ಶಿರಾ : ಸರಕಾರವು ವಯೋವೃದ್ಧರಿಗೆ, ವಿಕಲಚೇತನರಿಗೆ ಗೌರವ ಜೀವನ ನಡೆಸಲು ನೀಡುವ ಪಿಂಚಣಿ ಹಣವು ಮಧ್ಯವರ್ತಿಗಳ ಪಾಲಾಗಬಾರದು. ಈ ಉದ್ದೇಶದಿಂದ ನೇರವಾಗಿ ಕಚೇರಿಗೆ ಬಂದು ತಮ್ಮ ದಾಖಲೆಗಳನ್ನು ಸಲ್ಲಿಸಿ ಪಿಂಚಣಿ ಪ್ರಮಾಣ ಪತ್ರ ಪಡೆಯಿರಿ ಎಂದು ತಹಶೀಲ್ದಾರ್ ಮಮತ ಹೇಳಿದರು.
ಅವರು ಬುಕ್ಕಾಪಟ್ಟಣ ಹೋಬಳಿಯ ಹುಯಿಲ್ ದೊರೆ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಸಾರ್ವಜನಿಕರು ಪಿಂಚಣಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಸಾಕ್ಷಿಹಳ್ಳಿ, ಬುಕ್ಕಾಪಟ್ಟಣ, ರಾಮಲಿಂಗಾಪುರ , ಹುಯಿಲ್ ದೊರೆ, ಶಾಗದಡು ಗ್ರಾಮದ ಫಲಾನುಭವಿಗಳಿಗೆ ಆದೇಶ ಪ್ರತಿ ನೀಡಿ, ಸಮಸ್ಯೆಗಳ ಅರ್ಜಿಗಳನ್ನು ಸಹಾ ಸ್ವೀಕರಿಸಲಾಯಿತು. ಗ್ರೇಡ್-2 ತಹಶೀಲ್ದಾರ್ ಮಂಜುನಾಥ, ಉಪ ತಹಶೀಲ್ದಾರ್ ಅನ್ನಪೂರ್ಣಮ್ಮ, ಗ್ರಾ.ಪಂ. ಸದಸ್ಯರಾದ ಮಂಜುನಾಥ, ರಾಜಸ್ವ ನಿರೀಕ್ಷಕರಾದ ಉಮೇಶ್ ಸೇರಿದಂತೆ ಬುಕ್ಕಾಪಟ್ಟಣ ಹೋಬಳಿಯ ಎಲ್ಲಾ ಲೆಕ್ಕಿಗರು ಹಾಗೂ ಫಲಾನುಭವಿಗಳು ಹಾಜರಿದ್ದರು.