ದೌರ್ಜನ್ಯದಿಂದ ಮಹಿಳೆಯರು ಮುಕ್ತಿ ಹೊಂದಲು ಹಕ್ಕುಗಳ ಅರಿವು ಅಗತ್ಯ: ಸಿಇಒ ವಿದ್ಯಾಕುಮಾರಿ
ತುಮಕೂರು : ಗ್ರಾಮೀಣ ಪ್ರದೇಶದ ಮಹಿಳೆಯರು ತಮಗಿರುವ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡಾಗ ದೌರ್ಜನ್ಯಗಳಿಂದ ಮುಕ್ತಿಹೊಂದಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಕ್ಟೋಬರ್ 29 ರವರೆಗೆ ಮಹಿಳೆಯರಿಗಾಗಿ ದೌರ್ಜನ್ಯದಿಂದ ಮುಕ್ತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಡಿ ಕೂಲಿಕಾರರು, ಗ್ರಾಮೀಣ ಮಹಿಳೆಯರು, ಕೂಲಿಕಾರ ಸಂಘಟನೆಗಳ ಸದಸ್ಯರುಗಳು, ತಾಲ್ಲೂಕು ಐಇಸಿ ಸಂಯೋಜಕರು, ಬಿಎಫ್‌ಟಿಗಳು, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ನರೇಗಾ ಯೋಜನೆಯಡಿ ಮಹಿಳೆಯರಿಗೆ ಸಿಗುವ ಸಮಾನ ಕೂಲಿ, ಹಿರಿಯ ನಾಗರೀಕರು ಹಾಗೂ ಅಂಗವಿಕಲರುಗಳಿಗೆ ಕೆಲಸದಲ್ಲಿ ಶೇ.50ರಷ್ಟು ರಿಯಾಯಿತಿ, ಒಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಟ 100 ದಿನಗಳ ಉದ್ಯೋಗ ಖಾತರಿ ಮೊದಲಾದ ಸೌಲಭ್ಯಗಳ ಬಗ್ಗೆ ಭಿತ್ತಿಪತ್ರ, ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ಮಾಡಲಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಿಗುವಂತಹ ಸೌಲಭ್ಯಗಳ ಕುರಿತು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ, ಸ್ತ್ರೀ ಶಕ್ತಿ ಸಂಘಗಳ ಸದಸ್ಯರುಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೂಕ್ತ ತರಬೇತಿ ಹಾಗೂ ಅಗತ್ಯ ಮಾರ್ಗದರ್ಶನಗಳನ್ನು ನೀಡಲಾಗಿದ್ದು, ಈ ಯೋಜನೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಈಗಾಗಲೇ ರಾಜ್ಯಮಟ್ಟದಲ್ಲಿ ನರೇಗಾ ಆಯುಕ್ತರು, ಹಿರಿಯ ಅಧಿಕಾರಿಗಳು ಮಹಿಳಾ ದೌರ್ಜನ್ಯ, ದೌರ್ಜನ್ಯದಿಂದ ಮುಕ್ತಿ ಹೊಂದಲು ಇರುವ ಕಾನೂನಿನ ಪರಿಹಾರ ಕ್ರಮಗಳು, ಮಹಿಳಾ ಸಹಾಯವಾಣಿ ಬಳಕೆ ಮೊದಲಾದ ಅಂಶಗಳ ಬಗ್ಗೆ ಗ್ರಾಮಪಂಚಾಯತಿ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಈ ಎಲ್ಲಾ ಅಂಶಗಳನ್ನು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಗ್ರಾಮೀಣ ಭಾಗದ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ನರೇಗಾ ಯೋಜನೆಯಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಭಾಗವಹಿಸಲು ಪ್ರೇರೇಪಿಸಬೇಕು.
