ಕಾಡುಗೊಲ್ಲ ನಿಗಮದ ಹೆಸರು ಬದಲಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ಸರ್ಕಾರಕ್ಕೆ ಪತ್ರ : ಜಿ.ಕೆ.ನಾಗಣ್ಣ ಆರೋಪ
ತುಮಕೂರು: ಹಿರಿಯೂರು ಶಾಸಕಿ ಶ್ರೀಮತಿ ಪೂರ್ಣೀಮ ಶ್ರೀನಿವಾಸ್ ಅವರು,ಕಾಡುಗೊಲ್ಲರ ಅಭಿವೃದ್ದಿ ನಿಗಮವನ್ನು, ಗೊಲ್ಲ-ಕಾಡುಗೊಲ್ಲ ಅಭಿವೃದ್ದಿ ನಿಗಮವೆಂದು ಬದಲಾಯಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಕಾಡುಗೊಲ್ಲರನ್ನು ಮುಗಿಸಲು ಹೊರಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಕೆ.ನಾಗಣ್ಣ ಆರೋಪಿಸಿದ್ದಾರೆ.
ಪತ್ರಿಕಾಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಈಗಾಗಲೇ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆದಿದ್ದು, ಇಂದಿಲ್ಲ, ನಾಳೆ ಕಾಡುಗೊಲ್ಲ ಸಮುದಾಯ ಎಸ್.ಟಿ, ಜಾತಿಪಟ್ಟಿಗೆ ಸೇರಲಿದೆ.ಆದರೆ ಕಾಡುಗೊಲ್ಲರ ಹೆಸರಿನಲ್ಲಿ ಗೊಲ್ಲ ಸಮುದಾಯಕ್ಕೆ ಸೇರಿದ ಶ್ರೀಮತಿ ಪೂರ್ಣೀಮ ಅವರು ಶಾಸಕಿಯಾಗಿ ಆಯ್ಕೆಯಾಗಿರುವುದಲ್ಲದೆ, ಪದೇ ಪದೇ ಸರಕಾರಕ್ಕೆ ನಿಗಮ ಹೆಸರಿನಲ್ಲಿ ಹಸ್ತಕ್ಷೇಪ ನಡೆಸುವ ಮೂಲಕ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಕಾಡುಗೊಲ್ಲರು ಎಂದಿಗೂ ನಮಗೆ ನಿಗಮ ಬೇಕು ಎಂದು ಕೇಳಿದವರಲ್ಲ. 2010ರಲ್ಲಿ ಅಂದಿನ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಡಾ.ಸಿ.ಎಸ್.ದ್ವಾರಕಾನಾಥ್ ಅವರು, ಅಧ್ಯಯನ ನಡೆಸಿ, ಕಾಡುಗೊಲ್ಲರ ಅಭಿವೃದ್ದಿ ನಿಗಮ ಸ್ಥಾಪಿಸಿ,100 ರೂಗಳ ಅನುದಾನ ಮೀಸಲಿಡುವಂತೆ ಸರಕಾರಕ್ಕೆ ವರದಿ ಸಲ್ಲಿಸಿದ್ದರು.2020ರಲ್ಲಿ ಶಿರಾ ಉಪಚುನಾವಣೆಯನ್ನು ಗೆಲ್ಲುವ ಸಲುವಾಗಿ,ಕಾಡುಗೊಲ್ಲರ ಮತ ಪಡೆಯಲು ಅಂದಿನ ಸರಕಾರ ಕಾಡುಗೊಲ್ಲರ ಅಭಿವೃದ್ದಿ ನಿಗಮ ಸ್ಥಾಪಿಸಿ, ಕೊಂಚ ಹಣವನ್ನು ನೀಡಿರುವುದು ಸರಿಯಷ್ಟೇ ಎಂದರು.
ಸರಕಾರದ ಆದೇಶ ಆದ ಒಂದೇ ದಿನದಲ್ಲಿ ಶಾಸಕಿ ಪೂರ್ಣೀಮ ಅವರು, ಕಾಡುಗೊಲ್ಲರ ಅಭಿವೃದ್ದಿ ನಿಗಮದ ಬದಲಾಗಿ, ಸಮಸ್ತ ಗೊಲ್ಲರ ಅಭಿವೃದ್ದಿ ನಿಗಮ ಎಂದು ಹೆಸರು ಬದಲಾಯಿಸಿದ್ದರು.ಆ ನಂತರ ಕಾಡುಗೊಲ್ಲರ ಹೋರಾಟಕ್ಕೆ ಮಣಿದು, ಕಾಡುಗೊಲ್ಲರ ಅಭಿವೃದ್ದಿ ನಿಗಮ ಎಂದು ಮರು ನಾಮಕರಣ ಮಾಡಿ, ಅಧಿಕಾರಿಯನ್ನು ನೇಮಕ ಮಾಡಿದ್ದರು.ಆದರೆ 07-07-2021ರಂದು ಮತ್ತೆ ಪತ್ರ ಬರೆದು ಕಾಡುಗೊಲ್ಲರ ಅಭಿವೃದ್ದಿ ನಿಗಮದ ಬದಲಾಗಿ, ಗೊಲ್ಲ-ಕಾಡುಗೊಲ್ಲ ಅಭಿವೃದ್ದಿ ನಿಗಮವೆಂದು ಬದಲಾಯಿಸಲು ಒತ್ತಾಯಿಸಿದ್ದಾರೆ.ಇದು ಎಲ್ಲಾ ವಿಚಾರದಲ್ಲಿಯೂ ಯಾದವರಿಗಿಂತ ಭಿನ್ನವಾಗಿರುವ ಕಾಡುಗೊಲ್ಲರನ್ನು ತುಳಿಯುವ ಪ್ರಯತ್ನವಾಗಿದೆ.ಸರಕಾರ ಇವರ ಪತ್ರಕ್ಕೆ ಮನ್ನಣೆ ನೀಡಬಾರದು ಎಂದು ಜಿ.ಕೆ.ನಾಗಣ್ಣ ಸರಕಾರವನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಸುಮಾರು 10 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕಾಡುಗೊಲ್ಲ ಸಮುದಾಯ ಸರಕಾರ ಗೊಲ್ಲ ಅಭಿವೃದ್ದಿ ನಿಗಮ ಸ್ಥಾಪಿಸಿದರೆ ನಮ್ಮ ಅಭ್ಯಂತರವಿಲ್ಲ.ಆದರೆ ಆಚಾರ, ವಿಚಾರದಲ್ಲಿ, ಕೊಡು,ತರುವುದು ಇಲ್ಲದ ಗೊಲ್ಲ-ಕಾಡುಗೊಲ್ಲ ಒಂದೇ ಎಂದು ಪ್ರತಿಪಾದಿಸಲು ಹೊರಟಿರುವುದು ಸರಿಯಲ್ಲ.ಇದನ್ನು ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿ ಹಾಗೂ ಕಾಡುಗೊಲ್ಲರ ಯುವ ಸೇನೆ ಖಂಡಿಸುತ್ತಿದೆ.ಈ ಸಂಬಂಧ ನವೆಂಬರ್ 27 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.ಅಲ್ಲದೆ ಸರಕಾರದ ಗಮನ ಸೆಳೆಯಲು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಜಿ.ಕೆ.ನಾಗಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಡುಗೊಲ್ಲರ ಯುವಸೇನೆ ಅಧ್ಯಕ್ಷ ರಮೇಶ್,ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಗೋವಿಂದರಾಜು,ಸುನೀಲ್ ಕುಮಾರ್,ಶಶಿಕುಮಾರ್ ಉಪಸ್ಥಿತರಿದ್ದರು.