ವಿದ್ಯಾವಾಚಸ್ಪತಿ ಡಾ. ಕವಿತಾ ಕೃಷ್ಣ ತುಮಕೂರಿನ ಆಸ್ತಿ
ಡಾ. ಕವಿತಾಕೃಷ್ಣರ 77ನೇ ಜನ್ಮದಿನ ಆಚರಣೆ
ತುಮಕೂರು : ಸ್ನೇಹ ಕ್ರೀಡಾ ಮತ್ತು ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ 77ನೇ ಜನ್ಮದಿನವನ್ನು ಕ್ಯಾತ್ಸಂದ್ರದ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣರವರ ಸ್ವಗೃಹದಲ್ಲಿ ಆಚರಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಕವಿತಾಕೃಷ್ಣರವರು ಅಧ್ಯಾತ್ಮಿಕ ದೃಷ್ಟಿಯಲ್ಲಿ ಆತ್ಮ ಒಂದೇ ಆಗಿರುತ್ತದೆ. ಆತ್ಮಕ್ಕೆ ಹೆಣ್ಣು ಮತ್ತು ಗಂಡು ಭೇದವಿರುವುದಿಲ್ಲ. ಆತ್ಮವು ಲಿಂಗಭೇದವಿಲ್ಲದ, ಚಿತ್ತವೃತ್ತಿ ಇಲ್ಲದ ಮಹಾನ್ ಮಹತ್ತೇ ಆಗಿದೆ. ಜಗತ್ತಿನಲ್ಲಿರುವುದು ಒಂದೇ ಸೃಷ್ಟಿಯ ಕರ್ತ ಪರಮಾತ್ಮ. ಪರಮಾತ್ಮನೇ ಎಲ್ಲ ಆತ್ಮಗಳ ತಂದೆ. ಅರ್ಥಾತ್ ವಚನಕಾರರೂ ಸಹ ಇದನ್ನೇ ಹೇಳಿದ್ದಾರೆ. ವಚನಕಾರರು ಲಿಂಗಪತಿ ಶರಣಸತಿ ಎನ್ನುವ ಹಾಗೆ ಜಗತ್ತಿನಲ್ಲಿರುವವರೆಲ್ಲ ಸತಿಯರು. ಒಬ್ಬನೇ ಪತಿ. ಅಕ್ಕಮಹಾದೇವಿಯ ಅಧ್ಯಾತ್ಮಿಕ ನಿಲುವು ಕೂಡಾ ಸತಿಪತಿ ಭಾವನೆಯಲ್ಲಿಯೇ ಇತ್ತು. ಶ್ರೀಶೈಲದ ಚನ್ನಮಲ್ಲಿಕಾರ್ಜುನನೊಬ್ಬನೇ ನನ್ನ ಪತಿ ಎಂಬ ನಿಶ್ಚಲಚಿತ್ತದಿಂದ ಚನ್ನಮಲ್ಲಿಕಾರ್ಜುನನ್ನು ಹುಡುಕುತ್ತಾ ಕದಳಿಗೆ ಹೋಗಿ ಐಕ್ಯಳಾದ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಇತಿಹಾಸ ಕೂಡ ಇದೇ ವಿಷಯವಾಗಿ ಮರಳಿ ಮರಳಿ ಅಧ್ಯಾತ್ಮಿಕದತ್ತ ಹೊರಳುತ್ತದೆ. ಡಾ. ರಾಧಾಕೃಷ್ಣ ಕನ್ಯಕಾ ಪರಮೇಶ್ವರಿ ಚಿತ್ರದ ಪಾತ್ರವನ್ನು ಕಲ್ಪನಾ ಅವರು ನಟಿಸಿದ್ದರು. ಹುಣಸೂರು ಕೃಷ್ಣಮೂರ್ತಿ,ತು.ರಾ. ಸೀತಾರಾಮ್‌ಶಾಸ್ತ್ರೀ ಚಿ. ಉದಯಶಂಕರ್ ಇವರಿಗೆ ಜ್ಞಾನಪೀಠ ಪ್ರಶಸ್ತಿ ಕೊಡಬೇಕಾಗಿತ್ತು. ಅಂತಹ ಸಾಹಿತ್ಯವನ್ನು ನಮಗೆ ಬಿಟ್ಟುಹೋಗಿದ್ದಾರೆ. ಹಿಂದಿನಿಂದಲೂ ಸಿನಿಮಾ ಒಂದು ದೃಶ್ಯಮಾಧ್ಯಮವಾಗಿಯೇ ಗುರುತಿಸಲ್ಪಟ್ಟು ಹೆಸರಾಂತ ಸಾಹಿತಿಗಳ ಸಾಹಿತ್ಯ ಗಣನೆಗೆ ಬಾರದಂತಾಯಿತು. ಈಗ ಗದ್ಯ ಪ್ರಪಂಚ, ಪದ್ಯ ಪ್ರಪಂಚ ಮುಗಿಯಿತು. ಎಲ್ಲಾ ಆನ್‌ಲೈನ್, ವ್ಯಾಟ್ಸ್ಗ್ರೂಪ್ ಫೇಸ್‌ಬುಕ್ ಕವಿಗಳು ಇಡೀ ನೆಟ್‌ವರ್ಕ್ನ್ನು ಆವರಿಸಿಕೊಂಡು ಬಿಟ್ಟಿದ್ದಾರೆ ಎಂದು ಹೇಳಿದರು.