ಉದ್ಯೋಗ ಖಾತರಿ ಯೋಜನೆಯಡಿ ಕಲ್ಪಿಸಿರುವ ಅನೇಕ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ, ಆಸಕ್ತ ಮಹಿಳೆಯರು ಅಥವಾ ಕುಟುಂಬಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಚೀಟಿ ವಿತರಿಸಿ ಮಹಿಳೆಯರಿಂದ ಕೆಲಸಕ್ಕೆ ಕೂಲಿ ಬೇಡಿಕೆಯನ್ನು ಸಂಗ್ರಹಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಪ್ರೇರೇಪಣೆ ನೀಡುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯಡಿ ಕೂಲಿ ಕೆಲಸ ಮಾಡಿದ ಎಲ್ಲರಿಗೂ ಕೂಲಿ ಹಣ ನೇರವಾಗಿ ಕೆಲಸ ಮಾಡಿದ ಅಕುಶಲ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಆಗುವುದರಿಂದ ಮಹಿಳೆಯರು ತಾವು ಕೆಲಸ ಮಾಡಿ ಗಳಿಸಿದ ಕೂಲಿ ಹಣವನ್ನು ತಮ್ಮ ಮನಸೋ ಇಚ್ಚೆ ಖರ್ಚು ಮಾಡಬಹುದಾಗಿದೆ. ಅಲ್ಲದೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ದೌರ್ಜನ್ಯ, ತಾರತಮ್ಯಗಳಾಗುವುದಿಲ್ಲ.
ಅಷ್ಟೇ ಅಲ್ಲದೆ ಕೆಲಸ ಮಾಡುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸಣ್ಣ ಮಕ್ಕಳನ್ನು ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಕೆಲಸಕ್ಕೆ ಬರುವಾಗ ಆರೆ, ಗುದ್ದಲಿ, ಪಿಕಾಸಿ, ಮಂಕರಿ ಮೊದಲಾದ ಸಲಕರಣೆಗಳನ್ನು ತಂದಲ್ಲಿ ಪ್ರತಿ ದಿನಕ್ಕೆ 289 ರೂಪಾಯಿ ಕೂಲಿ ಹಣದ ಜೊತೆಗೆ ಹೆಚ್ಚುವರಿಯಾಗಿ ದಿನಕ್ಕೆ 10 ರೂಪಾಯಿಯಷ್ಟು ಸಲಕರಣೆ ಹರಿತಗೊಳಿಸುವ ವೆಚ್ಚವನ್ನೂ ನೀಡಲಾಗುವುದು.
ನರೇಗಾ ಯೋಜನೆಯಡಿ ಮಹಿಳೆಯರು ಸಮುದಾಯ ಕಾಮಗಾರಿಗಳಾದ ಕೆರೆ/ಕಟ್ಟೆ ಹೂಳೆತ್ತುವುದು, ಕಲ್ಯಾಣಿ ಅಭಿವೃದ್ಧಿ, ನಮ್ಮ ಹೊಲ ನಮ್ಮ ದಾರಿ, ಗ್ರಾಮೀಣ ಉದ್ಯಾನವನ ನಿರ್ಮಾಣ, ಸಂಜೀವಿನಿ ಶೆಡ್ ನಿರ್ಮಾಣ, ಶಾಲಾ ಕಾಂಪೌAಡ್, ಅಂಗನವಾಡಿ ಕಟ್ಟಡ ನಿರ್ಮಾಣ, ಗ್ರಾಮೀಣ ಸಂತೆ, ನೀರಿನ ಕೊಳ ನಿರ್ಮಾಣ, ಮಣ್ಣಿನ ತೇವಾಂಶ ಸಂರಕ್ಷಣಾ ಕಾಮಗಾರಿಗಳ ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ, ಎರೆಹುಳು ತೊಟ್ಟಿ ನಿರ್ಮಾಣ, ಮೇಕೆ/ಕುರಿ/ಹಂದಿ/ದನದ ಶೆಡ್ ನಿರ್ಮಾಣ, ತೋಟಗಾರಿಕೆ, ಕೃಷಿ, ರೇಷ್ಮೆ, ಸಾಮಾಜಿಕ ಅರಣ್ಯ ಮೊದಲಾದ ಇಲಾಖೆಗಳಡಿ ಸಿಗುವಂತಹ ಬೆಳೆಗಳನ್ನು ಬೆಳೆಯುವುದಕ್ಕೂ ಅವಕಾಶ ಮಾಡಿಕೊಡಲಾಗುವುದು.
ಗ್ರಾಮೀಣ ಭಾಗದ ಮಹಿಳೆಯರು ಉದ್ಯೋಗ ಖಾತರಿ ಯೋಜನೆಯಡಿ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆದು ದೌರ್ಜನ್ಯದಿಂದ ಮುಕ್ತಿ ಹೊಂದುವ ಮೂಲಕ ನೆಮ್ಮದಿಯ ಜೀವನ ನಡೆಸುವಂತೆ ಸಿಇಓ ಡಾ. ಕೆ.ವಿದ್ಯಾಕುಮಾರಿ ಅವರು ಮನವಿ ಮಾಡಿದ್ದಾರೆ.