ತನಿಖೆಯ ನೆಪದಲ್ಲಿ ಪೊಲೀಸರ ಕಿರುಕುಳ, ಚಿನ್ನದ ಅಂಗಡಿಗಳ ಮಾಲೀಕರ ದಿಢೀರ್ ಪ್ರತಿಭಟನೆ
ವ್ಯಾಪಾರಿಗಳನ್ನು ಅಪರಾಧಿಗಳೆಂಬಂತೆ ಬಿಂಬಿಸುತ್ತಿರುವ ಪೊಲೀಸರು
ತುಮಕೂರು: ಚಿನ್ನ, ಬೆಳ್ಳಿ ಅಂಗಡಿ ಮಾಲೀಕರು ಹಾಗೂ ಗಿರಿವಿ ಅಂಗಡಿಗಳ ಮಾಲೀಕರನ್ನು ಪೊಲೀಸರು ಸಮಾಜದ ಮುಂದೆ ಅಪರಾಧಿಗಳು ಎಂಬಂತೆ ಬಿಂಬಿಸುತ್ತಿರುವುದನ್ನು ಖಂಡಿಸಿ ಸೋಮವಾರ ಗಿರಿವಿ ಅಂಗಡಿ ಮಾಲೀಕರು ತುಮಕೂರು ನಗರ ಠಾಣೆಯ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಗಿರಿವಿ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಜೆ.ಪಿ.ಜೈನ್ ನೇತೃತ್ವದಲ್ಲಿ ನೂರಾರು ಗಿರಿವಿ ಅಂಗಡಿಗಳ ಮಾಲೀಕರು ನಗರದ ಟೌನ್ ಸ್ಟೇಷನ್ ಎದುರು, ಸೋಮವಾರ ಬೆಳಗ್ಗೆ ಬೆಂಗಳೂರಿನ ಹೆಚ್.ಎಸ್.
ಆರ್.ಲೇಔಟ್ ಪೊಲೀಸರು ತುಮಕೂರಿಗೆ ಆಗಮಿಸಿ ಕೆಲ ಅಂಗಡಿ ಮಾಲೀಕರನ್ನು ಕಳವು ಮಾಲುಗಳನ್ನು
ಖರೀದಿ ಮಾಡಿದ ಆರೋಪದಲ್ಲಿ ಬಂಧಿಸಿರುವುದು ಅಂಗಡಿ ಮಾಲೀಕರಲ್ಲಿ ಅಸಮಾಧಾನವನ್ನು ಉಂಟು
ಮಾಡಿದ್ದು,ಪೊಲೀಸರ ಈ ವರ್ತನೆ ವಿರುದ್ದ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಜೆ.ಪಿ.ಜೈನ್ ಪ್ರತಿನಿತ್ಯ ಪೊಲೀಸರು ತನಿಖೆ ಹೆಸರಿನಲ್ಲಿ
ಅಂಗಡಿಗಳಿಗೆ ಬಂದು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸುಖಾಸುಮ್ಮನೆ ಚಿನ್ನದ ಅಂಗಡಿ ಮಾಲೀಕರ
ಹೆದರಿಸಿ,ಬೆದರಿಸಿ ವಸೂಲಿಗೆ ಇಳಿದಿದ್ದಾರೆ.ಪ್ರತಿನಿತ್ಯ ಹೊರ ಜಿಲ್ಲೆಗಳಿಂದ ಬರುವ ಪೊಲೀಸರು ಸ್ಥಳೀಯ
ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಬಂದು ವ್ಯಾಪಾರಿಗಳಿಗೆ ತೊಂದರೆ ಹಾಗೂ ಕಿರುಕುಳ
ನೀಡುತ್ತಿದ್ದಾರೆ.ಏನಾದರೂ ಕೇಳಲು ಹೋದರೆ ಇಲ್ಲಸಲ್ಲದನ್ನು ಆರೋಪವನ್ನು ಮಾಡಿ ನಮ್ಮ ಮೇಲೆ
ಕೇಸ್‌ಗಳನ್ನು ಹಾಕುತ್ತೇವೆ ಎಂದು ಹೆದರಿಸಿ ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಾರೆ.
ಕೋರೋನದಿಂದ ಸಂಕಷ್ಟದಲ್ಲಿರುವ ನಾವುಗಳು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಹೊರ ಜಿಲ್ಲೆಗಳಿಂದ ಬರುವ ಪೊಲೀಸರು ಆರೋಪಿಗಳ ಹೆಸರಿನಲ್ಲಿ ಕೆಲವರನ್ನು ಕರೆತಂದು ಯಾವುದೇ
ದಾಖಲೆಗಳು ಇಲ್ಲದೆ ಇದ್ದರೂ ಸಹ ಚಿನ್ನವನ್ನು ರಿಕವರಿ ಮಾಡಲು ಬಂದಿದ್ದೇವೆ ಎಂದು ಪ್ರತಿನಿತ್ಯ ಕಿರುಕುಳ
ನೀಡುತ್ತಿದ್ದಾರೆ.ಇಂತಹ ಕಿರುಕುಳದ ಮಧ್ಯೆ ನಾವು ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ.
ಹಾಗಾಗಿ ನಮ್ಮ ಅಂಗಡಿಗಳ ಕೀಲಿಕೈಗಳನ್ನು ಪೊಲೀಸರಿಗೆ ನೀಡಲಿದ್ದೇವೆ ಎಂದು ತಮ್ಮ
ಅಸಹಾಯಕತೆಯನ್ನು ಚಿನ್ನದ ಅಂಗಡಿ ಮಾಲೀಕರು ವ್ಯಕ್ತಪಡಿಸಿದರು.ಈ ಸಂಬಂಧ ಸಾಕಷ್ಟು ಬಾರಿ
ಪೊಲೀಸರಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ.ಇಂತಹ ಆತಂಕದ ನಡುವೆ ನಾವು
ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ.ಜಿಲ್ಲಾಡಳಿತ,ಜಿಲ್ಲಾ ಪೊಲೀಸರು ಇಂತಹ ಅಕ್ರಮಗಳಿಗೆ
ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ
ಹಿರಿಯ ಅಧಿಕಾರಿಗಳು, ಪ್ರತಿಭಟನಾನಿರತರನ್ನು ಸಮಾಧಾನಗೊಳಿಸಿ,ಪರಿಸ್ಥಿತಿಯನ್ನು ತಿಳಿಗೊಳಿಸಿದರು.