ಪಾವಗಡ : ಅಂಗಡಿ ಮಳಿಗೆಗಳ ಕಂದಾಯ ವಸೂಲಿಗೆ ಶಾಸಕ ವೆಂಕಟರವಣಪ್ಪ ಸೂಚನೆ
ಪಾವಗಡ : ಪುರಸಭೆಗೆ ಸೇರಿದ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಖಡ್ಡಾಯವಾಗಿ ವಸೂಲಿ ಮಾಡಬೇಕೆಂದು ಶಾಸಕ ವೆಂಕಟರವಣಪ್ಪ ಪುರಸಭಾ ಸಿಬ್ಬಂದಿಗೆ ತಾಕೀತು ಮಾಡಿದರು.
ಶುಕ್ರವಾರ ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷ ರಾಮಾಂಜಿನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಿಂಗಳಿಗೆ ಪುರಸಭೆ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದ್ದು, ಪುರಸಭೆಗೆ ಬರುವ ಎಲ್ಲಾ ರೀತಿಯ ಕಂದಾಯಗಳನ್ನು ವಸೂಲಿ ಮಾಡಬೇಕು ಎಂದು ತಾಕೀತು ಮಾಡಿ, ಪಟ್ಟಣದಲ್ಲಿ ಇಲ್ಲಿಯವರೆಗೂ ಪುರಸಭೆಯಾಗಿ 10 ವರ್ಷ ಕಳೆದರೂ ಯಾವುದೆ ರೀತಿಯ ಉದ್ಯಾನವನಗಳನ್ನು ಅಭಿವೃದ್ದಿಪಡಿಸಿಲ್ಲಾ, ಹಿರಿಯ ನಾಗರೀಕರು, ಮಕ್ಕಳು ಅರೋಗ್ಯವಾಗಿರಲು, ನೆಮ್ಮದಿಯಾಗಿ ಕಾಲ ಕಳೆಯಲು ಉತ್ತಮ ವಾತಾವರಣ ಕಲ್ಪಿಸಿಲ್ಲಾ ಎಂದು ಸಭೆಯಲ್ಲಿ ಶಾಸಕರು ಬೇಸರ ವ್ಯಕ್ತ ಪಡಿಸಿದರು.
ಇದೇ ವೇಳೆ ಪಟ್ಟಣದ ಎಂಎಜೆ ಸರ್ಕಲ್‌ನಿಂದ ಬಳ್ಳಾರಿ ರಸ್ತೆಯ ಮಾರ್ಗದಲ್ಲಿ ಟ್ಯೂಬುಲರ್ ಪೋಲ್‌ಗಳನ್ನು ಅಳವಡಿಸಿರುವ ಕಾಮಗಾರಿಗೆ ಎಲ್‌ಇಡಿ ವಿದ್ಯತ್ ದ್ವೀಪಗಳನ್ನು ಅಳವಡಿಸುವಂತೆ ಶಾಸಕರು ಸೂಚಿಸಿದಾಗ ಇಂಜನೀಯರ್ ಅರುಣ್‌ಕುಮಾರ್ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಪಟ್ಟಣದ ಟೋಲ್‌ಗೇಟ್ ಮತ್ತು ಹೊಸಬಸ್ ನಿಲ್ದಾಣದಲ್ಲಿರುವ ಎಸ್‌ಸಿ,ಎಸ್‌ಟಿ ಮೀಸಲಾತಿಯಲ್ಲಿ ಹರಾಜು ಪಡೆದ 11 ಅಂಗಡಿ ಮಳಿಗೆಗಳನ್ನು ಮುಟ್ಟುಗೋಲು ಹಾಕಿಕೊಂಡು ಕಳೆದ 2 ವರ್ಷಗಳಿಂದ ಮರು ಹರಾಜು ಮಾಡದೆ ಪುರಸಭೆಗೆ ನಷ್ಟವುಂಟು ಮಾಡುತ್ತಿದ್ದೀರಾ ಎಂದು ಸದಸ್ಯ ಪಿ.ಎಚ್. ರಾಜೇಶ್, ಮುಖ್ಯಾಧಿಕಾರಿಯೂ ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸದಸ್ಯ ಸುದೇಶ್‌ಬಾಬು ಧನಿಗೂಡಿಸಿ, ಕೂಡಲೆ ಮರು ಹರಾಜು ಹಾಕಬೇಕೆಂದು ಒತ್ತಾಯಿಸಿದರು. ಕಂದಾಯ ತನಿಕಾಧಿಕಾರಿ ನಾಗಬೂಷಣ್ ಮಾತನಾಡಿ, ಈಗಾಗಲೆ ಅಂಗಡಿ ಮಳಿಗೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಅವರ ಆಸ್ತಿವಿವರಗಳ ಮಾಹಿತಿ ಪಡೆದುಕೊಂಡಿದ್ದು, ಬಾಕಿ ಇರುವ ಬಾಡಿಗೆಯನ್ನು ವಸೂಲಿ ಮಾಡಲಾಗುತ್ತಿದೆ. ಬಾಡಿಗೆ ಕಟ್ಟದಿದ್ದ ಪಕ್ಷದಲ್ಲಿ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಸದಸ್ಯ ವಿಜಯಕುಮಾರ್ ಮಾತನಾಡಿ ಪಟ್ಟಣದ ಚರಂಡಿಗಳ ಅಭಿವೃದ್ದಿಗಾಗಿ ಶಾಸಕರು ಅನುದಾನ ನೀಡಬೇಕು ಎಂದು ಮನವಿ ಮಾಡಿಕೊಂಡರು.
ತುಮಕೂರಿನ ಕೇಂದ್ರ ಗ್ರಂಥಾಲಯದ ಸದಸ್ಯರನ್ನಾಗಿ 7ನೇ ವಾರ್ಡನ ಸದಸ್ಯ ಬಾಲಸುಭ್ರಮಣ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪುರಸಭಾ ವ್ಯಾಪ್ತಿಯಲ್ಲಿ ವಸತಿ ಉದ್ದೇಶಕ್ಕಾಗಿ ಅಭಿವೃದ್ದಿ ಪಡಿಸುತ್ತಿರುವ ಲೇಔಟ್‌ಗಳಲ್ಲಿ ಯುಜಿಡಿ ಪಾರ್ಕ್ ಅಭಿವೃದ್ದಿ, ರಸ್ತೆ, ಚರಂಡಿ, ವಿದ್ಯತ್‌ದ್ವೀಪ, ನೀರು ಸರಬರಾಜು, ಮತ್ತಿತರ ಸೌಲಭ್ಯಗಳನ್ನು ಸರ್ಕಾರದ ಆದೇಶದಂತೆ ಲೇಔಟ್ ಮಾಲೀಕರೆ ನಿರ್ವಹಿಸುವಂತೆ ಸಭೆಯಲ್ಲಿ ತಿರ್ಮಾನಿಸಲಾಯಿತು,31-10-2021 ಕ್ಕೆ ಪಟ್ಟಣದ ದಿನವಹಿ ಸುಂಕ ವಸೂಲಾತಿ ಹಕ್ಕು ಮುಗಿಯಲಿದ್ದು, 1-11-2021 ರಿಂದ 31-3-2022 ರವರೆಗೂ ದಿನವಹಿ ಸುಂಕ ವಸೂಲಾತಿಗೆ ಬಹಿರಂಗ ಹರಾಜು ಮಾಡಲು ಮತ್ತು ಅಂದ್ರಗಿರಿ ಹೋಟೇಲ್ ಮಾಲೀಕರ ಕಟ್ಟಡದ ಸುಂಕ 2 ಲಕ್ಷ ಬಾಕಿ ವಸೂಲಿ ಮಾಡಿ ಇಲ್ಲವೆ ಹೋಟೆಲ್ ಸೀಜ್ ಮಾಡುಲು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸದಸ್ಯರಾದ ಮಹಮದ್‌ಇಮ್ರಾನ್, ಟೆಂಕಾಯಲರವಿ, ವೇಲುರಾಜು, ಧನಲಕ್ಷ್ಮೀ ,ಲಕ್ಷ್ಮೀದೇವಿ, ಶಶಿಕಲಾ, ಸುಜಾತ, ಅರೋಗ್ಯ ನೀರಿಕ್ಷಕ ಷಂಷುದ್ದಾಹ, ಹಾಜರಿದ್ದರು.