ತುಮಕೂರು

ಮಾಟ- ಮಂತ್ರ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್

ತುಮಕೂರು: ರೋಗಗಳನ್ನು ಗುಣಪಡಿಸುವುದಾಗಿ
ಪೂಜೆ-ಪುನಸ್ಕಾರ, ಮಾಟ- ಮಂತ್ರ ಮಾಡುವವರ
ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು
ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಎಚ್ಚರಿಕೆ
ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು
ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿ
ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,
ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ
ಹೆಚ್ಚಿನ ಸಂಖ್ಯೆಯ ಮಕ್ಕಳಲ್ಲಿ ವೈರಲ್ ಫೀವರ್
ಕಂಡುಬರುತ್ತಿದ್ದು, ಫೀವರ್ ತಗುಲಿದ ಬಹುತೇಕ
ಮಕ್ಕಳು ಮರಣ ಹೊಂದುವ ಸಾಧ್ಯತೆಗಳಿವೆ.
ಆದ್ದರಿಂದ ಜ್ವರ ಕಂಡು ಬಂದ ಮಕ್ಕಳಿಗೆ ತಕ್ಷಣವೇ
ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು
ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಬಹುತೇಕರು ವೈದ್ಯಕೀಯ
ಚಿಕಿತ್ಸೆ ನಿರ್ಲಕ್ಷಿಸಿ ಜ್ವರದಿಂದ ಬಳಲುತ್ತಿರುವ
ಮಕ್ಕಳನ್ನು ಗುಣಪಡಿಸಲು ದೇವಸ್ಥಾನಗಳ ಮೊರೆ
ಹೋಗುತ್ತಿದ್ದು, ಅಧಿಕಾರಿಗಳು ಇದಕ್ಕೆ ಸಂಪೂರ್ಣ
ಕಡಿವಾಣ ಹಾಕಬೇಕು. ರೋಗ ಗುಣಪಡಿಸಲು
ದೇವಸ್ಥಾನಗಳಿಗೆ ಹೋಗದೆ ವೈದ್ಯಕೀಯ
ಚಿಕಿತ್ಸೆ ಕೊಡಿಸಬೇಕು. ಮೌಢ್ಯತೆಯಿಂದ ರೋಗ
ಗುಣಪಡಿಸುವ ಪ್ರಸಂಗಗಳು ಕಂಡುಬಂದಲ್ಲಿ
ಸಾರ್ವಜನಿಕರು ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ
ಮಾಹಿತಿ ಒದಗಿಸಿ ರೋಗಗಳ ನಿಯಂತ್ರಣಕ್ಕೆ
ಸಹಕರಿಸಬೇಕು ಎಂದರು.
ಜಿಲ್ಲೆಯಲ್ಲಿ ಹರಡುವ ಸಾಂಕ್ರಾಮಿಕ ಮತ್ತು
ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಲೇರಿಯಾ,
ಚಿಕುಂಗುನ್ಯಾ, ಡೆಂಗ್ಯೂ, , ಕ್ಷಯರೋಗ,
ಮೆದುಳು ಜ್ವರ ಸೇರಿದಂತೆ ಹಲವು ಮಾರಣಾಂತಿಕ
ರೋಗಗಳ ನಿಯಂತ್ರಣಕ್ಕೆ ಸಂಬAಧಿಸಿದ
ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು,
ರೋಗ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ
ಮೂಡಿಸಬೇಕು ಎಂದರು.
ತಗ್ಗಿದ ಮಲೇರಿಯಾ: ಕಳೆದೆರಡ್ಮೂರು ವರ್ಷಗಳಿಗೆ
ಹೋಲಿಸಿದರೆ ಜಿಲ್ಲೆಯಲ್ಲಿ ಪ್ರಸ್ತುತ ಮಲೇರಿಯಾ
ಪ್ರಕರಣಗಳ ಪ್ರಮಾಣ ಗಣನೀಯವಾಗಿ ತಗ್ಗಿದೆ.
ಪ್ರಸಕ್ತ ಸಾಲಿನಲ್ಲಿ ಈವರೆಗೆ ಜಿಲ್ಲೆಯಲ್ಲಿ 3
ಮಲೇರಿಯಾ ಪ್ರಕರಣಗಳು ಮಾತ್ರ ಪತ್ತೆಯಾಗಿವೆ.
ಉಳಿದಂತೆ, 71 ಡೆಂಗ್ಯೂ, 77 ಚಿಕುನ್‌ಗುನ್ಯಾ
ಪ್ರಕರಣಗಳು ವರದಿಯಾಗಿದ್ದು, ಈ ಸಾಂಕ್ರಾಮಿಕ
ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು
ಎಂದು ನಿರ್ದೇಶಿಸಿದರು.
ಡಾಗ್ ಬೈಟ್: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ
ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,
ಇದರಿಂದ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ
ತೊಂದರೆಯಾಗುತ್ತಿದೆ. ನಾಯಿಗಳ ಸಂಖ್ಯೆ
ಹೆಚ್ಚಾಗಿರುವಂತಹ ಪ್ರದೇಶಗಳನ್ನು ಗುರುತಿಸಿ
ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಸೂಕ್ತ
ಕ್ರಮಗಳನ್ನು ಕೈಗೊಳ್ಳಬೇಕು. ಕೋಳಿ ತ್ಯಾಜ್ಯವನ್ನು
ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ
ನಗರ ಪ್ರದೇಶದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು,
ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ
ಮಾಡಿ, 2 ರಿಂದ 3 ವಾರಗಳೊಳಗೆ ಬೀದಿ
ನಾಯಿಗಳ ಸಮಸ್ಯೆ ಬಗೆಹರಿಸಬೇಕು ಎಂದು
ನಿರ್ದೇಶಿಸಿದರು.
ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್/
ಇಂಜಿನಿಯರಿಂಗ್ ವಿಭಾಗ/ ನಗರಾಭಿವೃದ್ಧಿ,
ಮಹಾನಗರ ಪಾಲಿಕೆ, ಶಿಕ್ಷಣ, ಸಮಾಜ ಕಲ್ಯಾಣ,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು
ನೈರ್ಮಲ್ಯ ಕಾಪಾಡಲು ಮೊದಲಾದ್ಯತೆ ಕೊಡಬೇಕು
ಎಂದು ಸೂಚನೆ ನೀಡಿದರು.
ಕಳಪೆ ಸ್ಥಿತಿಯಲ್ಲಿರುವ ಬಸ್, ರೈಲ್ವೆ ನಿಲ್ದಾಣ
ಹಾಗೂ ಎಪಿಎಂಸಿ ಮಾರುಕಟ್ಟೆಯ ರಸ್ತೆಗಳು
ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿದ್ದು, ಈ ರಸ್ತೆಗಳಲ್ಲಿ
ಕೊಳಚೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು
ಎಂದರಲ್ಲದೆ, ಕೆಎಸ್ಸಾರ್ಟಿಸಿ ಅಧಿಕಾರಿಗಳು
ನಿರುಪಯುಕ್ತ ಟೈರ್‌ಗಳನ್ನು ಸಮರ್ಪಕವಾಗಿ
ವಿಲೇವಾರಿ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ
ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ.ಕೆ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ
ಚಿಕಿತ್ಸಕ ಡಾ. ವೀರಭದ್ರಯ್ಯ, ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ
ಶ್ರೀಧರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ
ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker