಾವತಿ ನೀರು ಹರಿಸುವಾಗ ತಡೆ ತಂದಿದ್ದವರು. ಅವರ ಆತ್ಮಸಾಕ್ಷಿಯನ್ನು ತೆರೆದು ನೋಡಿಕೊಳ್ಳಲಿ ಎಂದರು.

2008 ರಲ್ಲಿ ಪಟ್ಟನಾಯಕನಹಳ್ಳಿಯಲ್ಲಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಶಪಥ ಮಾಡಿದ್ದೆ ಮದಲೂರು ಕೆರೆಗೆ ನೀರು ತರದಿದ್ದರೆ ಜಯಚಂದ್ರ ಎಂದು ಕರೆಯಬೇಡಿ, ನಾನು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಶಪಥ ಮಾಡಿದ್ದೆ. ನಾನು ಹೇಳಿದ್ದಂತೆ ಮಾಡಿ ತೋರಿಸಿದ್ದೇನೆ. ಇಂದು ಶಿರಾ ತಾಲ್ಲೂಕಿನಲ್ಲಿ ನಿರ್ಮಿಸಿದ್ದ ಸುಮಾರು 121 ಚೆಕ್ ಡ್ಯಾಂ, ಬ್ಯಾರೇಜ್ ಗಳು ತುಂಬಿವೆ. ಇದರಿಂದ ತಾಲ್ಲೂಕಿನಲ್ಲಿ ಬಿದ್ದಂತಹ ಮಳೆ ನೀರು ಬೆರೆ ಎಲ್ಲೂ ಹರಿಯದೆ ನಿಲ್ಲಿಸುವ ಕಾರ್ಯ ಮಾಡಿದ್ದೇನೆ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ನನಗೆ ಇಂದು ಅತ್ಯಂತ ಸಂತೋಷದ ದಿನವಾಗಿದೆ ಇದರಿಂದ ನನಗೆ ಅತೀವ ಸಂತೋಷವಾಗಿದೆ ಎಂದರು.
ಮಾಜಿ ಸಂಸಚ ಚಂದ್ರಪ್ಪ ಮಾತನಾಡಿ ಬರದ ನಾಡಾಗಿದ್ದ ಶಿರಾ ತಾಲ್ಲೂಕನ್ನು ಸಮೃದ್ಧ ನಾಡಾಗಿ ಮಾಡಲು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಶಿರಾ ತಾಲ್ಲೂಕಿನ ಇತರೆ ಪಕ್ಷದ ನಾಯಕರು ಮದಲೂರು ಕೆರೆಗೆ ನೀರು ತರುತ್ತೇನೆ ಎಂದು ಕೇವಲ ರೀಲು ಬಿಟ್ಟಿದ್ದಾರೆ. ಆದರೆ ಟಿ.ಬಿ.ಜಯಚಂದ್ರ ಅವರು 61 ಕೋಟಿ ಅನುದಾನವನ್ನು ತಂದು ಮದಲೂರು ಕೆರೆ ಕಾಲುವೆ ನಿರ್ಮಿಸಿ ಇಂದು ಮದಲೂರು ಕೆರೆ ತುಂಬಲು ಕಾರಣರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಟರಾಜ್ ಬರಗೂರು, ಕಲ್ಕೆರೆ ರವಿಕುಮಾರ್, , ಸಂತೋಷ್ ಜಯಚಂದ್ರ, ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ, ಕೊಟ್ಟ ಶಂಕರ್, ಡಿ.ಸಿ.ಅಶೋಕ್, ಕೋಟೆ ಲೋಕೇಶ್, ಪಿ.ಬಿ.ನರಸಿಂಹಯ್ಯ, ರೂಪೇಶ್ ಕೃಷ್ಣಯ್ಯಶಿವಕುಮಾರ್ ಡಿ.ವೈ.ಗೋಪಾಲ್, ಕೊಟ್ಟ ಶಂಕರ್, ಬೇವಿನಹಳ್ಳಿ ಸುದರ್ಶನ್,ವಿಎಸ್‌ಎಸ್‌ಎನ್ ಅಧ್ಯಕ್ಷರಾದ ನಾಗೇಂದ್ರಪ್ಪ, ಉಮೇಶ್ ಗೌಡ, ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಾಧ್ಯಕ್ಷ ಅಜಯ್ ಕುಮಾರ್ ಗಾಳಿ, ಜಿಲ್ಲಾ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಭಾರ್ಗವ ಸೇನ ಸೇರಿದಂತೆ ಹಲವರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker