ಮಧುಗಿರಿ: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು ಆಮ್ಲಜನಕ ಪ್ರಮಾಣ ಕುಸಿಯುತ್ತಿದೆ ಬಿಸಿ ಗಾಳಿ ಬೀಸುತ್ತ ಮಳೆ ಹೋಗಿ ಮುಗಿಲು ಸೇರಿದೆ ಮಳೆಯನ್ನು ಧರೆಗೆ ಕೂಗಿ ಕರೆಯುವ ಮರಗಳು ದೌರ್ಜನ್ಯಕ್ಕೆ ಸಿಲುಕಿ ಧರೆಗುರುಳುತ್ತಿವೆ ಮರಗಳನ್ನು ಬೆಳಸಿ ಪರಿಸರ ಸಂರಕ್ಷಿಸುವ ಹೃದಯಗಳು ಕಡಿಮೆಯಾಗುತ್ತಿವೆ ಇದಕ್ಕೆ ಸಾಕ್ಷಿ ಎಂಬಂತೆ ಶಿರಾ- ಮಧುಗಿರಿ ಹೆದ್ದಾರಿ ರಸ್ತೆಯಲ್ಲಿರುವ ಮೂರು ಹುಣಸೆ ಮರಗಳನ್ನು ಅರಣ್ಯ ಇಲಾಖೆ ಸದ್ದಿಲ್ಲದೆ ಹರಾಜು ನಡೆಸಿ ಮರಗಳ ಮರಣಕ್ಕೆ ಮಂಗಳ ಹಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಸಿದ್ದಾಪುರ ಕೆರೆಯ ಸಮೀಪವಿರುವ ಮೂರು ಹುಣಸೆ ಮರಗಳು ಇಲ್ಲಿಯವರೆಗೂ ಯಾರಿಗೂ ತೊಂದರೆ ಮಾಡಿಲ್ಲ ರಸ್ತೆಯಿಂದ ದೂರವಿದ್ದು ತಮ್ಮ ಪಾಡಿಗೆ ತಾವು ಶುದ್ಧ ಗಾಳಿಯನ್ನು ಬೀಸುತ್ತ ಬರುತ್ತಿವೆ ಹೀಗಿದ್ದರೂ ಇವುಗಳ ಕೊಲೆಗೆ ಸುಪಾರಿ ಕೊಟ್ಟವರು ಯಾರು ಅರಣ್ಯ ಇಲಾಖೆ ಯಾರನ್ನು ಕೇಳಿ ಇವುಗಳ ಮಾರಣ ಹೋಮಕ್ಕೆ ಮುಂದಾಗಿದೆ ಇಂತಹ ಎಲ್ಲಾ ವಿಚಾರಗಳನ್ನು ನೋಡಿದಾಗ ಪ್ರಬಲ ರಾಜಕಾರಣಿಗಳ ಕೈವಾಡ ಇರಬಹುದೇ ಪ್ರಭಾವಿಗಳ ಕೈ ಈ ಮರಗಳ ಬುಡಕ್ಕೆ ಬಂದಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಈ ಮೂರು ಹುಣಸೆ ಮರಗಳ ಸಮೀಪದಲ್ಲಿ ಇತ್ತಿಚೆಗೆ ಹೊಸದಾಗಿ ಪೆಟ್ರೋಲ್ ಬಂಕ್ ಸ್ಥಾಪನೆಯಾಗುತ್ತಿದ್ದು ಅದಕ್ಕೂ ಸಹ ಇವುಗಳು ಅಡ್ಡವಾಗಿಲ್ಲ ಅದರೂ ಸಹ ಈ ಮರಗಳ ಬುಡಕ್ಕೆ ಕೊಡಲಿ ಇಟ್ಟು ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ಅ ಕಾಣದ ಕೈ ಯಾವುದು ಎಂಬುದು ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ.
ಮರಗಿಡ ಬೆಳಸಿ, ಪರಿಸರ ಉಳಿಸಿ ಎಂದು ಸರ್ಕಾರ ಮತ್ತು ಸಂಘಟನೆಗಳು ಅರಿವು ಮೂಡಿಸುತ್ತಿವೆ ಇದು ಕೇವಲ ಔಪಚಾರಿಕ ಸಮಾರಂಭಕ್ಕೆ ಹಾಗೂ ಭಾಷಣಕ್ಕೆ ಮಾತ್ರ ಸೀಮಿತವಾಗಿದೆಯಾ ಎನ್ನಿಸುತ್ತದೆ ವಾಸ್ತವವಾಗಿ ಮರಗಳನ್ನು ಉಳಿಸುವ ಬದಲು ಉರುಳಿಸುವ ಕಾರ್ಯವೇ ಹೆಚ್ಚಾಗುತ್ತಿದೆ ಎನ್ನಬಹುದು.
ಇತ್ತಿಚಿನ ದಿನಗಳಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣನವರ ಮಾರ್ಗದರ್ಶನದಲ್ಲಿ ಪುತ್ರ ಆರ್.ರಾಜೇಂದ್ರ ತಾಲೂಕಿನಾದ್ಯಾಂತ ಸಾವಿರಾರು ಸಸಿಗಳನ್ನು ನೆಟ್ಟು ಪರಿಸರ ಸಮತೋಲನಕ್ಕೆ ಕಂಕಣ ಕಟ್ಟಿ ಕೆಲಸ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಆದರೆ ಇದೇ ಸಮಯದಲ್ಲಿ ಅದ್ಯಾರೊ ಮರ ಭಕ್ಷಕರು ಮರಗಳ ಕಡಿದು ಪರಿಸರ ನಾಶಮಾಡಲು ಹೊರಟಿರುವುದು ಒಂದು ವಿಪರ್ಯಾಸವಲ್ಲವೇ ಎಂಬುದು ಸಾರ್ವಜನಿಕರ ಆರೋಪವಾಗಿದೆ ಈಗಲಾದರೂ ಅರಣ್ಯ ಇಲಾಖೆಯವರು ಮೂರು ಹುಣಸೇ ಮರಗಳನ್ನ ಉಳಿಸುವರ ಅಥವಾ ಉರುಳಿಸುವರ ಎಂಬುದು ಕಾದು ನೋಡಬೇಕಿದೆ.