ತುಮಕೂರು

ರಸ್ತೆ ಸುರಕ್ಷತಾ ನಿಯಮ ಪಾಲನೆಯಿಂದ ಅಪಘಾತ ತಡೆಯಬಹುದು :ನ್ಯಾ. ರಾಘವೇಂದ್ರ ಶೆಟ್ಟಿಗಾರ್

ತುಮಕೂರು : ವಾಹನ ಸವಾರು ರಸ್ತೆ ಸುರಕ್ಷತಾ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿದರೆ ಅರ್ಧದಷ್ಟು ಅಪಘಾತಗಳನ್ನು ತಡೆಯಬಹುದಲ್ಲದೆ,ಅಮೂಲ್ಯ ಮಾನವ ಸಂಪತ್ತನ್ನು ಉಳಿಸಬಹುದಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದ್ದಾರೆ.
ನಗರದ ಆರ್.ಟಿ.ಓ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪ್ಯಾನ್ ಇಂಡಿಯಾ ಕಾನೂನು ಅರಿವು ಕಾರ್ಯಕ್ರಮದ ಅಂಗವಿ ಏರ್ಪಡಿಸಿದ್ದ ಮೋಟಾರು ವಾಹನ ಅಧಿನಿಯಮದ ಬಗ್ಗೆ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಪೊಲೀಸರಿಗೆ ಹೆದರಿ ಹೆಲ್ಮೇಟ್ ಧರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕೆಂದರು.
ಒಂದು ವಾಹನ ಚಲಾಯಿಸುವ ವ್ಯಕ್ತಿಯ ಬಳಿ, ವಾಹದ ನೊಂದಣಿ, ವಾಹನ ಚಾಲನಾ ಪರವಾನಗಿ,ವಾಹನದ ವಿಮೆ ಹೀಗೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಜೊತೆಗೆ ದ್ವಿಚಕ್ರವಾದಲ್ಲಿ ತಲೆಗೆ ಹೆಲ್ಮೇಟ್, ನಾಲ್ಕು ಚಕ್ರದ ವಾಹನವಾಗಿದ್ದಲ್ಲಿ, ಸೀಟ್‌ಬೆಲ್ಟ್ ಕಡ್ಡಾಯವಾಗಿರುತ್ತದೆ. ಇವುಗಳಲ್ಲಿ ಒಂದು ಇಲ್ಲವೆಂದರೂ ಸಹ ಅಪಘಾತ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗುವ ಕುಟುಂಬಕ್ಕೆ ವಾಹನದ ಮಾಲೀಕನೇ ಪರಿಹಾರ ಭರಿಸಬೇಕಾಗುತ್ತದೆ. ಹಾಗಾಗಿ ಅಪ್ರಾಪ್ತರಿಗೆ ವಾಹನ ನೀಡುವ ಮೊದಲು,ದ್ವಿಚಕ್ರ ವಾಹನದಲ್ಲಿ ಮೂರು ಜನರು ಕುಳಿತು ಕೊಳ್ಳುವ ಮೊದಲು ನೂರಾರು ಬಾರಿ ಯೋಚಿಸಬೇಕಾಗಿದೆ. ಮುಂದೆ ಒದಗಬಹುದಾದ ಕಾನೂನು ತೊಡಕುಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದು ಅನಿವಾರ್ಯ ಎಂದು ನ್ಯಾ.ರಾಘವೇಂದ್ರ ಶೆಟ್ಟಿಗಾರ್ ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಅಪರಾಧ ವಿಭಾಗದ ಡಿವೈಎಸ್ಪಿ ಗೋವಿಂದರಾಜು ಮಾತನಾಡಿ, ತುಮಕೂರು ಹೈವೆಯಿಂದ ದಾಬಸ್‌ಪೇಟೆ ವರೆಗೆ ನಡೆಯುವ ಅಪಘಾತಗಳು ತುಮಕೂರು ವಲಯಕ್ಕೆ ಬರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಚಾಲಕ ಹೆಲ್ಮೇಟ್ ಧರಿಸಿರುವುದಿಲ್ಲ. ಇಲ್ಲವೇ ತ್ರಿಬಲ್ ರೈಡಿಂಗ್,ಡಿಎಲ್ ಇರುವುದಿಲ್ಲ ಹೀಗೆ ಹಲವು ಕಾನೂನು ತೊಡಕು ಇರುತ್ತವೆ. ಇಂತಹ ಸಂದರ್ಭದಲ್ಲಿ ಕಾನೂನಿ ಪ್ರಕಾರ ಅಪಘಾತದಿಂದ ಸಂತ್ರಸ್ಥರಾಗುವ ಕುಟುಂಬಕ್ಕೆ ಪರಿಹಾರ ಭರಿಸುವುದು ವಾಹನದ ಮಾಲೀಕರ ಕರ್ತವ್ಯವಾಗಿರುತ್ತದೆ. ಹಾಗಾಗಿ ತಂದೆ ತಾಯಿಗಳು ತಮ್ಮ ಜವಾಬ್ದಾರಿ ತಪ್ಪಿಸಿಕೊಳ್ಳುವ ಭರದಲ್ಲಿ ಚಿಕ್ಕ ಮಕ್ಕಳಿಗೆ ವಾಹನ ನೀಡುವುದನ್ನು ತಪ್ಪಿಸಬೇಕು.ವಾಹನವನ್ನು ಸುರಕ್ಷತೆಯಿಂದ ಇಟ್ಟುಕೊಳ್ಳುವುದರ ಜೊತೆಗೆ, ವಾಹನದ ವಿಮೆ ಚಾಲ್ತಿಯಲ್ಲಿರುವಂತೆ ನೋಡಿಕೊಂಡರೆ, ಕಾನೂನಿನ ದೃಷ್ಟಿಯಲ್ಲಿ ಅಪರಾಧಿಯಾಗುವುದರಿಂದ ತಪ್ಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ರಾಜು ಮಾತನಾಡಿ, ಸಾರಿಗೆ ನಿಯಮಗಳ ಬಗ್ಗೆ ನಾವು ತಿಳಿದುಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ನಾವು ತಪ್ಪು ಮಾಡದಂತೆ ವಾಹನ ಚಲಾಯಿಸಲು ಸಾಧ್ಯವಾಗುತ್ತದೆ. ಹಾಗಾಗಿ ಮೊದಲು ಸಾರಿಗೆ ನಿಯಮಗಳ ಬಗ್ಗೆ ಎಲ್ಲರೂ ಓದಿ ತಿಳಿಯಬೇಕಾಗಿದೆ.ಯುವಜನರಿಗೆ ಮೋಟಾರು ತರಬೇತಿ ಸಂಸ್ಥೆಗಳು ಎಲ್ಲಾ ರೀತಿಯ ಸನ್ಹೆ, ಸಂಚಾರಿ ನಿಯಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕಾಗಿದೆ.ಇಲ್ಲದಿದ್ದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲರೂ ಇತ್ತ ಗಮನಹರಿಸುವಂತೆ ಸಲಹೆ ನೀಡಿದರು.
ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಬಾರಿಗೀಡದ, ಮೋಟಾರು ವಾಹನ ನಿರೀಕ್ಷಕರಾದ ಸದ್ರುಲ್ಲಾ ಷರೀಫ್ ಅವರುಗಳು ಮೋಟಾರು ವಾಹನ ಕಾಯ್ದೆಗಳ ಕುರಿತು ವಿವರವಾದ ಮಾಹಿತಿಯನ್ನು ಸಾರ್ವಜನಿಕರಿಗೆ ಮತ್ತು ಮೋಟಾರು ತರಬೇತಿ ಶಾಲೆಗಳ ಸಿಬ್ಬಂದಿಗೆ ನೀಡಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕಾಂಪೋಸ್ಟ್ ನಿಗಮದ ಸದಸ್ಯರಾದ ಟಿ.ಆರ್.ಸದಾಶಿವಯ್ಯ,ಟೂಡಾ ಸದಸ್ಯ ಹಾಗೂ ಮೋಟಾರು ವಾಹನ ಚಾಲನಾತರಬೇತಿ ಶಾಲೆಗಳ ಸಂಘದ ಅಧ್ಯಕ್ಷ ಶಿವಕುಮಾರ್,ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀಕ್ಷಕರುಗಳಾದ ದೇವರಾಜು ಮತ್ತು ಮಮತ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker