ಮೇಳೆಕೋಟೆ ರಸ್ತೆ ಒತ್ತುವರಿ ಸ್ಥಳಕ್ಕೆ ಸಂಸದ ಜಿ.ಎಸ್.ಬಸವರಾಜು ಭೇಟಿ
ಮೇಳೆಕೋಟೆಯಿಂದ ಗಂಗಸಂದ್ರಕ್ಕೆ ಹೋಗುವ ರಸ್ತೆ ಒತ್ತುವರಿ ತೆರವುಗೊಳಿಸಲು ಸೂಚನೆ
ತುಮಕೂರು: ನಗರದ 11ನೇ ವಾರ್ಡಿಗೆ ಸೇರಿದ ಮೇಳೆಕೋಟೆಯಿಂದ ಗಂಗಸಂದ್ರಕ್ಕೆ ಹೋಗುವ ರಸ್ತೆಯ ಒತ್ತುವರಿ ತೆರವುಗೊಳಿಸಿ,ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವಂತೆ ಸಂಸದ ಜಿ.ಎಸ್.ಬಸವರಾಜು ನಗರಪಾಲಿಕೆಯ ಆಯುಕ್ತರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇಳೆಕೋಟೆಯಿಂದ ಗಂಗಸಂದ್ರಕ್ಕೆ ಹೋಗುವ ರಸ್ತೆ ಸಿಡಿಪಿ ಪ್ರಕಾರ 40 ಅಡಿ ರಸ್ತೆಯಾಗಿದ್ದು,ಕೆಲವರು ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ,ಮನೆಯ ಮಾಲೀಕರು ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ ಸಂಸದರು,ರಸ್ತೆ ಆಗಲೀಕರಣವಾಗುವುದರಿಂದ ಈ ಭಾಗದ ನಿವೇಶನಗಳಿಗೆ ಉತ್ತಮ ಬೆಲೆ ಬರಲಿದೆ.ಅಲ್ಲದೆ ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ಸರಕು ಸಾಗಾಣಿಕೆ,ಪ್ರಯಾಣಿಕರ ವಾಹನಗಳು ಸುಗಮವಾಗಿ ಚಲಿಸಲು ಸಾಧ್ಯವಾಗುತ್ತದೆ.ಈ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಪಾಲಿಕೆಯ ನೌಕರರಿಂದ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದರು.
ಈ ವೇಳೆ ಮಾತನಾಡಿದ ಆಯುಕ್ತರಾದ ಶ್ರೀಮತಿ ರೇಣುಕಾ,40 ಅಡಿ ಅಗಲದ ಮೇಳೆಕೋಟೆ, ಗಂಗಸಂದ್ರ ರಸ್ತೆಯ ಬಹುಪಾಲ ಕೆಲಸ ಪೂರ್ಣಗೊಂಡಿದ್ದು, ಕೇವಲ 500 ಮೀಟರ್ ರಸ್ತೆ ಅಭಿವೃದ್ದಿ ಮಾತ್ರ ಬಾಕಿ ಇದೆ. ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆ ಅಭಿವೃದ್ದಿಪಡಿಸುತ್ತಿದ್ದು, ಒತ್ತುವರಿ ತೆರವುಗೊಳಿಸಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಂಸದರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ,ಒತ್ತುವರಿ ಮಾಡಿರುವ ಮನೆಗಳ ಮಾಲೀಕರೊಂದಿಗೆ ಮಾತನಾಡಿ, ಮನವೊಲಿಸುವ ಕೆಲಸ ಮಾಡಲಾಗಿದೆ. ಸಂಸದರ ನಿರ್ದೇಶನದಂತೆ ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಒತ್ತುವರಿ ಮಾಡಿರುವ ಮನೆಗಳ ತೆರವು ಕಾರ್ಯಾಚರಣೆ ನಡೆಯಲಿದೆ ಎಂದರು.
ಈ ವೇಳೆ ವಾರ್ಡಿನ ಸದಸ್ಯ ಮನು,ಲೋಕೋಪಯೋಗಿ ಇಲಾಖೆಯ ಎಇಇ ಶಂಭುಕುಮಾರ್, ಎಇ ಸಿದ್ದಪ್ಪ ಹಾಗೂ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಹಾಜರಿದ್ದರು.