ಜಿಲ್ಲೆತುಮಕೂರುಮಧುಗಿರಿ

ತುಳಿತಕ್ಕೆ ಒಳಗಾಗಿರುವ ಎಲ್ಲಾ ಸಮುದಾಯಕ್ಕೆ ನ್ಯಾಯ ದೊರಕಿಸಿದ್ದು ಜೆಡಿಎಸ್ ಪಕ್ಷ : ಹೆಚ್.ಡಿ.ದೇವೇಗೌಡ

ಮಧುಗಿರಿ : ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಎಲ್ಲಾ ಸಮುದಾಯಕ್ಕೆ ನ್ಯಾಯ ದೊರಕಿಸಿದ್ದು ಜೆಡಿಎಸ್ ಪಕ್ಷ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ತಿಳಿಸಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲವರು ಷಡ್ಯಂತ್ರದಿಂದ ನಾನು ಸೋಲು ಅನುಭವಿಸಬೇಕಾಯಿತು. ಆದರೆ ನಾನು ಅದನ್ನು ಮನದಲ್ಲಿಟ್ಟುಕೊಂಡು ದ್ವೇಷ ರಾಜಕೀಯ ಮಾಡುವವನಲ್ಲ. ವಿಧಾನಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ತಳ ಸಮುದಾಯದಿಂದ ಮೇಲಕ್ಕೆ ಬಂದಿರುವಂತಹ ಉತ್ತಮ ವ್ಯಕ್ತಿಯಾಗಿದ್ದು, ಅವರು ತಮ್ಮ ಪದವಿಗೂ ಕೂಡ ರಾಜೀನಾಮೆ ಸಲ್ಲಿಸಿ ಜನರ ಸೇವೆ ಮಾಡಲು ಬಂದಿದ್ದಾರೆ. ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಿ ಕೊಡಬೇಕೆಂದು ಮತಯಾಚಿಸಿದರು. .
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ರಾಜ್ಯಗಳು ಅಭಿವೃದ್ಧಿ ಹೊಂದಲು ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಹಾಗೂ ಅನಿವಾರ್ಯತೆ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳು ಸಂವಿಧಾನ ಬದ್ಧವಾಗಿ ನೀಡುವಂತಹ ಅನುದಾನವನ್ನು ಸಹ ನೀಡುತ್ತಿಲ್ಲ. ಮಧುಗಿರಿ ಕ್ಷೇತ್ರವು ಬಹಳ ಹಿಂದುಳಿದ ಕ್ಷೇತ್ರವಾಗಿದ್ದು ಕಂದಾಯ ಜಿಲ್ಲೆಯನ್ನು ಮಾಡಲು ದೇವೇಗೌಡರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ. ಬಿಜೆಪಿ ಪಕ್ಷದವರು ನಾಮಕಾಸ್ತೆಗೆ ಗೊತ್ತು-ಗುರಿ ಇಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ನಿಲ್ಲುವಂತ ಗಂಡಸು ಯಾರೂ ಸಿಗಲಿಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷ ಒಳ ಒಪ್ಪಂದ ಮಾಡಿಕೊಂಡಿದೆ ಎಂದ ಅವರು, ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಲು ಷಢ್ಯಂತ್ರ ಮಾಡಿದವರಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದ್ದು, ಅನಿಲ್ ಕುಮಾರ್ ಅವರಿಗೆ ಮತ ನೀಡುವ ಮೂಲಕ ಈ ಕಾರ್ಯ ಆಗಬೇಕಾಗಿದೆ ಎಂದರು.
ವಿಧಾನಪರಿಷತ್ ಅಭ್ಯರ್ಥಿ ಅನೀಲ್ ಕುಮಾರ್ ಮಾತನಾಡಿ, ನನ್ನಂತಹ ತಳ ಸಮುದಾಯದ ವ್ಯಕ್ತಿಗೆ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ಜೆಡಿಎಸ್ ಪಕ್ಷಕ್ಕೆ ನಾನು ಆಭಾರಿಯಾಗಿದ್ದು, ಯಾವುದೇ ಸಂದರ್ಭದಲ್ಲೂ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಕೈ ಬಲಪಡಿಸಿ ಅವರನ್ನು ಮುಖ್ಯಮಂತ್ರಿ ಮಾಡಲು ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ವೈ.ಎಸ್.ವಿ.ದತ್ತ , ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್‌ಬಾಬು, ಎಂ.ಆರ್.ಜಗನ್ನಾಥ್, ಎಂ.ಎಲ್.ಗಂಗರಾಜು, ಕೆ.ನಾರಾಯಣ್, ನರಸಿಂಹಮೂರ್ತಿ, ಜಿ.ಪಂ ಮಾಜಿ ಸದಸ್ಯೆ ಭಾರತಿ ಗೋವಿಂದರಾಜು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕೇಬಲ್ ಸುಬ್ಬು, ಮುಖಂಡರಾದ ಟಿ.ರಾಮಣ್ಣ, ತಿಮ್ಮೇಗೌಡ, ಟಿ.ಗೋವಿಂದರಾಜು, ಬಿ.ಎಸ್.ಶ್ರೀನಿವಾಸ್, ಪ್ರಭು, ರಘು, ಬೆಳ್ಳಿ ಲೋಕೇಶ್, ಲಕ್ಷ್ಮಮ್ಮ, ಎಚ್.ಹನುಮಂತರಾಯಪ್ಪ, ಎಸ್.ಮೋಹನ್, ವೆಂಕಟಾಪುರ ಗೋವಿಂದರಾಜು ಹಾಗೂ ಮುಂತಾದವರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker