ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಗುಬ್ಬಿ : ಜೆಡಿಎಸ್ ಪಕ್ಷವು ಒಂದು ಮುಳುಗುವ ಹಡಗು ಅದನ್ನು ಬಿಟ್ಟು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಘೋಷಿಸುವುದಾಗಿ ಗುಬ್ಬಿ ಜೆಡಿಎಸ್ ಹಾಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಬಹಿರಂಗವಾಗಿ ಆಹ್ವಾನ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಚಾಲುಕ್ಯ ಆಸ್ಪತ್ರೆ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗುಬ್ಬಿ ಶ್ರೀನಿವಾಸ್ ಅವರಿಂದ ಜೆಡಿಎಸ್ ಬೆಳೆದಿತ್ತು.ಅವರನ್ನೇ ದೂರವಿಟ್ಟು ಸಮಾವೇಶ ಮಾಡಿದ ಕುಮಾರಸ್ವಾಮಿ ಬಗ್ಗೆ ಏನು ಹೇಳುವುದು
ನಾಲ್ಕು ಬಾರಿ ಶಾಸಕರಾದ ಶ್ರೀನಿವಾಸ್ ಗೆ ಈ ಮೊದಲೇ ಕಾಂಗ್ರೆಸ್ ಗೆ ಬರಲು ಹೇಳಿದ್ದೇ.ಆದರೆ ಪಕ್ಷ ನಿಷ್ಠೆ ತೋರಿದ್ದ ಅವರು ಇತ್ತೀಚಿನ ವಿದ್ಯಮಾನಗಳ ಬಳಿಕ ನಿರ್ಧರಿಸಿ ಕಾಂಗ್ರೆಸ್ ಗೆ ಬಂದಲ್ಲಿ ಎಲ್ಲಾ ರೀತಿಯಲ್ಲೂ ಸಹಕರಿಸಿ ಅಭ್ಯರ್ಥಿ ಮಾಡುವ ಭರವಸೆ ನೀಡಿದರು.
ಕುಮಾರಸ್ವಾಮಿ ಯವರ ಬಗ್ಗೆ ಏನಾದರೂ ಮಾತನಾಡಿದರೆ ಜಾತಿ ಬಣ್ಣ ಕಟ್ಟಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ನಾನು ನಿಜವಾದ ಜಾತ್ಯತೀತ ನಿಲುವು ಉಳ್ಳವನು ಎಂದರು.
ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರದಿಂದ ತೊಲಗಬೇಕಿದೆ. ಆರ್ ಎಸ್ ಎಸ್ ಕೈ ಗೊಂಬೆಯಾದ ಮುಖ್ಯಮಂತ್ರಿ ಬೊಮ್ಮಾಯಿ ಬರೀ ಬುರುಡೆ ಬಿಡುವ ಮುಖ್ಯಮಂತ್ರಿ ಹಸಿವು ನೀಗಿಸುವ ಅನ್ನಭಾಗ್ಯಕ್ಕೆ ಕತ್ತರಿ ಹಾಕುವ ಕೆಲಸ ಮಾಡುತ್ತಿರುವ ಬಿಜೆಪಿಗೆ ಹಸಿವಿನ ಬಗ್ಗೆ ತಿಳಿದಿಲ್ಲ.ಯುವಶಕ್ತಿಗೆ ಮೋದಿ ಹುಚ್ಚು ಹಿಡಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಕೇಂದ್ರ ಸರ್ಕಾರ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಈಗ ಪಕೋಡಾ ಮಾರಿ ಜೀವನ ಮಾಡಲು ಹೇಳುತ್ತಾರೆ. ಆದರೆ ಅಡುಗೆ ಎಣ್ಣೆ ಬೆಲೆ ಕೇಳಿದರೆ ಈ ಪಕೋಡಾ ಉದ್ಯೋಗವನ್ನು ಮಾಡಲಾಗದು ಎಂದು ವ್ಯಂಗ್ಯಮಾಡಿದರು.
