ಸಿದ್ದಗಂಗಾ ಮಠಕ್ಕೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ : ಡಾ. ಸಿ. ಸೋಮಶೇಖರ್ ಅಭಿನಂದನೆ
ತುಮಕೂರು : ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರತಿ ವರ್ಷ ಮಹಾತ್ಮ ಗಾಂಧಿ ಹೆಸರಿನಲ್ಲಿ ಕೊಡ ಮಾಡುವ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ಸಿದ್ದಗಂಗಾ ಮಠಕ್ಕೆ ಲಭಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು ಅಭಿನಂದಿಸಿ, ಆಶೀರ್ವಾದ ಪಡೆದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಪ್ರಾಧಿಕಾರದ ವತಿಯಿಂದ ಶ್ರೀಗಳ ಫಲತಾಂಬೂಲ ನೀಡಿ ಅಭಿನಂದಿಸಿ, ಭಕ್ತಿ ಸಮರ್ಪಿಸಿದರು.
ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಾರ್ತಾ ಇಲಾಖೆ ವತಿಯಿಂದ ಪ್ರತಿ ವರ್ಷ ಮಹಾತ್ಮಗಾಂಧಿ ಹೆಸರಲ್ಲಿ ನೀಡುವ ಮಹಾತ್ಮಗಾಂಧಿ ಸೇವಾ ಪ್ರಶಸ್ತಿಯನ್ನು ಸಿದ್ದಗಂಗಾ ಮಠಕ್ಕೆ ನೀಡಿರುವುದು ಬಹಳ ಸಂತಸ ತಂದಿದೆ ಎಂದರು.
ಈ ನಾಡಿಗೆ ಸಿದ್ದಗಂಗಾ ಮಠ ಮಾಡಿರುವಂತಹ ಅಕ್ಷರ ದಾಸೋಹ, ಅನ್ನ ದಾಸೋಹ, ಅಭಯ ದಾಸೋಹ ಹಾಗೂ ಆಶ್ರಯ ದಾಸೋಹ ವಿಶ್ವದಲ್ಲೇ ಇತಿಹಾಸ ಪುಟದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದರು.
ಮಹಾತ್ಮ ಗಾಂಧೀಜಿಯವರು ಎಂದರೆ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಬಹಳ ಅಭಿಮಾನ, ಭಕ್ತಿ ಮತ್ತು ಗೌರವ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಹೆಸರಿನ ಪ್ರಶಸ್ತಿಯನ್ನು ಸರ್ಕಾರ ಶ್ರೀಗಳವರ ಸಿದ್ದಗಂಗಾ ಮಠಕ್ಕೆ ನೀಡಿರುವುದು ಅವರ ಆತ್ಮಕ್ಕೆ ನಿಜವಾದ ಶಾಂತಿ ದೊರಕಿದಂತಾಗಿದೆ ಎಂದರು.
ಸಿದ್ದಗಂಗಾ ಮಠಕ್ಕೆ ಮಹಾತ್ಮಗಾಂಧೀಜಿಯವರ ಹೆಸರಿನ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು ಭಕ್ತಿಪೂರ್ವಕವಾಗಿ ಅಭಿನಂದಿಸಿದ್ದೇನೆ ಎಂದ ಅವರು, ಶ್ರೀಮಠಕ್ಕೆ ಮಹಾತ್ಮಗಾಂಧೀಜಿಯವರ ಹೆಸರಿನ ಪ್ರಶಸ್ತಿ ದೊರೆತಿರುವುದು ನಮಗೆಲ್ಲಾ ಬಹಳ ಹರ್ಷ ತಂದಿದೆ ಎಂದು ಹೇಳಿದರು.