ಕೊಳವೆ ಬಾವಿಗಳಿಗೆ ಜಲ ಮರು ಪೂರಣ ವಿಧಾನ ಅಳವಡಿಸಿಕೊಳ್ಳಿ :ಸಿಇಓ ವಿದ್ಯಾಕುಮಾರಿ
ಚಿಕ್ಕನಾಯಕನಹಳ್ಳಿ : ಅವ್ಯಾಹತವಾಗಿ ಕೊರೆದ ಕೊಳವೆ ಬಾವಿಗಳಿಂದ ಅಂತರ್ಜಲ ಬರಿದಾಗಿದೆ. ಈ ನಿಟ್ಟಿನಲ್ಲಿ ಬತ್ತಿದ ಬೊರ್‌ವೆಲ್, ಅನುಪಯುಕ್ತ ಬೊರ್‌ವೆಲ್ ಮತ್ತು ಹೊಸದಾಗಿ ಕೊರೆಯುವ ಬೋರ್‌ವೆಲ್‌ಗಳಿಗೆ ಜಲ ಮರು ಪೂರಣ ವಿಧಾನವನ್ನು ಅಳವಡಿಸಿಕೊಳ್ಳುವಂತೆ ತುಮಕೂರು ಜಿ.ಪಂ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾಕುಮಾರಿ ಸಲಹೆ ನೀಡಿದರು.
ಅಟಲ್ ಭೂಜಲ ಯೋಜನೆಯ ಅನುಷ್ಠಾನದ ಬಗ್ಗೆ ಜೆ.ಸಿ.ಪುರ ಗ್ರಾಪಂ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಂತರ್ಜಲ ಮಟ್ಟದ ಸರ್ವೆ ಕಾರ್ಯ ನಡೆಯುತ್ತಿದ್ದು ಯೋಜನೆಯ ಅಭಿವೃದ್ದಿಯ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.
ರೈತರು ತಮ್ಮ ಜಮೀನುಗಳಲ್ಲಿ ಬದು, ಕಾಲುವೆಗಳ ತೆರವು, ಇಂಗು ಗುಂಡಿ ನಿರ್ಮಿಸಿ ಪೋಲಾಗುವ ನೀರನ್ನು ವ್ಯವಸ್ಥಿತವಾಗಿ ಇಂಗಿಸಿ ಅಂತರ್ಜಲವನ್ನು ಹೆಚ್ಚಿಸಿಕೊಳ್ಳಬೇಕಿದೆ. ನರೇಗಾ ಯೋಜನೆಯಡಿ ಈ ಕಾರ್ಯವನ್ನು ಮಾಡಬಹುದಾಗಿದೆ. ಕೊಳವೆ ಬಾವಿಯ ಸುತ್ತಲೂ ಮಳೆ ನೀರು ಬಸಿಯುವ ಅವಕಾಶ ಕಲ್ಪಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಜಲಮರುಪೂರಣದ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಿಡಿಓ ಕೋಕಿಲಾ ಮಾತನಾಡಿ ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ತಜ್ಞರು ತಂತ್ರಜ್ಞಾನದ ಸಹಾಯದಿಂದ ತರಂಗಾAತರಗಳ ಮೂಲಕ ಅಂತರ್ಜಲದ ಇರುವಿಕೆಯನ್ನು ಖಚಿತ ಪಡಿಸುತ್ತಿದ್ದಾರೆ. ನೀರು ಸಿಗುತ್ತದೆ ಎಂದು ಖಾತ್ರಿಯಾದ ನಂತರವೇ ರೈತರು ಬೊರ್‌ವೆಲ್ ಕೊರೆಸಲು ಮುಂದುವರೆಯಬಹುದು ಇದರಿಂದ ಅನಾವಶ್ಯಕವಾಗಿ ಬೊರ್‌ವೆಲ್ ಕೊರೆಸಲು ಖರ್ಚಾಗುತ್ತಿದ್ದ ಹಣ ರೈತರಿಗೆ ಉಳಿಯುತ್ತದೆ ಇದಕ್ಕಾಗಿ ತಜ್ಞರು ಪರಿಶೀಲನೆ ಮಾಡುತ್ತಿದ್ದಾರೆ ಎಂದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ವಸಂತ್‌ಕುಮಾರ್, ಸರ್ವೆ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಮತ್ತು ರೈತರು ಹಾಜರಿದ್ದರು.