
ಕೊರಟಗೆರೆ : ಜನರು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ತಾಲೂಕಿನ ಕೋಳಾಲ ಹೋಬಳಿಯ ಹೋಸಕೋಟೆ ಗ್ರಾಮದಲ್ಲಿ ನೂತನ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ಬಾಗವಹಿಸಿ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಮನುಷ್ಯನು ತಂತ್ರಜ್ಞಾನದ ಕಡೆ ವೇಗವಾಗಿ ಸಾಗುತ್ತಿದ್ದು ಮಾನವತ್ವದಿಂದ ದೂರಾಗುತ್ತಾ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ, ಆದ್ದ ರಿಂದ ಎಲ್ಲಾ ವರ್ಗದ ಜನರು ಪೂಜಿಸುವ ಆಂಜನೇಯಸ್ವಾಮಿಯ ದೇವಾಲಯಗಳನ್ನು ಪ್ರತಿ ಗ್ರಾಮ ಮತ್ತು ಪಟ್ಟಣಗಳಲ್ಲಿ ಹೆಚ್ಚಾಗಿ ಪ್ರತಿಷ್ಠಾಪಿಸುತ್ತಿದ್ದಾರೆ, ರಾಮಾಯಣದಲ್ಲಿ ಶ್ರೀರಾಮರ ಬಗ್ಗೆ ಆಂಜನೇಯಸ್ವಾಮಿಗೆ ಇದ್ದ ಸ್ವಾಮಿನಿಷ್ಟೆ, ಭಕ್ತಿ, ಹಿಡಿದ ಕಾರ್ಯಸಾಧಿಸುವ ಛಲ, ಪರೋಪಕಾರ ಪ್ರಸ್ತುತ ಜನತೆಗೆ ಮಾರ್ಗದರ್ಶನವಾಗಿದೆ, ಆಂಜನೇಯಸ್ವಾಮಿ ಎಲ್ಲಾ ಜಾತಿಯವರು ಪೂಜಿಸುವ ಸಮಸ್ತ ಹಿಂದುಗಳ ದೇವರಾಗಿದ್ದು ಭಕ್ತಿ ಮತ್ತು ಶಕ್ತಿಗೆ ಜನರ ಆತ್ಮಸೈರ್ಯಕ್ಕೆ ಈ ದೇವರು ಪ್ರತಿಕವಾಗಿದ್ದಾರೆ ಎಂದರು.
ಸಾರ್ವಜನಿಕರು ಧಾರ್ಮಿಕ ಕೆಲಸಗಳಿಗೆ ಕೊಡುವ ಶ್ರದ್ದೆ, ಭಕ್ತಿಯನ್ನು ತಮ್ಮ ಮಕ್ಕಳ ವಿಧ್ಯಾಭ್ಯಾಸದ ಬಗ್ಗೆ ಕೊಡಬೇಕು, ಗ್ರಾಮದ ಪ್ರತಿ ಶಾಲೆಗಳನ್ನು ದೇವಾಲಯದ ಹಾಗೆ ಭಾವಿಸಿ ಸ್ವಚ್ಚವಾಗಿ ಇಟ್ಟುಕೊಂಡು ದಿನವೂ ವಿದ್ಯಾಭ್ಯಾಸವನ್ನು ಮಕ್ಕಳಿಗೆ ಮಾಡಿಸುವ ಕೆಲಸವನ್ನು ಶ್ರದ್ದೆಯಿಂದ ಜನರು ಮಾಡಿಬೇಕು, ಆಗ ಸಮಾಜದಲ್ಲಿ ಮನುಷ್ಯರ ಮಧ್ಯದಲ್ಲಿರುವ ಎಲ್ಲಾ ರೀತಿಯ ಅಂತರವು ಕಡಿಮೆಯಾಗುತ್ತದೆ, ದೇಶದ ಭದ್ರತೆಯ ಉತ್ತಮ ಅಡಿಪಾಯ ಶಿಕ್ಷಣದಿಂದ ಮಾತ್ರ ಸಾಧ್ಯ, ಧಾರ್ಮಿಕತೆ ಮತ್ತು ಶಿಕ್ಷಣ ಸಮಾನಾಂತರವಾಗಿ ಸಾಗಿದರೆ ಸ್ವಚ್ಚ ಸಮಾಜದ ಅಭಿವೃದ್ದಿಯೂ ಸಹ ತಾನಾಗಿಯೇ ಮುಂದುವರೆಯುತ್ತದೆ, ಗ್ರಾಮಗಳಲ್ಲಿ ಜಾತೀಯತೆ ಮತ್ತು ಮೇಲು ಕೀಳುಗಳ ಅಂತರವು ತೋಲಗಬೇಕಾದರೆ ಪ್ರತಿ ಮನುಷ್ಯರು ವಿದ್ಯಯೊಂದಿಗೆ ಜ್ಞಾನವಂತವನಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಶಾಸಕರು ತಣ್ಣೇನಹಳ್ಳಿ ಗ್ರಾಮಕ್ಕೂ ಬೇಟಿ ನೀಡಿ ಗ್ರಾಮಸ್ಥರ ಮನವಿ ಮೇರೆಗೆ ಶುದ್ದ ನೀರಿನ ಘಟಕ ಮತ್ತು ಸಿಸಿ ರಸ್ತೆಯನ್ನು ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಆಶ್ವತ್ಥನಾರಾಯಣ್, ಮುಖಂಡರುಗಳಾದ ದೊಡ್ಡಯ್ಯ, ದೇವರಾಜು, ತಣ್ಣೇನಹಳ್ಳಿಆನಂದ್, ಅನಂತರಾಜು, ವೆಂಕಟೇಶ್, ಬಿ.ಡಿ.ಪುರ ಆನಂದ್, ಕಾಮಣ್ಣ, ಕೆ.ಎಲ್.ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.