
ಕೊರಟಗೆರೆ: ಗ್ರಾಮ ಪಂಚಾಯಿತಿ ಅಭಿವೃಧಿ ಅಧಿಕಾರಿ
ನಾಗರಾಜು ದಲಿತರಿಗೆ ತಾರತಮ್ಯ ಮಾಡಿ ಕಿರುಕುಳ
ನೀಡುತ್ತಿರುವುದನ್ನು ಖಂಡಿಸಿ ಪಂಚಾಯಿತಿ ಮುಂಭಾಗ
ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ
ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ
ಕುರಂಕೋಟೆ ಗ್ರಾಮಪಂಚಾಯತಿಯಲ್ಲಿ ನಡೆದಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ
ದೊಡ್ಡೇರಿ ಕಣಿವಯ್ಯ ಮಾತನಾಡಿ ತಾಲೂಕಿನ
ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ
ಗ್ರಾಮ ಪಂಚಾಯಿತಿ ಪಿಡಿಓ ನಾಗರಾಜು ದಾಸಲಕುಂಟೆ
ಗ್ರಾಮದ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ
ಸಂಬಂಧ ಇಬ್ಬರು ಸವರ್ಣೀಯರಿಗೆ ಎನ್.ಓ.ಸಿ
ನೀಡಿ ಇಬ್ಬರು ದಲಿತರಿಗೆ ವರ್ಷಗಳಿಂದ ಎನ್‌ಓಸಿ
ನೀಡದೇ ಅಲೆದಾಡಿಸಿ ತಾರತಮ್ಯ ವೆಸಗಿದ್ದಾರೆ.
ಗ್ರಾಮ ಪಂಚಾಯ್ತಿಯ ಶೇ25%ಅನುದಾನವನ್ನು
ವರ್ಷದಿಂದ ಉಪಯೋಗಿಸದೆ ದಲಿತರಿಗೆ ಅನ್ಯಾಯ
ಮಾಡಿದ್ದಾರೆ. ದಾಸಾಲುಕುಂಟೆಯ ಎಂಟು ಅಂಗಡಿಗಳ
ಪೈಕಿ ಮೇಲ್ವರ್ಗದ ಇಬ್ಬರಿಗೆ ಎನ್.ಓ.ಸಿ.ನೀಡಿ ದಲಿತ
ಹೆಣ್ಣುಮಕ್ಕಳಾದ ನಳಿನಾಕ್ಷಿ ಮತ್ತು ಮಂಗಳಮ್ಮ
ರವರು ಅದೇ ರೀತಿ ಪಕ್ಕದಲ್ಲಿರುವ ನಮ್ಮ ಅಂಗಡಿಗೂ
ಎನ್.ಓ.ಸಿ. ನೀಡಿ ಎಂದು ಅರ್ಜಿ ನೀಡಿದರೆ ಅವರನ್ನು
ತಿಂಗಳುಗಟ್ಟಲೆ ಅಲೆಸಿದ್ದಾರೆ. ಪಿ.ಡಿ.ಓ.ರವರಿಗೆ
ದಲಿತ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಜೀವನ
ನಿರ್ವಹಿಸುವುದು ಸಹಿಸುವುದು ಕಷ್ಟವಾಗಿದೆ. ಅದೇ
ರೀತಿಯಾಗಿ ಸರ್ಕಾರ ನೀಡುವ ಶೇ.25 ರ ದಲಿತರ
ಅಭಿವೃದ್ಧಿ ಕೆಲಸಗಳ ಹಣವನ್ನೂ ಸಹ ವರ್ಷಗಟ್ಟಲೆ
ಇಟ್ಟುಕೊಂಡಿರುವುದು ಈತನ ಕರ್ತವ್ಯ ಲೋಪ
ಕಂಡುಬರುತ್ತಿದ್ದು ಕೂಡಲೇ ಇವರನ್ನು ಅಮಾನತ್ತು
ಮಾಡುವಂತೆ ಒತ್ತಾಯಿಸಿ ಇನ್ನು 20 ದಿನಗಳಲ್ಲಿ
ದಲಿತರಿಗೆ ಎನ್.ಓ.ಸಿ. ನೀಡದಿದ್ದರೆ ಗ್ರಾ.ಪಂ. ಮುಂದೆ
ದರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಸಮಿತಿಯ ತಾಲ್ಲೂಕು ಸಂಚಾಲಕ ನರಸಿಂಹಮೂರ್ತಿ
ಮಾತನಾಡಿ ಕುರಂಕೋಟೆ ಗ್ರಾ.ಪಂ. ಪಿ.ಡಿ.ಓ.ನಾಗರಾಜು
ಉದ್ದೇಶಪೂರ್ವಕವಾಗಿಯೇ ದಲಿತರನ್ನು ಕೀಳರಿಮೆಯ
ಭಾವನೆಯಿಂದ ತಾರತಮ್ಯ ಮಾಡಿದ್ದಾರೆ. ಗ್ರಾಮ
ಪಂಚಾಯ್ತಿಯ 14 & 15ನೇ ಹಣಕಾಸಿನ
ಯೋಜನೆಯಲ್ಲೂ ಸಹ ದಲಿತರಿಗೆ ಅನ್ಯಾಯ
ಮಾಡಿದ್ದಾರೆ ಎಂದು ದಲಿತರು ಆರೋಪಿಸಿದ್ದು
ಈಸ್ವತ್ತಿಗಾಗಿ ಹಣ ಪೀಡಿಸುತ್ತಿದ್ದು ಸರ್ಕಾರ
ನೀಡುತ್ತಿರುವ ದಲಿತ ಆಶ್ರಯ ಯೋಜನೆ ಮನೆಗಳ
ನಿರ್ಮಾಣದ ಹಂತದಲ್ಲಿ ಜಿ.ಪಿ.ಎಸ್. ಮಾಡಿಸುವುದಾಗಿ
ಸಾವಿರಾರು ಹಣವನ್ನು ದಲಿತರಿಂದ ವಸೂಲಿ
ಮಾಡುತ್ತಾರೆ. ಪಿ.ಡಿ.ಓ ಬಗ್ಗೆ ಗ್ರಾಮ ಪಂಚಾಯ್ತಿ ಮತ್ತು
ಗ್ರಾಮಸ್ಥರು ಹಲವು ಬಾರಿ ದೂರುಗಳನ್ನು ಅಧಿಕಾರಿ
ವರ್ಗಕ್ಕೆ ತಂದರೂ ಇವರ ಮೇಲೆ ಯಾವುದೇ
ಕ್ರಮ ಕೈಗೊಂಡಿಲ್ಲ. ಪ್ರಸ್ತುತ ಎನ್.ಓ.ಸಿ. ವಿಚಾರದಲ್ಲಿ
ದಲಿತರಿಗೆ ತಾರತಮ್ಯ ಮಾಡಿದ್ದಾರೆ. ಕೂಡಲೇ
ಇವರನ್ನು ಅಮಾನತ್ತುಗೊಳಿಸಬೇಕು ಇಲ್ಲವೇ ಇತರ
ಕಡೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯ್ತಿ
ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್ ಮನವಿಯನ್ನು
ಪಡೆದು ತನಿಖೆಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ
ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಗ್ರಾಪಂ ಸದಸ್ಯ ಸಿದ್ದಪ್ಪ,
ಮುಖಂಡರಾದ ದಾಸಾಲುಕುಂಟೆ ನಟರಾಜು,
ರಮೇಶ್, ದೇವೀರಪ್ಪ, ರಂಗನಾಥ್, ಸೇರಿದಂತೆ
ಹಲವರು ಭಾಗವಹಿಸಿದ್ದರು.