ಸಾಹಿತ್ಯ ಮತ್ತ ಸಾರಸ್ವತ ಲೋಕದಲ್ಲಿ ಕವಿತಾಕೃಷ್ಣ ನಮ್ಮೆಲ್ಲರಿಗೂ ಗುರುಗಳು. ಸಾಹಿತಿಗಳು ಹೆಚ್ಚಾಗಿ ಸೌಹಾರ್ದಯುತ ಮಾನವೀಯ ಮೌಲ್ಯಗಳ ತುಲನೆಯಲ್ಲಿ ನಾವು ನೋಡಿದಾಗ ಗುರು ಅನ್ನುವ ಪದಕ್ಕೆ ಬಹಳ ಹತ್ತಿರವಾಗಿದ್ದಾರೆ. ಗುರುಗಳು ಒಬ್ಬ ಯಶಸ್ವೀ ಸಾಹಿತಿ. ಎಲ್ಲಾ ಸಾಹಿತಿಗಳಲ್ಲಿಯೂ ಒಂದು ಅವಿನಾಭಾವ ಸಂಬಂಧವನ್ನು ತುಮಕೂರಿನಲ್ಲಿ ಇಟ್ಟುಕೊಂಡಂತ ಸಾಹಿತಿಗಳು. ಒಬ್ಬ ಸಾಹಿತಿ ದಿವ್ಯದೃಷ್ಟಿಯಿಂದ ನಾನು ಬೇರೆ ಅಲ್ಲ ಸಮಾಜ ಬೇರೆ ಅಲ್ಲ ಎಂಬಂತೆ ಭಾವನೆಗಳನ್ನು ಬರವಣಿಗೆಯ ಮೂಲಕ ಅನಿಸಿಕೆಗಳನ್ನು ವ್ಯಕ್ತಪಡಿಸುವಲ್ಲಿ ಸಾಧನೆಯನ್ನು ತೋರಿದ್ದಾರೆ. ತುಮಕೂರಿನ ಸಾಹಿತ್ಯ ಪರಂಪರೆಯಲ್ಲಿ ನಡೆನುಡಿಗಳನ್ನು, ಅನುಯಾಯಿಗಳನ್ನಾಗಿ ಪರಿಗಣಿಸಬಹುದಾದರೆ ವಿದ್ಯಾವಾಚಸ್ಪತಿ ಕವಿತಾ ಕೃಷ್ಣರವರನ್ನೇ ಅನುಸರಿಸಬಹುದು ಎಂದು ಹೇಳುವಲ್ಲಿ ನನಗೆ ಹೆಮ್ಮೆ ಅನಿಸುತ್ತದೆ. ತುಮಕೂರಿಗೆ ಇವರ ಮಾರ್ಗದರ್ಶನ, ಉತ್ಸಾಹ, ಎಲ್ಲರೊಟ್ಟಿಗೆ ಆತ್ಮೀಯವಾಗಿ ಕಾಣುವ ಇವರ ಭಾವನೆಗಳು ಸಿಂಹಘರ್ಜನೆಯ ಮೂಲಕ ನಾಡು ನುಡಿಯನ್ನು ತಲುಪಿಸುವ ಕಾಳಜಿ ಇವರಿಗಿದೆ. 77ರಲ್ಲೂ ಯುವ ಉತ್ಸಾಹವನ್ನಿಟ್ಟುಕೊಂಡಿದ್ದಾರೆ. ಇವರು ನಾಡು, ನುಡಿ, ದೇಶದ ಬಗ್ಗೆ ವಿದ್ಯಾರ್ಥಿ ಸಮುದಾಯಕ್ಕೆ ತೋರುವ ಕಾಳಜಿ, ಅಧ್ಯಾಪಕರಿಗೂ ಆದರ್ಶ. ಗುರುಗಳು ಸಮಾಜದ ಸಮಾಜದ ಅನುಯಾಯಿಗಳಲ್ಲ. ಮಾರ್ಗದರ್ಶಕರು. ಎಲ್ಲಾ ಗುಣಗಳ ರಾಶಿಯೇ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣರಲ್ಲಿ ತುಂಬಿದೆ ಎಂದು ವೆನ್ನೆಲಕೃಷ್ಣ ನುಡಿದರು.
ಸ್ನೇಹ ಕ್ರೀಡಾ ಮತ್ತು ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯರು ಹಾಗೂ ಪದಾಧಿಕಾರಿಗಳಾದ ಉಮಾದೇವಿ .ಪಿ, ಸತೀಶ್ ಹೆಬ್ಬಾಕ, ಅಬ್ಬಿನಹೊಳೆ ಸುರೇಶ್, ವಿ.ಪಿ.ಕೃಷ್ಣ (ವೆನ್ನೆಲಕೃಷ್ಣ) ಗಣೇಶ್‌ಪ್ರಸಾದ್ ಇವರುಗಳು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ, ಶ್ರೀಮತಿ ರತ್ನ ಕವಿತಾಕೃಷ್ಣ ದಂಪತಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ, ಗೌರವಿಸಲಾಯಿತು.