ಪೌರಕಾರ್ಮಿರ ತ್ಯಾಗಮಯಿ ಸೇವೆಯನ್ನು ಎಲ್ಲರೂ ಗೌರವಿಸಬೇಕು : ಡಾ.ಸಿ.ಎಂ.ರಾಜೇಶ್ ಗೌಡ
ಶಿರಾ ಅಂಬೇಡ್ಕರ್ ಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ
ಶಿರಾ : ಪ್ರತಿನಿತ್ಯ ನಗರದ ಸ್ವಚ್ಛತೆ ಮಾಡಿ ನಗರದ ಅಂದ ಚಂದವನ್ನು ಕಾಪಾಡುವ ಪೌರಕಾರ್ಮಿಕರ ತ್ಯಾಗಮಯಿ ಸೇವೆಯನ್ನು ನಾವೆಲ್ಲರೂ ಗೌರವಿಸಬೇಕು. ರೈತ, ಯೋಧ ಮತ್ತು ಪೌರ ಕಾರ್ಮಿಕರು ನಮ್ಮ ದೇಶದ ಆಸ್ತಿ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪೌರಕಾರ್ಮಿಕರು ಉತ್ತಮ ಗುಣಮಟ್ಟದ ಜೀವನ ನಡೆಸುವಂತಾಗಬೇಕು. ತಮ್ಮ ಮತ್ತು ತಮ್ಮ ಕುಟುಂಬದ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಟ್ಟು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸ್ವಚ್ಚತಾ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ನಗರಸಭೆಯಿಂದ ದೊರೆಯುವ ಎಲ್ಲಾ ಸೌಲಭ್ಯಬಳಸಿಕೊಂಡು ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಲು ಶ್ರಮಿಸಿ ಎಂದ ಅವರು ಪೌರಕಾರ್ಮಿಕರ ಬಹಳ ವರ್ಷಗಳ ಬೇಡಿಕೆಯಾದ ನಿವೇಶನ ಹಂಚಿಕೆ ಮಾಡುವ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಮಾಡುತ್ತೇನೆ. ಹಾಗೂ ಗುಡಿಸಿಲಿನಲ್ಲಿ ವಾಸಿಸುವ ಪೌರಕಾರ್ಮಿಕರಿಗೆ ವಸತಿ ನಿರ್ಮಿಸಿಕೊಡಲು ಹಣ ಮಂಜೂರು ಮಾಡುವಂತೆ ಖುದ್ದಾಗಿ ವಸತಿ ಸಚಿವರ ಬಳಿ ಹೋಗಿ ಒತ್ತಾಯಿಸಿ ಮಂಜೂರು ಮಾಡಿಸುತ್ತೇನೆ ಎಂದರು.
ತೆಂಗು ಮತ್ತು ನಾರು ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ ಕೋವಿಡ್ 1 ಮತ್ತು 2ನೇ ಅಲೆ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೇ ಕೋವಿಡ್ ಪಾಸಿಟಿವ್ ಮನೆ, ರಸ್ತೆಗಳಲ್ಲಿ ಧೈರ್ಯದಿಂದ ಕೆಲಸ ನಿರ್ವಹಿಸಿ, ನಗರದ ಸ್ವಚ್ಚತೆಯನ್ನು ಕಾಪಾಡಿರುವ ಪೌರಕಾರ್ಮಿಕರ ಸೇವೆ ಅವಿಸ್ಮರಣೀಯ. ಜೀವರಕ್ಷಕರಾಗಿ ಸೇವೆ ಸಲ್ಲಿಸಿದ ಪೌರಕಾರ್ಮಿಕರು ನಿಜವಾದ ಕೋರನಾ ವಾರಿರ‍್ಸ್ಗಳು. ಪೌರಕಾರ್ಮಿಕರಿಗೆ ಸರಕಾರ ಮತ್ತು ನಗರಸಭೆ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ಪೌರಾಯುಕ್ತರು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ತಹಶೀಲ್ದಾರ್ ಮಮತ ಮಾತನಾಡಿ ಪೌರಕಾರ್ಮಿಕರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಅನುಕಂಪ ತೋರಿಸುವ ಬದಲು ಗೌರವ ನೀಡಬೇಕು. ಪೌರಕಾರ್ಮಿಕರು ಮಾಡುವ ಕೆಲಸವನ್ನು ನಾವು ತಾಯಿತನದಿಂದ ನೋಡಬೇಕು. ಪೌರಕಾರ್ಮಿಕರು ಇಡೀ ನಗರದ ಜನರ ಆರೋಗ್ಯ ಚೆನ್ನಾಗಿರಲು ನಗರವನ್ನು ಸ್ವಚ್ಚ ಮಾಡುತ್ತಾರೆ. ಆದರೆ ಅವರ ಆರೋಗ್ಯದ ಕಡೆ ಗಮನ ನೀಡುವುದಿಲ್ಲ. ಪೌರಕಾರ್ಮಿಕರು ತಮ್ಮ ವೃತ್ತಿಯಲ್ಲಿಯೇ ಇಡೀ ಕುಟುಂಬ ಮುಂದುವರೆಯಬೇಕೆಂಬುದು ಬೇಡ. ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರನ್ನು ಉನ್ನತ ಅಧಿಕಾರಿಗಳನ್ನಾಗಿ ಮಾಡಿ ಎಂದರು.
ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಸಂಚಾಲಕ ಟೈರ್ ರಂಗನಾಥ್ ಮಾತನಾಡಿ ಪೌರಕಾರ್ಮಿಕರಿಗೆ ನಗರಸಭೆಯಿಂದ ಪ್ರತಿ ವರ್ಷ ನಿವೇಶನ ನೀಡುವುದಾಗಿ ಭರವಸೆ ನೀಡುತ್ತಾರೆಯೇ ಹೊರತು ಇದುವರೆಗೆ ನಿವೇಶನ ನೀಡಿಲ್ಲ. ಹಾಗು ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿಕರಿಗೂ ನೇರಪಾವತಿ ವೇತನ ಅಡಿಯಲ್ಲಿ ವೇತನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಮಾಡಿದ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು. ವಿವಿಧ ಫಲಾನುಭವಿಗಳಿಗೆ ಗ್ಯಾಸ್‌ಸಿಲಿಂಡರ್, ಚರ್ಮಕುಟೀರ ಹಾಗೂ ಅಂಗನವಾಡಿಗೆ ಅಗತ್ಯ ಪರಿಕರಗಳನ್ನು ಶಾಸಕರು ವಿತರಿಸಿದರು. ಪೌರಾಯುಕ್ತ ಶ್ರೀನಿವಾಸ್, ಎಇಇ ಸೇತುರಾಂ ಸಿಂಗ್, ಪರಿಸರ ಅಭಿಯಂತರೆ ಪಲ್ಲವಿ, ಕಂದಾಯ ಅಧಿಕಾರಿ ಪ್ರದೀಪ್, ಆರೋಗ್ಯ ನಿರೀಕ್ಷಕರಾದ ಜಾಫರ್, ಮಹಮದ್ ಗೌಸ್, ಮಾರೇಗೌಡ, ಸಮಾಜ ಸೇವಕ ಎಸ್.ಕೆ.ರಾಮಚಂದ್ರ ಗುಪ್ತ, ಶಿವಾಜಿನಗರ ತಿಪ್ಪೇಸ್ವಾಮಿ, ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್ ಸೇರಿದಂತೆ ಹಲವರು ಹಾಜರಿದ್ದರು.