ಕರೋನಾ ಸಂದರ್ಭದಲ್ಲಿ ಎರಡನೇ ಅಲೆಗೆ ರಾಜ್ಯದಲ್ಲಿ 4 ಲಕ್ಷ ಜನರ ಬಲಿಗೆ ಕಾರಣವಾದರು.ದೇಶದಲ್ಲಿ 50 ಲಕ್ಷ ಮಂದಿ ಮೃತಪಟ್ಟರು. ಈ ಜತೆಗೆ ಚಾಮರಾಜನಗರದಲ್ಲಿ ಅಮಾಯಕ 36 ಮಂದಿ ಸಾವಿಗೆ ಬಿಜೆಪಿ ಸರ್ಕಾರ ನೇರ ಕಾರಣವಾಯಿತು.ಈ ಘಟನೆಯನ್ನು ಮುಚ್ಚಿಹಾಕುವ ಕೆಲಸ ಸಚಿವರಾದ ಡಾ. ಸುಧಾಕರ್, ಸುರೇಶ್ ಕುಮಾರ್ ಮಾಡಿದ್ದು ಅಮಾನವೀಯ ಎಂದು ಕಿಡಿಕಾರಿದ ಅವರು ಇಂತಹ ಬಿಜೆಪಿ ಸರ್ಕಾರ ಕಿತ್ತೊಗೆಯುವ ನಿಟ್ಟಿನಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಮತ್ತು ಎಂಎಲ್ಸಿ ಕಾಂತರಾಜು ಅವರು ಕಾಂಗ್ರೆಸ್ ಸೇರಬೇಕು ಎಂದರು.
ಈಗಾಗಲೇ ಕಾಂತರಾಜು ಬರುವ ಸೂಚನೆ ನೀಡಿದ್ದಾರೆ ಶ್ರೀನಿವಾಸ್ ಕಾಂಗ್ರೆಸ್ ಗೆ ಬರಲು ನಿರ್ಧರಿಸಲು ಜನರ ಮುಂದೆ ಬರುತ್ತಾರೆ.ಮತ್ತೊಮ್ಮೆ 5 ನೇ ಬಾರಿ ಶಾಸಕರಾಗಿ ಆಯ್ಕೆ ಮಾಡಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಜೆಡಿಎಸ್ ಸಮಾವೇಶವು ನನ್ನ ಗೌರವ ಕಳೆದಿದ್ದಲ್ಲದೆ ಪ್ರಾಮಾಣಿಕ ಕಾರ್ಯಕರ್ತರ ಮರ್ಯಾದೆ ಕಳೆದ ಕುಮಾರಸ್ವಾಮಿ ಅವರು ಅಪಪ್ರಚಾರಕ್ಕೆ ಮುಂದಾಗಿ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ನಾನು ಕಾರಣ ಎನ್ನುತ್ತಾರೆ.ಹೊಟ್ಟೆಗೆ ಏನು ತಿನ್ನುತ್ತಾರೋ ತಿಳಿಯುತ್ತಿಲ್ಲ. ಸುಳ್ಳು ಹೇಳಲು ಒಬ್ಬ ಗಣಿಧಣಿ ಕರೆತಂದು ಕಾರ್ಯಕ್ರಮ ಮಾಡಿ ಭಾವುಕತೆ ಕಣ್ಣೀರಿಗೆ ಗ್ಲಿಜಿರಿನ್ ಕರ್ಚಿಫ್ ಬಳಸಿದ್ದು ಎಲ್ಲರಿಗೂ ತಿಳಿದಿದೆ.ಈ ಮೊಸಳೆ ಕಣ್ಣೀರು ಇಲ್ಲಿ ಕೆಲಸ ಮಾಡಲ್ಲ.ಕಳೆದ 20 ವರ್ಷದಿಂದ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾರೆ.ಇವರ ಅಂತರಗದ ಮರ್ಮ ತಿಳಿಯಲು ನನಗೆ ಇಷ್ಟು ವರ್ಷ ಬೇಕಾಯಿತು.ಕತ್ತು ಹಿಡಿದು ನೂಕಿದ ನಂತರ ಜನರ ಮುಂದೆ ನಿಂತಿದ್ದೇನೆ. ಸಿದ್ದರಾಮಯ್ಯ ಅವರ ಆಹ್ವಾನದ ಪ್ರೀತಿಗೆ ನಾನು ಚಿರಋಣಿ. ಜನರೇ ನನ್ನ ಮುನ್ನೆಡೆಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಎಂಎಲ್ಸಿ ಬೆಮೆಲ್ ಕಾಂತರಾಜು, ಗಾಯತ್ರಿ ಶಾಂತೇಗೌಡ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಎಚ್.ಎಂ.ರೇವಣ್ಣ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮುಖಂಡರಾದ ಆರ್.ರಾಜೇಂದ್ರ, ಕೆ.ಎಂ.ರಾಮಚAದ್ರಪ್ಪ, ಚಾಲುಕ್ಯ ಆಸ್ಪತ್ರೆ ಎಂಡಿ ಡಾ. ಮುರುಳೀಧರ್, ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷ್ಮಿ ಹಾಗೂ ಎಲ್ಲಾ ಸದಸ್ಯರು ಇದ್ದರು.