ಕಾಂಗ್ರೆಸ್ ಸದಸ್ಯನ ಗೈರು ಹಾಜರಿ ಬಿಜೆಪಿಗೆ ಒಲಿದ ಹುಳಿಯಾರು ಪಟ್ಟಣ ಪಂಚಾಯಿತಿ
ಅಧ್ಯಕ್ಷರಾಗಿ ಕೆಎಂಎಲ್ ಕಿರಣ್, ಉಪಾಧ್ಯಕ್ಷರಾಗಿ ಶ್ರುತಿ ಸನತ್ ಆಯ್ಕೆ
ಹುಳಿಯಾರು: ತೀರ್ವ ಕುತೂಹಲ ಕೆರಳಿಸಿದ್ದ ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಫಲಿತಾಂಶ ಹೊರಬಿದಿದ್ದು ಕಾಂಗ್ರೆಸ್ ಸದಸ್ಯ ರಾಜುಬಡಗಿ ಗೈರುಹಾಜರಿಯಿಂದ ಬಿಜೆಪಿಗೆ ಪಪಂ ಗಾದಿ ಒಲಿದು ಬಂದಿದೆ. ಹ ನೂತನ ಅಧ್ಯಕ್ಷರಾಗಿ ಎಲ್ಲರ ನಿರೀಕ್ಷೆಯಂತೆ ಕೆಎಂಎಲ್ ಕಿರಣ್ ಕುಮಾರ್ ಹಾಗೂ ಶ್ರುತಿ ಸನತ್ ಚುನಾವಣೆಯಲ್ಲಿ ಆಯ್ಕೆಯಾಗುವುದರ ಮೂಲಕ ಹುಳಿಯಾರು ಪಟ್ಟಣ ಪಂಚಾಯಿತಿಯ ಪ್ರಥಮ ಅಧ್ಯಕ್ಷರು ಹಾಗೂ ಪ್ರಥಮ ಉಪಾಧ್ಯಕ್ಷರು ಎಂಬ ದಾಖಲೆಗೆ ಭಾಜನರಾದರು.
ಶುಕ್ರವಾರ ಬೆಳಗ್ಗೆ 10 ಗಂಟೆಯಿAದ 11 ಗಂಟೆಯವರೆಗೆ ಒಂದು ಗಂಟೆಗಳ ಕಾಲ ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಕೆಎಂಎಲ್ ಕಿರಣ್ ಕುಮಾರ್, ಕಾಂಗ್ರೆಸ್ ಪಕ್ಷದಿಂದ ದಸ್ತಗೀರ್ ಸಾಬ್ ಹಾಗೂ ಪಕ್ಷೇತರವಾಗಿ ಸೈಯದ್ ಜಹೀರ್ ಸಾಬ್ ಸೇರಿದಂತೆ ಒಟ್ಟು ಮೂರು ಮಂದಿ ತಮ್ಮ ನಾಮಪತ್ರ ಸಲ್ಲಿಸಿದರಾದರೂ ಕೊನೆ ಕ್ಷಣದಲ್ಲಿ ಜಹೀರ್ ಸಾಬ್ ಹಿಂಪಡೆದರು. ಹಾಗೆಯೇ ಉಪಾಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾಗಿದ್ದು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶೃತಿ ಸನತ್ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಪ್ರೀತಿ ರಾಘವೇಂದ್ರ ಸೇರಿದಂತೆ ಒಟ್ಟು ಇಬ್ಬರು ತಮ್ಮ ನಾಮಪತ್ರ ಸಲ್ಲಿಸಿದರು.ನಂತರ ಒಂದು ಗಂಟೆಯಿಂದ ಚುನಾವಣಾ ಪ್ರಕ್ರಿಯೆ ಕಲಾಪ ಆರಂಭವಾಗಿದ್ದು ಒಟ್ಟು 16 ಮಂದಿ ಸಂಖ್ಯಾಬಲವುಳ್ಳ ಪಂಚಾಯಿತಿಯಲ್ಲಿ ಹಾಲಿ ಶಾಸಕರ ಹಾಗೂ ಸಂಸದರ ಮತವು ಸೇರಿ 18 ಮತಗಳು ಚಲಾವಣೆಯಾಗಬೇಕಿತ್ತು. ಈ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಂಗಾಧರಯ್ಯ (ಬಡಗಿ ರಾಜು) ಅವರ ಗೈರು ಹಾಜರಾತಿಯಲ್ಲಿ ಒಟ್ಟು 15 ಮಂದಿ ಸದಸ್ಯರು ಪಾಲ್ಗೊಂಡಿದ್ದರು.
ಬಿಜೆಪಿ ಪಕ್ಷದಿಂದ ಆಯ್ಕೆಯಾದ 6 ಮಂದಿ ಸದಸ್ಯರು, ಒಬ್ಬರು ಪಕ್ಷೇತರ ಸದಸ್ಯೆಯ ಬೆಂಬಲ ಹಾಗೂ ಶಾಸಕರ ಮತ್ತು ಸಂಸದರ ಮತ ಸೇರಿ ಒಟ್ಟು 9 ಮತಗಳು ಚಲಾವಣೆಗೊಂಡಿತು.
ಹಾಗೆಯೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಕಾಂಗ್ರೆಸ್ ಪಕ್ಷದ ಐದು ಸದಸ್ಯರ ಪೈಕಿ 4 ಸದಸ್ಯರು ಹಾಗೂ ಜೆಡಿಎಸ್ ಪಕ್ಷದ 3 ಸದಸ್ಯರು ಮತ್ತು 1 ಪಕ್ಷೇತರ ಸದಸ್ಯನ ಬೆಂಬಲ ಸೇರಿ ಒಟ್ಟು ಎಂಟು ಮತಗಳು ಚಲಾವಣೆಗೊಂಡವು.
17 ಮತಗಳ ಸಂಖ್ಯಾ ಬಲಕ್ಕೆ ಬಿಜೆಪಿ ಅಭ್ಯರ್ಥಿಗಳಿಗೆ ಒಟ್ಟು ಒಂಬತ್ತು ಮತಗಳು ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳಿಗೆ 8 ಮತಗಳು ಲಭಿಸುವ ಮೂಲಕ ಒಂದು ಮತದ ಅಂತರದಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಯಿತು. ಹೀಗಾಗಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಯುವ-ಉದ್ಯಮಿ ಕೆಎಂಎಲ್ ಕಿರಣ್‌ಕುಮಾರ್ ಅಧ್ಯಕ್ಷರಾಗಿ ಚುನಾಯಿತಗೊಂಡರೆ, ಎಂಕಾಂ ಪದವಿಧರೆ ಶೃತಿ ಸನತ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಹಾಜರಿದ್ದ ಸದಸ್ಯರುಗಳ ಪರ-ವಿರೋಧ ಸಹಿಗಳು ಹಾಗೂ ಕೈಯೆತ್ತುವುದರ ಮೂಲಕ ಮತಚಲಾವಣೆ ಪ್ರಕ್ರಿಯೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ತಹಸಿಲ್ದಾರ್ ತೇಜಸ್ವಿನಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಘೋಷಣೆ ಮಾಡಿದರು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಸಿ ಮಾಧುಸ್ವಾಮಿ ಹಾಗೂ ಸಂಸದ ಜಿ.ಎಸ್.ಬಸವರಾಜು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ವಿಪ್ ಜಾರಿಯಾದರೂ ಗೈರುಹಾಜರಾದ ಕಾಂಗ್ರೆಸ್ ಸದಸ್ಯ ಬಡಗಿ ರಾಜು:
ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಫಲಿತಾಂಶದಲ್ಲಿ ಯಾರಿಗೂ ಬಹುಮತ ಬಾರದ್ದರಿಂದ ಅಂದಿನಿAದಲೂ ಅಧ್ಯಕ್ಷ ಸ್ಥಾನದ ಗದ್ದಿಗೆ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ನಾನಾ ರೀತಿಯ ಲೆಕ್ಕಾಚಾರ ನಡೆಯುತ್ತಲೇ ಇತ್ತು. ಕ್ಷೇತ್ರ ಅಭ್ಯರ್ಥಿಗಳ ಸೇರ್ಪಡೆ ಹಾಗೂ ಇತರೆ ಪಕ್ಷದ ಮೈತ್ರಿಯ ಲೆಕ್ಕಚಾರದೊಂದಿಗೆ ಗದ್ದಿಗೆ ಏರಲೇಬೇಕೆಂಬ ಹಣಾಹಣಿ ನಡೆದಿತ್ತು. ಅಂದಿನಿಂದ ಬೆಳವಣಿಗೆಯಲ್ಲಿ ಒಮ್ಮೆ ಬಿಜೆಪಿ ಪಕ್ಷಕ್ಕೆ ಹಾಗೂ ಮತ್ತೊಮ್ಮೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂಬ ಸ್ಥಿತಿ ಇತ್ತು. ರಾಜಕೀಯ ತಂತ್ರಗಾರಿಕೆ ಫಲವಾಗಿ ಚುನಾವಣೆಯನ್ನು ಸಹ ಮುಂದೂಡಲಾಗಿತ್ತು. ಮೊನ್ನೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸದಸ್ಯ ರಾಜು ಬಡಗಿ ನಾಟ್ ರೀಚಬಲ್ ಆಗಿ ಯಾರ ಕೈಗೂ ಸಿಗದೆ, ಏನಾಗಿದೆ ಎಂಬ ಮಾಹಿತಿಯೂ ತಿಳಿಯದೆ, ಕಾಂಗ್ರೆಸ್ ಪಕ್ಷದಿಂದ ವಿಪ್ ಜಾರಿ ಮಾಡಿದ್ದರೂ ಸಹ ಹಾಜರಾಗದೆ ಚುನಾವಣೆಯ ಚಿತ್ರಣವೇ ಬದಲಾಗಿ, ಬಿಜೆಪಿಗೆ ಗೆಲುವಿಗೆ ಕಾರಣವಾಗಿದೆ.